ಸಾರಾಂಶ
ಯಾರೂ ಪ್ರಶ್ನೆ ಮಾಡದಿದ್ದಾಗ ವಿವಾದಗಳು ಉದ್ಭವಿಸುವುದಿಲ್ಲ. ಪ್ರಶ್ನೆ ಮಾಡಿದಾಗ ವಿವಾದದ ರೂಪ ಪಡೆಯುತ್ತವೆ. ಹಾಲಿ ಕೆರಗೋಡಿನಲ್ಲಿ ನಿರ್ಮಿಸಿರುವ ಧ್ವಜಸ್ತಂಭದಲ್ಲಿ ಹನುಮಧ್ವಜ ಹಾರಿಸಲು ಕಾನೂನಾತ್ಮಕವಾಗಿ ಅವಕಾಶವಿಲ್ಲ. ಅದಕ್ಕಾಗಿ ಖಾಸಗಿ ಜಾಗದಲ್ಲಿ, ವಿವಾದವಿಲ್ಲದಂತೆ, ಊರಿನ ಜನರೆಲ್ಲರೂ ಒಪ್ಪುವಂತಹ ಜಾಗದಲ್ಲಿ ಧ್ವಜಸ್ತಂಭ ನಿರ್ಮಿಸಿ ಹನುಮಧ್ವಜವನ್ನು ನಾನೇ ಹಾರಿಸುತ್ತೇನೆ.
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಕೆರಗೋಡು ಗ್ರಾಮದಲ್ಲಿ ಖಾಸಗಿ ಸ್ಥಳವೊಂದನ್ನು ಗುರುತಿಸಿ 101 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಹನುಮ ಧ್ವಜ ಹಾರಿಸಲು ಅವಕಾಶ ಮಾಡಿಕೊಡುತ್ತೇನೆ ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು.ಯಾರೂ ಪ್ರಶ್ನೆ ಮಾಡದಿದ್ದಾಗ ವಿವಾದಗಳು ಉದ್ಭವಿಸುವುದಿಲ್ಲ. ಪ್ರಶ್ನೆ ಮಾಡಿದಾಗ ವಿವಾದದ ರೂಪ ಪಡೆಯುತ್ತವೆ. ಹಾಲಿ ಕೆರಗೋಡಿನಲ್ಲಿ ನಿರ್ಮಿಸಿರುವ ಧ್ವಜಸ್ತಂಭದಲ್ಲಿ ಹನುಮಧ್ವಜ ಹಾರಿಸಲು ಕಾನೂನಾತ್ಮಕವಾಗಿ ಅವಕಾಶವಿಲ್ಲ. ಅದಕ್ಕಾಗಿ ಖಾಸಗಿ ಜಾಗದಲ್ಲಿ, ವಿವಾದವಿಲ್ಲದಂತೆ, ಊರಿನ ಜನರೆಲ್ಲರೂ ಒಪ್ಪುವಂತಹ ಜಾಗದಲ್ಲಿ ಧ್ವಜಸ್ತಂಭ ನಿರ್ಮಿಸಿ ಹನುಮಧ್ವಜವನ್ನು ನಾನೇ ಹಾರಿಸುತ್ತೇನೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಶ್ರೀರಾಮ, ಸೀತೆ, ಆಂಜನೇಯ ಎಲ್ಲರೂ ನಮ್ಮವರೇ. ನಾವೂ ರಾಮಭಕ್ತರೇ. ಎಲ್ಲ ದೇವರನ್ನೂ ಪೂಜಿಸುವ ದೈವಭಕ್ತರಾಗಿದ್ದೇವೆ. ನಮಗೆ ಅಭಿವೃದ್ಧಿ ಮುಖ್ಯವಾಗಿರುವಂತೆ ಊರಿನಲ್ಲಿ ಶಾಂತಿ ನೆಲೆಸುವುದೂ ಅಷ್ಟೇ ಮುಖ್ಯವಾಗಿದೆ. ವಿನಾಕಾರಣ ಶಾಂತಿ ಕದಡುವುದು ಬೇಡ ಎಂದು ಮನವಿ ಮಾಡಿದರು.ಕೆರಗೋಡು ಹಾಗೂ ಸುತ್ತಮುತ್ತಲಿನ ದೇವಾಲಯಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿದ್ದೇನೆ. ಕೆರಗೋಡು ಗ್ರಾಮದ ಅಭಿವೃದ್ಧಿಗೆ 10 ಕೋಟಿ ರು. ಮಂಜೂರು ಮಾಡಿಸಿದ್ದೇನೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳೆಲ್ಲವೂ ವೇಗ ಪಡೆದುಕೊಳ್ಳಲಿವೆ ಎಂದು ವಿಶ್ವಾಸದಿಂದ ನುಡಿದರು.