ನಾಳೆ ಹನುಮಮಾಲೆ ವಿಸರ್ಜನೆ, ಅಂಜನಾದ್ರಿಗೆ ಲಕ್ಷಕ್ಕೂ ಅಧಿಕ ಭಕ್ತರು

| Published : Dec 12 2024, 12:33 AM IST

ಸಾರಾಂಶ

ಇಲ್ಲಿಯ ಇತಿಹಾಸ ಪ್ರಸಿದ್ಧ ಅಂಜನಾದ್ರಿ ಬೆಟ್ಟದಲ್ಲಿರುವ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಡಿ.13 ರಂದು ಹನುಮಮಾಲೆ ವಿಸರ್ಜನೆ ಕಾರ್ಯಕ್ರಮ ನಡೆಯಲಿದ್ದು, ಲಕ್ಷಕ್ಕೂ ಹೆಚ್ಚು ಹನುಮ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅಂದು ಬೆಳಗ್ಗೆ ಗಂಗಾವತಿ ನಗರದಲ್ಲಿ ಹನುಮ ಮಾಲಾಧಾರಿಗಳ ಬೃಹತ್‌ ಮೆರವಣಿಗೆ ಸಹ ನಡೆಯಲಿದೆ.

ಹನುಮಮಾಲೆ ವಿಸರ್ಜನೆ ಕಾರ್ಯಕ್ರಮಕ್ಕೆ ದಿನಗಣನೆ

ನಾಳೆ ಬೆಳಗ್ಗೆ ಗಂಗಾವತಿಯಲ್ಲಿ ಹನುಮಮಾಲಾಧಾರಿಗಳ ಮೆರವಣಿಗೆ

ಕನ್ನಡಪ್ರಭ ವಾರ್ತೆ ಗಂಗಾವತಿ

ಇಲ್ಲಿಯ ಇತಿಹಾಸ ಪ್ರಸಿದ್ಧ ಅಂಜನಾದ್ರಿ ಬೆಟ್ಟದಲ್ಲಿರುವ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಡಿ.13 ರಂದು ಹನುಮಮಾಲೆ ವಿಸರ್ಜನೆ ಕಾರ್ಯಕ್ರಮ ನಡೆಯಲಿದ್ದು, ಲಕ್ಷಕ್ಕೂ ಹೆಚ್ಚು ಹನುಮ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅಂದು ಬೆಳಗ್ಗೆ ಗಂಗಾವತಿ ನಗರದಲ್ಲಿ ಹನುಮ ಮಾಲಾಧಾರಿಗಳ ಬೃಹತ್‌ ಮೆರವಣಿಗೆ ಸಹ ನಡೆಯಲಿದೆ.

ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸುವ ಹನುಮ ಭಕ್ತರು ಅಂಜನಾದ್ರಿಯ ಆಂಜನೇಯನ ಸಮ್ಮುಖದಲ್ಲಿ ಹನುಮಮಾಲೆ ವಿಸರ್ಜಿಸಲಿದ್ದಾರೆ. ಅಂಜನಾದ್ರಿಯಲ್ಲಿ ಈ ಹಿನ್ನೆಲೆಯಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಸಹ ಏರ್ಪಡಿಸಲಾಗಿದ್ದು, ಭಕ್ತರಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದೆ.

ಅಂಜನಾದ್ರಿಗೆ ಬರುವ ಭಕ್ತರಿಗೆ ಪ್ರಸಾದ ವಿತರಿಸುವುದಕ್ಕಾಗಿ ಸಿದ್ಧತೆ ನಡೆದಿದೆ. ಅಂಜನಾದ್ರಿ ಬೆಟ್ಟದ ಹಿಂಭಾಗದ ಚಿಕ್ಕರಾಂಪುರ ಬಳಿ ಇರುವ ವೇದ ಪಾಠ ಶಾಲೆಯ ಆವರಣದಲ್ಲಿ ಕೌಂಟರ್‌ ಪ್ರಾರಂಭಿಸಲಾಗಿದೆ. ಇದಕ್ಕಾಗಿ ಸ್ವಯಂ ಸೇವಕರನ್ನು ನೇಮಕ ಮಾಡಲಾಗಿದ್ದು, ವಿವಿಧ ಇಲಾಖೆಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.ಬಿಗಿ ಭದ್ರತೆ:

ಅಂಜನಾದ್ರಿ ಬಳಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂಬ ಕಾರಣಕ್ಕೆ 1500 ಪೊಲೀಸರನ್ನು ನಿಯೋಜಿಸಲಾಗಿದೆ. ಹೋಂ ಗಾರ್ಡುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದ್ದು, ಬಳ್ಳಾರಿ, ಕೊಪ್ಪಳ, ರಾಯಚೂರು ವಿಜಯನಗರ ಜಿಲ್ಲೆಗಳಿಂದ ಪೊಲೀಸ್ ಸಿಬ್ಬಂದಿಯನ್ನು ಕರೆಯಿಸಲಾಗಿದೆ.

ಡಿ.13ರಂದು ಹನುಮದ್ ವೃತ ಮತ್ತು ಹನುಮಮಮಾಲೆ ವಿಸರ್ಜನೆ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಆರ್ ಎಸ್ ಎಸ್ ಪ್ರಮುಖರು, ಜನ ಪ್ರತಿನಿಧಿಗಳು ಆಗಮಿಸಲಿದ್ದಾರೆ. ನಗರದಲ್ಲಿ ಹನುಮಮಾಲಾಧಾರಿಗಳ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಪ್ರಮುಖರು ನಂತರ ಅಂಜನಾದ್ರಿಗೆ ತೆರಳಲಿದ್ದಾರೆ.ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ಅಂಜನಾದ್ರಿ:

ಅಂಜನಾದ್ರಿಯಲ್ಲಿ ಹನುಮದ್ ವೃತ ಮತ್ತು ಹನುಮಮಾಲೆ ವಿಸರ್ಜನೆ ಹಿನ್ನೆಲೆ ಅಂಜನಾದ್ರಿ ಬೆಟ್ಟಕ್ಕೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಿದ್ದು, ಕಂಗೊಳಿಸುತ್ತಿದೆ.ಬೆಟ್ಟದ ಸುತ್ತಲು ವಿವಿಧ ಬಣ್ಣಗಳ ವಿದ್ಯುತ್‌ ದೀಪ ಹಾಕಲಾಗಿದ್ದು, ನಿಮಿಷಕ್ಕೊಮ್ಮೆ ದೀಪಗಳ ಬಣ್ಣ ಬದಲಾವಣೆಯಾಗುತ್ತಿದೆ. ಮೆಟ್ಟಿಲು ಮಾರ್ಗದಲ್ಲಿಯೂ ಸಹ ದೀಪ ಹಾಕಲಾಗಿದೆ.

ಆನೆಗೊಂದಿ ಗ್ರಾಮದಿಂದ ಹನುಮನಹಳ್ಳಿ ಮಾರ್ಗದ ರಸ್ತೆಯ ಎಡ ಮತ್ತು ಬಲ ಭಾಗಗಳ ಮಾರ್ಗಗಳಲ್ಲಿಯೂ ವಿದ್ಯುತ್‌ ದೀಪಗಳನ್ನು ಹಾಕಲಾಗಿದೆ. ಇದರಿಂದ ಅಂಜನಾದ್ರಿ ಬೆಟ್ಟ ಕಣ್ಮನ ಸೆಳೆಯುತ್ತಿದೆ.