ಸಾರಾಂಶ
ಕನ್ನಡಪ್ರಭ ವಾರ್ತೆ ಬೆಟ್ಟದಪುರ
ಪಿರಿಯಾಪಟ್ಟಣ ತಾಲೂಕಿನ ಚಿಕ್ಕನೇರಳೆ ಗ್ರಾಮದಲ್ಲಿ ಹನುಮ ಜಯಂತಿ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.ಗ್ರಾಮದ ಮಧ್ಯ ಭಾಗದಲ್ಲಿರುವ ದೇವಾಲಯವನ್ನು ಅಲಂಕರಿಸಿ, ವಿಶೇಷ ಅಭಿಷೇಕವನ್ನು ನೆರವೇರಿಸಿದ ನಂತರ ವಿವಿಧ ಬಗೆಯ ಪುಷ್ಪಗಳಿಂದ ದೇವರನ್ನು ಅಲಂಕರಿಸಲಾಯಿತು. ಸುಮಾರು 6ಕ್ಕೂ ಹೆಚ್ಚು ಹನುಮ ಮೂರ್ತಿಗಳನ್ನು ವಿಜೃಂಭಣೆಯ ಅಲಂಕಾರದೊಂದಿಗೆ ವಾದ್ಯ ವೃಂದಗೊಳೊಂದಿಗೆ ಸಾಗಿದ ಮೆರವಣಿಗೆಗೆ ಮಾಜಿ ಸಂಸದ ಪ್ರತಾಪ್ ಸಿಂಹ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂದ ನಂತರ ಹಿಂದೂಗಳ ಹಬ್ಬಗಳ ಆಚರಣೆ ಮತ್ತು ಮೆರವಣಿಗೆಯನ್ನು ಮಾಡಲು ಅನ್ಯ ಕೋಮಿನ ಶಾಂತಿ ಸಭೆ ಮತ್ತೆ ಅವರ ಅನುಮತಿಯನ್ನು ಪಡೆಯಬೇಕೆಂಬುದು ಹಿಂದೂಗಳ ಭಾವನೆಗೆ ದಕ್ಕೆ ತರುವ ಒಂದು ಕೆಲಸವಾಗಿದೆ, ಇದು ಮುಂದೆ ನಡೆಯದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು, ಸಚಿವ ಕೆ. ವೆಂಕಟೇಶ್ ಅವರು ತಾಲೂಕಿನಲ್ಲಿ ನಡೆಯುವ ಹನುಮ ಜಯಂತಿಗೆ ಡಿಜೆ ಮತ್ತು ವಾದ್ಯಗಳನ್ನು ನುಡಿಸಬಾರದು ಎಂದು ಪೊಲೀಸರಿಗೆ ಕಟ್ಟಪ್ಪಣೆ ಮಾಡಿದ್ದು, ಅವರಿಗೆ ಇದು ಶೋಭೆ ತರುವುದಿಲ್ಲ, ತಕ್ಷಣವೇ ಸಚಿವರು ಹಿಂದೂಗಳ ಹಬ್ಬಕ್ಕೆ ಎಲ್ಲ ರೀತಿಯ ಸಹಕಾರ ನೀಡಬೇಕು, ಯಾವುದೇ ಅನ್ಯಕೋಮಿನ ಒಪ್ಪಿಗೆಯನ್ನು ಶಾಂತಿ ಸಭೆಗಳನ್ನು ನಡೆಸದೆ ನಮ್ಮ ಹಿಂದುಗಳ ಜಾತ್ರೆ, ರಥೋತ್ಸವ, ಉತ್ಸವ, ಜಯಂತಿಗಳು ಅದ್ದೂರಿಯಾಗಿ ನಡೆಯುವಂತೆ ಮಾಡಬೇಕು, ಅವರಿಗೆ ದೇವರು ಬುದ್ಧಿ ಕರುಣಿಸಲಿ ಎಂದು ತಿಳಿಸಿದರು.ಸಚಿವ ಕೆ. ವೆಂಕಟೇಶ್ ಅವರ ಹೆಸರಿನಲ್ಲಿಯೇ ಶ್ರೀಮನ್ ವೆಂಕಟೇಶ್ವರ ತುಂಬಿದ್ದು, ಅವರು ಹಿಂದೂ ಹಬ್ಬಹರಿದಿನಗಳನ್ನು ಅದ್ದೂರಿಯಾಗಿ ಆಚರಿಸುವಂತೆ ತಾಲೂಕು ಆಡಳಿತಕ್ಕೆ ಹಾಗೂ ಪೊಲೀಸ ಇಲಾಖೆಗೆ ತಿಳಿಸಬೇಕೆಂದು ಅವರು ಹೇಳಿದರು.
ಮಾಜಿ ಶಾಸಕ ಕೆ. ಮಹದೇವ್, ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ. ಪ್ರಸನ್ನ, ಬಿಜೆಪಿ ತಾಲೂಕು ಅಧ್ಯಕ್ಷ ರಾಜೇಂದ್ರ, ಬಿಜೆಪಿ ಮುಖಂಡ ಕೆ.ಕೆ. ಶಶಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಶಾಂತಿಯುತವಾಗಿ ಮಾಡಿಕೊಂಡು ಬರುತ್ತಿದ್ದ ನಮ್ಮ ಊರಿನ ಹನುಮ ಜಯಂತಿ ಕೆಲವರು ತಮ್ಮ ಹಿತಾಶಕ್ತಿಗೋಸ್ಕರ ಗ್ರಾಮದಲ್ಲಿ ನಡೆಯುವ ಹನುಮ ಜಯಂತಿಗೆ ಅಡ್ಡಿ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಇದೇ ರೀತಿ ಅಡ್ಡಿ ಆತಂಕಗಳನ್ನು ಮಾಡಿದರೆ ಗ್ರಾಮದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ, ಎಲ್ಲರೂ ಒಮ್ಮತದಿಂದ ಹಿಂದೂ ಹಬ್ಬ ಆಗಲಿ, ಮುಸಲ್ಮಾನರ ಮೆರವಣಿಗೆಗಳು ಶಾಂತಿಯುತವಾಗಿ ನಡೆಯಲಿದೆ, ಆದ್ದರಿಂದ ಎಲ್ಲರೂ ಸಹಕಾರ ನೀಡಬೇಕೆಂದು ತಿಳಿಸಿದರು.ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವಾದ್ಯದೊಂದಿಗೆ ಯುವಕರು ಹುಚ್ಚೆದ್ದು ಕುಡಿದು ಹನುಮ ಜಯಂತಿಗೆ ರಂಗೂ ನೀಡಿದರು.
ಗ್ರಾಮದ ಮಹಿಳಾ ಸಂಘದ ಸದಸ್ಯರು, ಮೆರವಣಿಗೆಯಲ್ಲಿ ಭಜನೆ ಹಾಗೂ ನೃತ್ಯಗಳನ್ನು ಮಾಡುತ್ತಾ ಸಾಗಿದರು.ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು. ಗ್ರಾಮದಲ್ಲಿ ಮುಖ್ಯ ವೃತ್ತದಲ್ಲಿರುವ ಮಸೀದಿಗೆ ಹೆಚ್ಚಿನ ಪೊಲೀಸರನ್ನು ಭದ್ರತೆ ಒದಗಿಸಲಾಯಿತು. ಮುಸ್ಲಿಂ ಸಮಾಜದವರು ಪಾನಕ ವಿತರಿಸಿದರು.
ಮುಖಂಡರಾದ ರಘು ದೀಕ್ಷಿತ್, ಮಾಧು ಪ್ರಕಾಶ್, ಗ್ರಾಪಂ ಮಾಜಿ ಅಧ್ಯಕ್ಷ ವೆಂಕಟೇಶ್, ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಎಂ. ರಾಜೇಗೌಡ, ತಾಪಂ ಸದಸ್ಯ ಪುಟ್ಟಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಲೋಕೇಶ್, ಗೋವಿಂದ, ಮೋಹನ್, ಸಿದ್ದಲಿಂಗೇಗೌಡ, ರಾಜಶೇಖರ್, ಕುಬೇರ, ಹಾಗೂ ಹತ್ತಾರು ಹಳ್ಳಿಯ ಗ್ರಾಮಸ್ಥರು ಭಾಗವಹಿಸಿದ್ದರು.ಮೆರವಣಿಗೆಯ ಬಿಗಿ ಭದ್ರತೆಯನ್ನು ಹುಣಸೂರು ಡಿವೈಎಸ್ಪಿ ಗೋಪಾಲಕೃಷ್ಣ, ಸಿಪಿಐ ದೀಪಕ್, ಬೆಟ್ಟದಪುರ ಎಸ್ಐ ಶಿವಶಂಕರ್, ಬೈಲಕುಪ್ಪೆ ಎಸ್ಐ ಅಜಯ್ ಕುಮಾರ್, ಗ್ರಾಪಂ ಪಿಡಿಒ ಮಂಜುನಾಥ್, ಕಾರ್ಯದರ್ಶಿ ಪ್ರಕಾಶ್, ಗ್ರಾಪಂ ಸದಸ್ಯರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))