ಸಾರಾಂಶ
ಬಸವರಾಜ ನಂದಿಹಾಳ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿಕನ್ನಡ ಸಾಹಿತ್ಯ ತಾಯಿ ಬೇರಾಗಿರುವ ಜನಪದ ಸಾಹಿತ್ಯದಲ್ಲಿ ಜೀವನಕ್ಕೆ ಬೇಕಾದ ಸಂಸ್ಕಾರ, ಸಂಸ್ಕ್ರತಿ ಹಾಸುಹೊಕ್ಕಾಗಿದೆ. ಇಂತಹ ಜನಪದೀಯರು ಮಾಡಿಕೊಂಡು ಬರುತ್ತಿರುವ ಕೃಷಿ ಚಟುವಟಿಕೆಗೆ ಸಂಬಂಧಿಸಿದ ಹಂತಿ ಹಬ್ಬ ಸೇರಿದಂತೆ ಹಬ್ಬ-ಹರಿದಿನಗಳು ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಯುವಜನತೆಗೆ ಇದರ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಈ ದಿಸೆಯಲ್ಲಿ ತಾಲೂಕಿನ ನರಸಲಗಿ ಗ್ರಾಮದ ದೇವೇಂದ್ರ ಗೋನಾಳ ಅವರ ಹೊಲದಲ್ಲಿ ಫೆ.29 ರಂದು ಇಳೆಹೊತ್ತು 5 ಗಂಟೆಗೆ ಕನ್ನಡ ಜನಪದ ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ತಾಲೂಕು ಘಟಕದ ಆಶ್ರಯದಲ್ಲಿ ಇಂದಿನ ಯುವಜನತೆಗೆ ಅರಿವು ಮೂಢಿಸುವ ಉದ್ದೇಶದಿಂದ ನರಸಲಗಿ ಹಂತಿ ಹಬ್ಬದ ಸಂಭ್ರಮವನ್ನು ಹಮ್ಮಿಕೊಂಡಿದೆ. ಈ ಸಂಭ್ರಮಕ್ಕೆ ಅಗತ್ಯ ಸಿದ್ಧತೆ ಗ್ರಾಮದ ಹಿರಿಯರ ಮಾರ್ಗದರ್ಶನದಲ್ಲಿ ಭರದಿಂದ ನಡೆಯುತ್ತಿದೆ.
ಇಂದಿನ ಆಧುನಿಕ ಯುಗದಲ್ಲಿ ಬೆಳೆ ರಾಶಿ ಮಾಡಲು ಅನೇಕ ವಿಧ-ವಿಧವಾದ ಯಂತ್ರಗಳು ಲಗ್ಗೆ ಇಟ್ಟ ಪರಿಣಾಮ ಇಂದಿನ ಯುವಜನರಿಗೆ ಹಂತಿ ಹಬ್ಬದ ಪರಿಕಲ್ಪನೆ ಇಲ್ಲ. ಇದರಿಂದಾಗಿ ಜನಪದ ಸಾಹಿತ್ಯ ಪರಿಷತ್ತು ಮುಂದಡಿ ಇಟ್ಟಿರುವುದು ಶ್ಲಾಘನೀಯ ಸಂಗತಿ. ನಾಡಿನಲ್ಲಿ ಕನ್ನಡ ಜನಪದ ಸಾಹಿತ್ಯ ಪರಿಷತ್ತು ಜನಪದ ಸಾಹಿತ್ಯದ ಸಂರಕ್ಷಣೆಗಾಗಿ ಶ್ರಮಿಸುತ್ತಿದೆ.ಸುಗ್ಗಿಕಾಲ ಅಂದ್ರೆ ಸಾಕು ಹಳ್ಳಿಗಳಲ್ಲಿ ಹಬ್ಬದ ವಾತಾವರಣ ಸೃಷ್ಠಿಯಾಗುತ್ತಿತ್ತು. ಎಲ್ಲೆಡೆ ಹಂತಿ ಪದಗಳು ಕೇಳಿ ಬರುತ್ತಿದ್ದವು. ವರ್ಷವಿಡೀ ಕಷ್ಟಪಟ್ಟು ಬೆಳೆದಂತಹ ಬೆಳೆಯನ್ನು ವಾರಗಳ ಕಾಲ ರಾಶಿ ಮಾಡಿ ಧವಸ, ಧಾನ್ಯಗಳನ್ನು ತಂದು ತಮ್ಮ ಮನೆಯಲ್ಲಿ ಶೇಖರಣೆ ಮಾಡುತ್ತಿದ್ದರು. ಕಾಲ ಕಳೆದಂತೆ ಅದೆಲ್ಲವೂ ಕಡಿಮೆಯಾಗುತ್ತಿದೆ. ಆಧುನಿಕ ಯಂತ್ರಗಳ ಭರಾಟೆಯಲ್ಲಿ ಸುಗ್ಗಿಯ ಹಿಗ್ಗು ಮಾಯವಾಗುತ್ತಿದೆ. ರೈತರ ಕೆಲಸಗಳನ್ನು ಯಂತ್ರಗಳು ಕಸಿದುಕೊಂಡಿವೆ. ಇದರಿಂದಾಗಿ ರೈತಲು ಪರದಾಡುವಂತಾಗಿದೆ. ಯುವಪೀಳಿಗೆಗೆ ಹಂತಿ ಮಾಡುವ ಪದ್ಧತಿ, ಹಂತಿ ಪದಗಳನ್ನು ಪರಿಚಯಿಸುವ ಉದ್ದೇಶದಿಂದ ಫೆ.29 ರಂದು ಇಳೆಹೊತ್ತು 5 ಗಂಟೆಗೆ ಹಂತಿ ಸಂಭ್ರಮವನ್ನು ಕನ್ನಡ ಜನಪದ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದೆ. ಯುವ ಪೀಳಿಗೆಯು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹಂತಿ ಸಂಭ್ರಮದಲ್ಲಿ ಭಾಗವಹಿಸುವ ಮೂಲಕ ಹಂತಿ ಹೊಡೆಯುವದು, ಹಂತಿ ಪದಗಳನ್ನು ಕೇಳಬೇಕೆಂದು ಕನ್ನಡ ಜನಪದ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ, ತಾಲೂಕಾಧ್ಯಕ್ಷ ದೇವೇಂದ್ರ ಗೋನಾಳ ಹೇಳಿದರು.ಬಾಕ್ಸ್
ಹಂತಿ ಎಂದರೆ ರಾಶಿ ಮಾಡಲು ಎತ್ತುಗಳನ್ನು ಒಂದು ಕಂಬಕ್ಕೆ ಕಟ್ಟಿ ಸುತ್ತಲು ತಿರುಗಿಸುವ ಪದ್ಧತಿ. ಆಧುನಿಕ ಯಂತ್ರೋಪಕರಣಗಳ ಭರಾಟೆಯಲ್ಲಿ ಹಂತಿ ಹೊಡೆಯುವದು ನೈಪಥ್ಯಕ್ಕೆ ಸರಿಯುತ್ತಿದೆ. ಇದರ ಮಧ್ಯೆ ಹಂತಿ ಸಂಭ್ರಮವನ್ನು ಇಂದಿನ ಜನರಿಗೆ ತೋರಿಸುವ ಜೊತೆಗೆ ಅದನ್ನು ಉಳಿಸುವ ನಿಟ್ಟಿನಲ್ಲಿ ಇದಕ್ಕೆ ಬೇಕಾದ ಅಗತ್ಯ ಸಿದ್ಧತೆ ನರಲಸಗಿ ಗ್ರಾಮದಲ್ಲಿ ನಡೆಯುತ್ತಿದೆ.