ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆ ನಂತರ ಕೆರಗೋಡು ಗ್ರಾಮದ ಶ್ರೀಆಂಜನೇಯ ದೇಗುಲದ ಎದುರಿನ ರಂಗಮಂದಿರ ಆವರಣದಲ್ಲಿರುವ 108 ಅಡಿ ಎತ್ತರದ ಶ್ರೀಆಂಜನೇಯ ಅರ್ಜುನ ಧ್ವಜಸ್ತಂಭದಲ್ಲಿ ಹಾರಿಸಲಾದ ಹನುಮಧ್ವಜ ಈಗ ವಿವಾದವಾಗಿ ಮಾರ್ಪಟ್ಟಿದೆ.ಕಳೆದ ಜ.22ರಂದು ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಗ್ರಾಮದ ಯುವಕರು, ಹಿಂದೂ ಕಾರ್ಯಕರ್ತರು ಶ್ರೀರಾಮೋತ್ಸವವನ್ನು ಹಮ್ಮಿಕೊಂಡು ಎಲ್ಲೆಡೆ ಕೇಸರಿ ಬಾವುಟ ಹಾಕಿ ಧ್ವಜಸ್ತಂಭದಲ್ಲಿ ಹನುಮಧ್ವಜ ಹಾರಿಸಿ ಸಂಭ್ರಮಿಸಿದ್ದರು. ನಂತರ ಕಳೆದ ಒಂದು ವಾರದಿಂದ ಧ್ವಜಸ್ತಂಭದಲ್ಲಿ ಹನುಮನ ಧ್ವಜ ಹಾರಾಡುತ್ತಿತ್ತು.
ಧ್ವಜಸ್ತಂಭ ನಿರ್ಮಾಣಕ್ಕೆ ಗ್ರಾಪಂನಿಂದ ಅನುಮತಿ:ಗ್ರಾಮದ ಗೌರಿಶಂಕರ ಸೇವಾ ಟ್ರಸ್ಟ್ ವತಿಯಿಂದ ಧ್ವಜ ಸ್ತಂಭ ನಿರ್ಮಾಣಕ್ಕೆ ಸ್ಥಳೀಯ ಪಂಚಾಯ್ತಿಯಿಂದ ಅನುಮೋದನೆ ಪಡೆಯಲು ಅರ್ಜಿ ಸಲ್ಲಿಸಿತ್ತು. ಪಂಚಾಯ್ತಿ ಸಭೆ ಕರೆದು ಒಟ್ಟು 22 ಮಂದಿ ಸದಸ್ಯರ ಪೈಕಿ 20 ಮಂದಿ ಸದಸ್ಯರು ಹಾಜರಾಗಿ 17 ಮಂದಿ ಸದಸ್ಯರು ಧ್ವಜಸ್ತಂಭ ಸ್ಥಾಪನೆ ಪರ, ಇಬ್ಬರು ತಟಸ್ಥರಾಗಿ ಮತ್ತು ಮತ್ತೋರ್ವ ಸದಸ್ಯ ವಿರೋಧ ವ್ಯಕ್ತಪಡಿಸಿ ನಿರ್ಣಯ ಕೈಗೊಂಡರು. ಒಟ್ಟಾರೆ ಬಹುಮತದ ಆಧಾರದ ಮೇರೆಗೆ ಧ್ವಜ ಸ್ತಂಭ ಸ್ಥಾಪನೆಗೆ ಅನುಮೋದನೆ ನೀಡಲಾಗಿತ್ತು.
ಕಳೆದ ಜ.20ರಂದು ಗ್ರಾಮದಲ್ಲಿ ಸರಳ ಸಮಾರಂಭದಲ್ಲಿ ಧ್ವಜಸ್ತಂಭ ಉದ್ಘಾಟಿಸಿ ಆಂಜನೇಯಸ್ವಾಮಿ ಧ್ವಜವನ್ನು ಹಾರಿಸಲಾಯಿತು. ಕಳೆದ ಜ.26ರ ಗಣರಾಜ್ಯೋತ್ಸವದಂದು ಹನುಮಧ್ವಜವನ್ನು ಕೆಳಗಿಳಿಸಿ ರಾಷ್ಟ್ರಧ್ವಜಾರೋಹಣ ನೆರವೇರಿಸಲಾಗಿತ್ತು. ಸಂಜೆ ರಾಷ್ಟ್ರಧ್ವಜಾರೋಹಣ ತೆರವು ಮಾಡಿ ಮತ್ತೆ ಹನುಮಧ್ವಜವನ್ನು ಹಾರಿಸಲಾಯಿತು.ಇದನ್ನು ಸಹಿಸದ ಕೆಲವರು ಪಿತೂರಿ ನಡೆಸಿ ತಾಪಂ ಇಒಗೆ ದೂರು ನೀಡಿದ್ದಾರೆ. ದೂರಿನನ್ವಯ ಶನಿವಾರ ತಾಪಂ ಇಒ ವೀಣಾ ಸ್ಥಳ ಪರಿಶೀಲನೆ ನಡೆಸಿ ಧ್ವಜಸ್ತಂಭವನ್ನು ತೆರವುಗೊಳಿಸುವಂತೆ ಸೂಚನೆ ನೀಡಿದ್ದು ವಿವಾದವಾಗಿ ಮಾರ್ಪಟಿದೆ.
ಈ ವಿಷಯ ತಿಳಿದ ಗ್ರಾಮಸ್ಥರು ಕೆರಗೋಡು ಅಂಗಡಿಗಳನ್ನು ಬಂದ್ ಮಾಡಿ ಶನಿವಾರ ಪ್ರತಿಭಟನೆ ಮಾಡಿದ್ದರು.ನಂತರ ಭಾನುವಾರ ಮುಂಜಾನೆ 3 ಗಂಟೆ ಸಮಯದಲ್ಲಿ ತಾಪಂ ಇಒ ವೀಣಾ ಅಧಿಕಾರಿಗಳು ಹಾಗೂ ಪೊಲೀಸರೊಂದಿಗೆ ಆಗಮಿಸಿ ಹನುಮಧ್ವಜ ತೆರವಿಗೆ ಮುಂದಾದಾಗ ಘಟನೆ ವಿಕೋಪಕ್ಕೆ ತಿರುಗಿದೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಹಲವು ಗ್ರಾಮಸ್ಥರುಕೆರಗೋಡು ಗ್ರಾಮದಲ್ಲಿ ಧ್ವಜಸ್ತಂಭ ತೆರವು ಖಂಡಿಸಿ ಸುತ್ತಮುತ್ತಲ ಹಲವು ಗ್ರಾಮಗಳ ಯುವಕರು, ಮುಖಂಡರು ಪ್ರತಿಭಟನೆ ನಡೆಸಿದರು.ತಾಲೂಕಿನ ಅಂಕಣದೊಡ್ಡಿ, ತಾಳೆಮೇಳೆದೊಡ್ಡಿ, ಪಂಚೇಗೌಡನದೊಡ್ಡಿ, ಸಿದ್ದೇಗೌಡನದೊಡ್ಡಿ, ಮರಿಲಿಂಗನದೊಡ್ಡಿ, ಹೊಸೂರುಮುದ್ದನದೊಡ್ಡಿ, ಕೋಡಿದೊಡ್ಡಿ, ಮೋಳೆಕೊಪ್ಪಲು, ಮಾರಗೌಡನಹಳ್ಳಿ, ದ್ಯಾಪಸಂದ್ರ, ಕಲ್ಮಂಟಿದೊಡ್ಡಿ, ಹೊನ್ನನಾಯಕನಹಳ್ಳಿ, ಚಿಕ್ಕಬಾಣಸವಾಡಿ, ದೊಡ್ಡಬಾಣಸವಾಡಿ, ಅಂಕಣನದೊಡ್ಡಿ, ಬೊಕ್ಕೇಗೌಡನದೊಡ್ಡಿ ಗ್ರಾಮದ ಯುವಕರು ಮತ್ತು ಮುಖಂಡರು ಕೆರಗೋಡು ಗ್ರಾಮಕ್ಕೆ ಆಗಮಿಸಿ ಶಾಸಕ ಪಿ.ರವಿಕುಮಾರ್ ಹಾಗೂ ಜಿಲ್ಲಾಡಳಿತದ ವಿರುದ್ಧ ಧಿಕ್ಕಾರ ಕೂಗಿದರು.ಪೊಲೀಸ್ ಸರ್ಪಗಾವಲಿನಲ್ಲಿ ಹನುಮ ಧ್ವಜ ತೆರವುಕೆರಗೋಡು ಗ್ರಾಮದ 108 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಹಾರಿಸಲಾಗಿದ್ದ ಹನುಮ ಧ್ವಜವನ್ನು ಪೊಲೀಸ್ ಸರ್ಪಗಾವಲಿನಲ್ಲಿ ಅಧಿಕಾರಿಗಳು ತೆರವು ಮಾಡಿದರು.ಮುಂಜಾನೆಯೇ ಗ್ರಾಮಕ್ಕೆ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯ ತುಕಡಿಗಳು ಮತ್ತು ಹೆಚ್ಚಿನ ಪೊಲೀಸರೊಂದಿಗೆ ಎಎಸ್ಪಿ ತಿಮ್ಮಯ್ಯ ಹಾಗೂ ಉಪ ವಿಭಾಗಾಕಾರಿ ಶಿವಮೂರ್ತಿ ಸ್ಥಳಕ್ಕೆ ಆಗಮಿಸಿದರು. ಈ ವೇಳೆ ಧ್ವಜ ತೆರವು ಮಾಡಲು ಮುಂದಾದಾಗ ಗ್ರಾಮಸ್ಥರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.ಈ ವೇಳೆ ಲಘುಲಾಠಿ ಪ್ರಹಾರ ನಡೆಸಿ ಧ್ವಜ ಸ್ತಂಭದಿಂದ ಗ್ರಾಮಸ್ಥರು ಮತ್ತು ಯುವಜನರನ್ನು ಚದುರಿಸಿ ನಂತರ ಧ್ವಜವನ್ನು ಇಳಿಸಲಾಯಿತು. ಈ ವೇಳೆ ಕೆಲ ಕಾರ್‍ಯಕರ್ತರು ಮತ್ತು ಗ್ರಾಮಸ್ಥರಿಗೆ ರಕ್ತ ಸುರಿದು ಗಾಯಗಳಾದವು.ಈ ವೇಳೆ ಮಹಿಳೆಯರು ಬಾಯಿ ಬಡಿದುಕೊಂಡು ಕಣ್ಣೀರು ಹಾಕಿದರು. ಕೆಲವರು ಪೊಲೀಸರು ಮತ್ತು ಅಧಿಕಾರಿಗಳತ್ತ ಮಣ್ಣು ತೂರಿ ಹಿಡಿಶಾಪ ಹಾಕಿದರು. ಈ ವೇಳೆ ಧ್ವಜವನ್ನು ಪೊಲೀಸರೇ ಕೊಂಡೊಯ್ಯಲು ಯತ್ನಿಸಿದರು. ಆದರೆ, ಧ್ವಜವನ್ನು ನಮಗೇ ಕೊಡುವಂತೆ ಗ್ರಾಮಸ್ಥರು ಪಟ್ಟು ಹಿಡಿದರು. ನಂತರ ಅದನ್ನು ಗ್ರಾಮಸ್ಥರ ವಶಕ್ಕೆ ಒಪ್ಪಿಸಿದರು.ಪೊಲೀಸರು ಮತ್ತು ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿ ಗ್ರಾಮಸ್ಥರು ಮತ್ತು ವ್ಯಾಪಾರಿಗಳು ಕೆರಗೋಡು ಬಂದ್ ಮಾಡಿದ್ದಾರೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಜಿಲ್ಲಾ ಪೊಲೀಸ್ ಅಕ್ಷಕ ಸಮಕ್ಷಮದಲ್ಲಿ ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜವನ್ನು ಮಧ್ಯಾಹ್ನದ ವೇಳೆ ಹಾರಿಸಲಾಯಿತು.ಧ್ವಜ ಹಾರಿಸಿದ ಮಹಿಳೆಯರುಧ್ವಜಸ್ತಂಭದ ಸುತ್ತ ಸುತ್ತುವರಿದ ಗ್ರಾಮಸ್ಥರು ಸ್ತಂಭಕ್ಕೆ ಶ್ರೀರಾಮನ ಭಾವಚಿತ್ರವನ್ನು ಅಳವಡಿಸಿದರು. ಅದರ ಮೇಲೆ ಹನುಮಧ್ವಜವನ್ನು ಹಾರಿಸಲು ಯತ್ನಿಸಿದರು. ಅದನ್ನು ಕಿತ್ತುಕೊಂಡ ಪೊಲೀಸರು ದೂರಕ್ಕೆ ಕೊಂಡೊಯ್ದು, ಶ್ರೀರಾಮನ ಭಾವಚಿತ್ರವನ್ನು ಹರಿದುಹಾಕಿದರು. ಮತ್ತೊಂದು ಶ್ರೀರಾಮನ ಭಾವಚಿತ್ರವನ್ನು ತಂದು ಧ್ವಜಸ್ತಂಭಕ್ಕೆ ಮಹಿಳೆಯರೇ ಕಟ್ಟಿ, ಅದರ ಮೇಲೆ ಕೇಸರಿ ಧ್ವಜವನ್ನು ಹಾರಿಸಿ, ಘೋಷಣೆ ಕೂಗಿದರು.ಧ್ವಜ ತೆಗೆದವರ ಮನೆ ಹಾಳಾಗಲಿಬಾವುಟ ಇಳಿಸಿದವರ ಮನೆ ಹಾಳಾಗಲಿ. ಹೆಂಗಸರೇ ಹಿಂದೂ ಬಾವುಟದ ಪರವಾಗಿ ಇದ್ದಾರೆ ಎಂದು ಅಧಿಕಾರಿಗಳು ಶಾಸಕರಿಗೆ ಸ್ಥಳದಲ್ಲಿದ್ದ ಜನರು ಹಿಡಿ ಶಾಪ ಹಾಕುತ್ತಿದ್ದ ದೃಶ್ಯ ಕಂಡು ಬಂತು. ಶಾಸಕ ಪಿ.ರವಿಕುಮಾರ್ ವಿರುದ್ಧ ಘೋಷಣೆ ಕೂಗಿ ಭಾವಚಿತ್ರಕ್ಕೆ ಚಪ್ಪಲಿಸೇವೆ ಮಾಡಿದ ಘಟನೆಯು ನಡೆಯಿತು.