ಧಾರವಾಡದಲ್ಲಿ ಸಂಭ್ರಮದಿಂದ ಹನುಮ ಜಯಂತಿ ಆಚರಣೆ

| Published : Apr 13 2025, 02:04 AM IST

ಸಾರಾಂಶ

ದವನದ ಹುಣ್ಣಿಮೆ ಅಂಗವಾಗಿ ಈ ವರ್ಷವೂ ಹುಬ್ಬಳ್ಳಿ-ಧಾರವಾಡ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಶನಿವಾರ ಹನುಮ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಧಾರವಾಡ: ದವನದ ಹುಣ್ಣಿಮೆ ಅಂಗವಾಗಿ ಈ ವರ್ಷವೂ ಹುಬ್ಬಳ್ಳಿ-ಧಾರವಾಡ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಶನಿವಾರ ಹನುಮ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಪ್ರಾತಃಕಾಲ ವಿವಿಧಡೆ ಅರ್ಚಕರಿಂದ ಆಂಜನೇಯ ದೇವರಿಗೆ ರುದ್ರಾಭಿಷೇಕ, ಕುಂಕುಮಾರ್ಚನೆ, ತುಪ್ಪದ ಲೇಪನ, ಬೆಳ್ಳಿ ಲೇಪನ, ಸುಗಂಧ ಲೇಪನದ ಜೊತೆಗೆ ವಿವಿಧ ಪುಷ್ಪಾಲಂಕಾರಿಕದ ಪೂಜೆಗಳು ಹಾಗೂ ಪುನಸ್ಕಾರಗಳು ನಡೆದವು.

ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಹನುಮ, ಮಾರುತಿ, ಆಂಜನೇಯ ವಿವಿಧ ದೇವಸ್ಥಾನದಲ್ಲಿ ಬೆಳಗ್ಗೆ ಹನುಮ ದೇವರಿಗೆ ಅಭಿಷೇಕ, ಅಲಂಕಾರ, ಬಿಲ್ವಾರ್ಚಾನೆ, ನಾಮಕರಣದ ಜೊತೆಗೆ ಬಾಲ ಹನುಮನ ತೊಟ್ಟಲೋತ್ಸವ ಜರುಗಿತು.

ಧಾರವಾಡದ ಲೈನ್ ಬಜಾರ್, ನುಗ್ಗಿಕೇರಿ, ಶಾಂತಿನಿಕೇತನ ನಗರ ಮತ್ತು ವೀರಭದ್ರೇಶ್ವರ ಓಣಿ, ಯಾದವಾಡ, ಅಮ್ಮಿನಬಾವಿ ಒಳಗೊಂಡು ವಿವಿಧಡೆ ಆಂಜನೇಯ ದೇವರ ರಥೋತ್ಸವ ಸಾವಿರಾರು ಭಕ್ತರೊಂದಿಗೆ ಅತ್ಯಂತ ಸಂಭ್ರಮ ಸಡಗರದಿಂದ ನಡೆಯಿತು.

ಬೆಂಜೋ ಮೇಳ, ಯುವಕರ ಜಗ್ಗಲಿಗೆ ಮೇಳ, ಯುವತಿಯರ ಡೊಳ್ಳು ಕುಣಿತ, ಕರಡಿ ಮಜಲು, ಝಾಂಜ್ ಮೇಳ, ಕರಾವಳಿ ಚೆಂಡೆ ವಾದ್ಯ ಸೇರಿದಂತೆ ಇತ್ಯಾದಿ ವಾದ್ಯಮೇಳ ಹನುಮ ದೇವರ ರಥೋತ್ಸವಕ್ಕೆ ಮೆರಗು ತುಂಬಿದವು.

ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡ ಭಕ್ತಗಣದ ಹರ್ಷೋದ್ಘಾರಕ್ಕೆ ಪಾರವೇ ಇರಲಿಲ್ಲ. ಅಲ್ಲದೇ ಶ್ರದ್ಧಾ ಭಕ್ತಿಯಿಂದ ಶ್ರೀರಥಕ್ಕೆ ಉತ್ತತ್ತಿ, ಬಾಳೆಹಣ್ಣು ಮತ್ತು ಲಿಂಬೆಹಣ್ಣು ಸಮರ್ಪಿಸುವ ಮೂಲಕ ಇಷ್ಟಾರ್ಥಗಳ ಈಡೇರಿಕೆಗೆ ಸಂಕಲ್ಪ ಮಾಡಿದರು.

ನಗರದ ಸಾರಸ್ವತಪುರದ ಬಾಲ ಮಾರುತಿ ದೇವಸ್ಥಾನದಲ್ಲಿ ಹನುಮ ಜಯಂತಿ ಅಂಗವಾಗಿ ಕುಂಭ ಮೆರವಣಿಗೆ ಹಾಗೂ ಪಲ್ಲಕ್ಕಿ ಉತ್ಸವ ಶನಿವಾರ ಅತ್ಯಂತ ವಿಜೃಂಬಣೆಯಿಂದ ಜರುಗಿತು.

ಬೆಳಗ್ಗೆ ಮಾರುತಿ ದೇವರ ಮೂರ್ತಿಗೆ ವಿವಿಧ ಅಭಿಷೇಕ, ವಿಶೇಷ ಹೂವಿನ ಅಲಂಕಾರ, ಬೆಳ್ಳಿ ಆಭರಣ ಧಾರಣೆ ಜೊತೆಗೆ ಸತ್ಯನಾರಾಯಣ ಸ್ವಾಮಿ ಪೂಜಾ ಕಾರ್ಯವೂ ನೆರವೇರಿತು.

ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಹನುಮ ಜಯಂತಿ ಅಂಗವಾಗಿ ವೀರಾಂಜನೇಯ ಸ್ವಾಮಿಯ ಅಲಂಕೃತ ಭಾವಚಿತ್ರದ ಭವ್ಯ ಮೆರವಣಿಗೆ ಶನಿವಾರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅತ್ಯಂತ ವಿಶಿಷ್ಟವಾಗಿ ಜರುಗಿತು.

ಸತ್ತೂರಿನ ನಾರಾಯಣ ಪಾರಾಯಣ ಬಳಗದ ವತಿಯಿಂದ ಉದಯನಗರದ ಡಿ.ಕೆ. ಜೋಶಿ ಅವರ ನಿವಾಸ ಹಾಗೂ ಐಸ್ ಗೇಟ್ ಬಳಿಯ ದಾಮೋದರ್ ಬಿಲ್ಡಿಂಗ್ ಹನುಮ ದೇವಾಲಯದಲ್ಲಿ ಶನಿವಾರ ಹನುಮ ಜಯಂತಿ ತೋಟ್ಟಿಲೋತ್ಸವ ಮಹಿಳೆಯರಿಂದ ಜರುಗಿತು.

ರಘೋತ್ತಮ ಅವಧಾನಿ, ಸಂಜೀವ ಗೋಳಸಂಗಿ, ಡಾ. ಶ್ರೀನಾಥ, ಡಾ. ರವಿ ದುಮ್ಮವಾಡ, ವೆಂಕಟೇಶ ಕುಲಕರ್ಣಿ, ಹನುಮಂತ ಪುರಾಣಿಕ, ಕೇಶವ ಕುಲಕರ್ಣಿ ಸೇರಿದಂತೆ ಅನೇಕರು ಇದ್ದರು.