ಸಾರಾಂಶ
ಹುಬ್ಬಳ್ಳಿ: ನಗರದ ವಿವಿಧ ಬಡಾವಣೆಗಳಲ್ಲಿರುವ ಎಲ್ಲ ಹನುಮಾನ ದೇವಸ್ಥಾನಗಳಲ್ಲಿ ಹನುಮಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ವಿಶೇಷ ಪೂಜೆ, ತೊಟ್ಟಿಲೋತ್ಸವ, ಪ್ರಸಾದ ವಿತರಣೆ ನಡೆದವು. ನಾಗಶೆಟ್ಟಿಕೊಪ್ಪದ ಹನುಮಾನ ದೇವಸ್ಥಾನದಲ್ಲಿ ಸಂಜೆ ವೇಳೆಗೆ ಅದ್ಧೂರಿ ರಥೋತ್ಸವ ನಡೆಯಿತು.
ಹನುಮಾನ ದೇವಸ್ಥಾನದ ಆವರಣದ ಬೀದಿಗಳಲ್ಲಿ ಕೇಸರಿ ಧ್ವಜ, ಕೇಸರಿ ಪರಪರಿ ಸಾಲು, ಹೂವು, ತಳಿರು-ತೋರಣ, ವಿದ್ಯುದ್ದೀಪಾಲಂಕಾರ ಮಾಡಲಾಗಿತ್ತು.ನಾಗಶೆಟ್ಟಿಕೊಪ್ಪದ ಹನುಮಂತ ದೇವರ ದೇವಸ್ಥಾನದಲ್ಲಿ ಭಕ್ತರು ದೀರ್ಘ ದಂಡ ನಮಸ್ಕಾರ ಹಾಕಿ ಹರಕೆ ತೀರಿಸಿದರು. ಸಂಜೆ ನೂರಾರು ಭಕ್ತರ ಸಮ್ಮುಖದಲ್ಲಿ ಭಕ್ತಿಭಾವದೊಂದಿಗೆ ರಥೋತ್ಸವ ನಡೆಯಿತು. ರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ರಥಕ್ಕೆ ನಿಂಬೆಹಣ್ಣು, ಉತ್ತತ್ತಿ, ಬಾಳೆ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಜೈ ಶ್ರೀರಾಮ, ಜೈ ಜೈ ಶ್ರೀರಾಮ, ಹನುಮಾನ ಮಹಾರಾಜಕೀ ಜೈ ಎಂದು ಘೋಷಣೆ ಕೂಗುತ್ತ ಭಕ್ತರು ರಥ ಎಳೆದರು.
ಹಳೇಹುಬ್ಬಳ್ಳಿಯ ದಿಡ್ಡಿ ಹನುಮಪ್ಪ ದೇವಸ್ಥಾನ, ಗದಗ ರಸ್ತೆಯ ಒಂಟಿ ಹನುಮಪ್ಪ ದೇವಸ್ಥಾನ, ಲೋಕಪ್ಪನಹಕ್ಕಲದ ಆಂಜನೇಯ ದೇವಸ್ಥಾನ, ಮರಾಠಾ ಗಲ್ಲಿಯ ಹನುಮಾನ ದೇವಸ್ಥಾನ, ಗೋಪನಕೊಪ್ಪದ ಆಂಜನೇಯ ದೇವಸ್ಥಾನ, ಬೊಮ್ಮಾಪುರ ಓಣಿಯ ಆಂಜನೇಯ ದೇವಸ್ಥಾನ, ಮಾಧವನಗರದ ಹನುಮಾನ ದೇವಸ್ಥಾನ ಸೇರಿದಂತೆ ನಗರದ ವಿವಿಧ ಹನುಮಂತ ದೇವರ ದೇವಸ್ಥಾನದಲ್ಲಿ ತೊಟ್ಟಿಲೋತ್ಸವ ಕಾರ್ಯಕ್ರಮ ನಡೆದವು. ಸ್ಥಳೀಯರು ಕುಟುಂಬ ಸಮೇತ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ಇನ್ನೂ ಹನುಮ ಜಯಂತಿ ಅಂಗವಾಗಿ ಬೆಳಗ್ಗೆ ಹನುಮಾನ ದೇವಸ್ಥಾನಗಳಲ್ಲಿ ಅಭಿಷೇಕ, ಎಲೆಪೂಜೆ, ಕುಂಕಮ ಪೂಜೆ, ತೊಟ್ಟಿಲೋತ್ಸವ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನದೊಂದಿಗೆ ಭಕ್ತರು ಪೂಜಾ ಕಾರ್ಯ ನೆರವೇರಿಸಿದರು.ಭಕ್ತಿ ಸಮರ್ಪಿಸಿದ ಸಚಿವ ಪ್ರಹ್ಲಾದ ಜೋಶಿ
ಹನುಮ ಜಯಂತಿ ಪ್ರಯುಕ್ತ ಬೆಳಗಾವಿ ಜಿಲ್ಲೆಯ ಕುಲಗೋಡ ಗ್ರಾಮದ ಪ್ರಸಿದ್ಧ ಶ್ರೀ ಆಂಜನೇಯ ದೇವಸ್ಥಾನಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದರು.ಶನಿವಾರ ಬೆಳಗ್ಗೆ ತಮ್ಮ ಮನೆದೇವರಾದ ಕುಲಗೋಡ ಶ್ರೀ ಹನುಮ ಮಂದಿರಕ್ಕೆ ಕುಟುಂಬ ಸಮೇತ ತೆರಳಿದ ಸಚಿವರು, ರಾಮಧೂತ ಹನುಮನನ್ನು ಸ್ತುತಿಸುತ್ತ ಭಕ್ತಿ ಸಮರ್ಪಿಸಿದರು. ದೇಗುಲದ ಪ್ರಾಂಗಣದಲ್ಲಿ ಆಂಜನೇಯ ಅಲಂಕೃತ ರಥವನ್ನೆಳೆದು ಲೋಕ ಕಲ್ಯಾಣಕ್ಕೆ ಪ್ರಾರ್ಥಿಸಿದರು. ಸಹೋದರ ಗೋವಿಂದ ಜೋಶಿ ಮತ್ತು ಕುಟುಂಬದ ಸದಸ್ಯರು ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡಿದ್ದರು.