ಅಂಜನಾದ್ರಿಯಲ್ಲಿ ಹನುಮ ಜಯಂತಿ ಆಚರಣೆ

| Published : Apr 24 2024, 02:16 AM IST

ಸಾರಾಂಶ

ತಾಲೂಕಿನ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದ ಆಂಜನೇಯಸ್ವಾಮಿ ದೇಗುಲದಲ್ಲಿ ಶ್ರದ್ಧಾಭಕ್ತಿಯಿಂದ ಹನುಮ ಜಯಂತಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಗಂಗಾವತಿ

ತಾಲೂಕಿನ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದ ಆಂಜನೇಯಸ್ವಾಮಿ ದೇಗುಲದಲ್ಲಿ ಶ್ರದ್ಧಾಭಕ್ತಿಯಿಂದ ಹನುಮ ಜಯಂತಿ ಆಚರಿಸಲಾಯಿತು.

ಬೆಳಗ್ಗೆ 4 ಗಂಟೆಯಿಂದಲೇ ಅಂಜನಾದ್ರಿ ಬೆಟ್ಟ ಏರಿದ ಭಕ್ತರು ಜೈ ಶ್ರೀರಾಮ, ಜೈ ಆಂಜನೇಯಸ್ವಾಮಿ ಎಂದು ಜೈಕಾರ ಹಾಕಿದರು. ಈ ಸಂದರ್ಭದಲ್ಲಿ ಆಂಜನೇಯಸ್ವಾಮಿಗೆ ವಿಶೇಷ ಎಲೆ ಅಲಂಕಾರ, ಹೂವಿನ ಅಲಂಕಾರ, ಹೋಮ, ಹವನ ಸೇರಿದಂತೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಹನುಮಮಾಲೆ ವಿಸರ್ಜಿಸಿದ ಸಚಿವ ತಂಗಡಗಿ:

ಐದು ದಿನದ ಹಿಂದೆ ಹನುಮ ಮಾಲೆ ಧರಿಸಿದ್ದ ಜಿಲ್ಲಾ ಉಸ್ತುವಾರಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಬೆಳಗ್ಗೆ ತಮ್ಮ ಬೆಂಬಲಿಗರೊಂದಿಗೆ ಅಂಜನಾದ್ರಿಗೆ ತೆರಳಿ ಹನುಮ ಮಾಲೆ ವಿಸರ್ಜಿಸಿದರು. ಪವಮಾನ ಹೋಮಕ್ಕೆ ವಿಶೇಷ ಪೂಜೆ ಸಲ್ಲಿಸಿದರು.

ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು ಹನುಮಮಾಲೆ ವಿಸರ್ಜನೆ ಮಾಡಿದರು. ಅಲ್ಲದೇ ಬೇರೆ ಬೇರೆ ಸ್ಥಳಗಳಿಂದ ಆಗಮಿಸಿದ್ದ ಭಕ್ತರು ಪಾದಯಾತ್ರೆ ಮೂಲಕ ಭಕ್ತಿ ಸಮರ್ಪಿಸಿದರು. ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು. ಸುಮಾರು 20 ಸಾವಿರಕ್ಕೂ ಅಧಿಕ ಭಕ್ತರು ಭೇಟಿ ನೀಡಿ ಆಂಜನೇಯನ ದರ್ಶನ ಪಡೆದುಕೊಂಡರು.

ಭೋಗಾಪುರೇಶ ದೇಗುಲದಲ್ಲಿ:

ಸಮೀಪದ ನವಲಿ ಗ್ರಾಮದ ಭೋಗಾಪುರೇಶ ದೇವಸ್ಥಾನದಲ್ಲಿ ಹನುಮ ಜಯಂತಿ ಆಚರಿಸಲಾಯಿತು. ಬೆಳಗ್ಗೆ ಭೋಗಾಪುರೇಶ ಸ್ವಾಮಿಗೆ ಪಂಚಾಮೃತಾಭಿಷೇಕ, ಹೂವಿನ ಅಲಂಕಾರ ಮತ್ತು ಮಳೆ ಮತ್ತು ಲೋಕ ಕಲ್ಯಾಣಾರ್ಥವಾಗಿ ಹೋಮ ಹವನ ನಡೆಸಲಾಯಿತು.

ಈ ಸಂದರ್ಭದಲ್ಲಿ ಅರ್ಚಕರಾದ ಶ್ರೀನಿವಾಸಚಾರ ಪ್ರಹ್ಲಾದಚಾರ ನವಲಿ, ಶ್ರೀನಾಥ ಆಚಾರ, ಲಕ್ಷ್ಮೀಕಾಂತ ಆಚಾರ ಹುಲಿಹೈದರ್, ವಿಠಲಚಾರ ಹುಲಿಹೈದರ್, ಬಂಡೇರಾವ ಮುಖ್ತೆದಾರ, ನಾರಾಯಣರಾವ ಕುಲಕರ್ಣಿ, ಪವನ ಗುಂಡೂರು, ನಾರಾಯಣರಾವ ಕುಲಕರ್ಣಿ, ಬದರಿನಾಥಚಾರ ಜೋಶಿ ಆದಾಪುರ, ಸುಧೀಂದ್ರರಾವ ಕುಲಕರ್ಣಿ, ಸತೀಶ ದಂಡಿನ್, ವೆಂಕಟೇಶ ಪೂರೋಹಿತ ಕಿನ್ನಾಳ, ಪುರುಷೋತ್ತಮಚಾರ ನವಲಿ, ಗೋಪಾಲ್ ಪುರಾಣಿಕ್ ಮತ್ತು ಗಂಗಾವತಿ ವಿಜಯಧ್ವಜ ವಿದ್ಯಾಪೀಠದ ಪಂಡಿತರು ಸೇರಿದಂತೆ ಇತರರು ಭಾಗವಹಿಸಿದ್ದರು.