ಹುಬ್ಬಳ್ಳಿ:

ನಗರದ ಎಲ್ಲ ಹನುಮಾನ ದೇವಸ್ಥಾನಗಳಲ್ಲಿ ಗುರುವಾರ ಹನುಮ ಜಯಂತಿಯನ್ನು ಅತ್ಯಂತ ಸಡಗರ, ಸಂಭ್ರಮ ಹಾಗೂ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.

ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ತೊಟ್ಟಿಲೋತ್ಸವ, ಪ್ರಸಾದ ವಿತರಣೆ ನಡೆದವು. ನಾಗಶೆಟ್ಟಿಕೊಪ್ಪದ ಹನುಮಾನ ದೇವಸ್ಥಾನದಲ್ಲಿ ಸಂಜೆ ಅದ್ಧೂರಿ ರಥೋತ್ಸವ ನೆರವೇರಿತು.

ನಗರದ ಹೊರವಲಯದಲ್ಲಿರುವ ಧಾರಾವತಿಯ ಹನುಮಾನ್‌ ದೇವಸ್ಥಾನ, ಕುಸುಗಲ್ಲಿನ ಮಾರುತಿ ದೇವಸ್ಥಾನ, ದೇಶಪಾಂಡೆ ನಗರದ ಹನುಮಾನ್‌ ದೇವಸ್ಥಾನ, ನಿಲಿಜನ್‌ ರಸ್ತೆಯ ಹನುಮಂತ ದೇವಸ್ಥಾನ, ಕೇಶ್ವಾಪುರದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ, ನಾಗಶೆಟ್ಟಿಕೊಪ್ಪ ಹನುಮಂತ ದೇವರ ದೇವಸ್ಥಾನ, ನವನಗರ ಮುಖ್ಯ ರಸ್ತೆಯ ಮಾರುತಿ ದೇವಸ್ಥಾನ, ಪ್ರಜಾನಗರದ ವಿಜಯಾಂಜನೇಯ ದೇವಸ್ಥಾನದಲ್ಲಿ, ಭೈರಿದೇವರಕೊಪ್ಪದ ಶಿವಾನಂದ ಮಠದ ರಥೋತ್ಸವ ನಡೆಯಿತು. ಗೋಪನಕೊಪ್ಪದ ಹನುಮಂತ ದೇವಸ್ಥಾನದಲ್ಲಿ ಹನುಮ ಜಯಂತಿ ಅಂಗವಾಗಿ ಅದ್ಧೂರಿ ರಥೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.

ಬೆಳಗ್ಗೆಯೇ ಹನುಮನ ಮೂರ್ತಿಗೆ ಎಲೆ, ಕುಂಕುಮ, ಬುತ್ತಿ, ಬಾಳೆ ಹಣ್ಣು ಹಾಗೂ ವಿಶೇಷ ಅಲಂಕಾರ ಪೂಜೆ ಮಾಡಲಾಗಿತ್ತು. ಅಭಿಷೇಕ, ಹೋಮ-ಹವನ, ಮಹಾಮಂಗಳಾರತಿ, ತೊಟ್ಟಿಲೋತ್ಸವ, ಶ್ರೀರಾಮನ ಭಜನೆ, ಹನುಮಾನ್‌ ಚಾಲೀಸ್‌ ಪಠಣ, ಪ್ರಸಾದ ವಿತರಣೆ, ಕೋಸಂಬರಿ ಪಾನಕ ಹಾಗೂ ಮಧ್ಯಾಹ್ನ ಅನ್ನ ಸಂತರ್ಪಣೆ ನೆರವೇರಿತು.


ದೋಸೆ, ಇಡ್ಲಿ ವಿತರಣೆ

ಗದಗ ರಸ್ತೆಯ ಒಂಟಿ ಹನುಮಪ್ಪನ ಗುಡಿಯಲ್ಲಿ ಹನುಮ ಜಯಂತಿ ಅಂಗವಾಗಿ ಅಲಂಕಾರ ಪೂಜೆ ಹಾಗೂ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಹೊಟೇಲ್‌ ಉದ್ಯಮಿ ಉದಯರಾಮಾ ನಾಯಕ ಅವರು ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಭಾಗವಾಗಿ 5000 ದೋಸೆ ಉಚಿತವಾಗಿ ವಿತರಿಸಿದರು. ಹಳೇ ಹುಬ್ಬಳ್ಳಿಯ ಕಸಬಾಪೇಟೆಯ ಶ್ರೀಮುದಿ ಮಾರುತಿ ದೇವಸ್ಥಾನದಲ್ಲಿ ಸಾವಿರಾರು ಭಕ್ತರಿಗೆ ಇಡ್ಲಿ ವಿತರಿಸಲಾಯಿತು.