ಸಾರಾಂಶ
ಹನುಮಮಾಲೆ ವಿಸರ್ಜನೆ ಮಾಡಲು ಬರುವ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ಸಂಚಾರಕ್ಕೆ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಭದ್ರತೆಗೆ 150ಕ್ಕೂ ಅಧಿಕ ಪೊಲೀಸರು ನಿಯೋಜನೆಗೊಂಡಿದ್ದು, ವಾಹನಗಳ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಗಂಗಾವತಿ:
ಹನುಮ ಜಯಂತಿಗೆ ಆಂದಿನಾದ್ರಿಯಲ್ಲಿ ಬೆಟ್ಟದಲ್ಲಿ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಶನಿವಾರ 20 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ದೇವಸ್ಥಾನ ಸಮಿತಿ ಸಿಇಒ ಪ್ರಕಾಶ, ಹನುಮಮಾಲೆ ವಿಸರ್ಜನೆ ಮಾಡಲು ಬರುವ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ಸಂಚಾರಕ್ಕೆ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಭದ್ರತೆಗೆ 150ಕ್ಕೂ ಅಧಿಕ ಪೊಲೀಸರು ನಿಯೋಜನೆಗೊಂಡಿದ್ದು, ವಾಹನಗಳ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಹನುಮ ಜಯಂತಿ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತಲು ವಿಶೇಷ ಹೂವಿನಿಂದ ಅಲಂಕಾರ, ದೀಪಾಲಂಕಾರ ಮಾಡಲಾಗಿದೆ. ಬೆಳಗ್ಗೆ 5 ಗಂಟೆಯಿಂದ ವಿಶೇಷ ಪೂಜೆ ನಡೆಯಲಿದ್ದು, ಪವಮಾನ ಹೋಮ ಜರುಗಲಿದೆ. ಭಕ್ತರಿಗೆ ಬೆಟ್ಟದ ಮೇಲೆ ಪ್ರಸಾದಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಶುಕ್ರವಾರದಿಂದಲೇ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.ಮಾಲಾಧಾರಿಗಳಿಗೆ ಮೂಲಭೂತ ಸೌಕರ್ಯ:
ಅಂಜನಾದ್ರಿ ಬೆಟ್ಟಕ್ಕೆ ಬರುವ ಹನುಮಮಾಲಾಧಾರಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ ಎಂದು ಶಾಸಕ ಜನರ್ದಾನ ರೆಡ್ಡಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಸುಸಜ್ಜಿತ ಸ್ನಾನ ಘಟ್ಟ, ಪ್ರಸಾದ ವ್ಯವಸ್ಥೆಗೆ ಆದ್ಯತೆ ನೀಡಲಾಗಿದೆ. ಬೆಟ್ಟ ಏರುವ ಮತ್ತು ಇಳಿಯುವ ಭಕ್ತರಿಗೆ ಗೊಂದಲವಾಗದಂತೆ ಏಕಮುಖ ಮಾರ್ಗದ ವ್ಯವಸ್ಥೆ ಕಲ್ಪಿಸಲಾಗಿದೆ. ವಿಶ್ರಾಂತಿ ಮತ್ತು ಸುರಕ್ಷತೆಗಾಗಿ ಭಕ್ತರಿಗೆ ಸೂಕ್ತ ಸ್ಥಳ, ಕುಡಿಯುವ ನೀರಿನ ವ್ಯವಸ್ಥೆ, ಪಾರ್ಕಿಂಗ್ ಮತ್ತು ಮಾರ್ಗದರ್ಶನ ನೀಡಲು ತಂಡ ನಿಯೋಜಿಸಲಾಗಿದೆ ಎಂದಿರುವ ಅವರು, ಭಕ್ತರು ಶಾಂತ ಚಿತ್ತದಿಂದ, ಭಕ್ತಿ-ಭಾವದಿಂದ ಹನುಮಾನ ದರ್ಶನ ಪಡೆಯಬೇಕೆಂದು ಮನವಿ ಮಾಡಿದ್ದಾರೆ.