ಸಾರಾಂಶ
ಮಹಾ ಸಂಸ್ಥಾನ ಶಾಖಾ ಮಠದ ಶಂಭುನಾಥ ಸ್ವಾಮೀಜಿ । ನೂತನ ವಿಗ್ರಹ ಪ್ರತಿಷ್ಠಾಪನೆಕನ್ನಡಪ್ರಭ ವಾರ್ತೆ ಹೊಳೆನರಸಿಪುರ
ಹನುಮಂತ ದೇವರ ನಿಷ್ಕಲ್ಮಶವಾದ ಭಕ್ತಿ, ಪ್ರೀತಿ ಹಾಗೂ ಗೌರವ ಇಂದು ಅಗತ್ಯವಾಗಿದೆ. ಈ ರೀತಿಯ ಸಂಸ್ಕಾರ ಹಾಗೂ ಸಂಸ್ಕೃತಿಯ ಪಾಲನೆ ಮಾಡಬೇಕಿದೆ ಎಂದು ಹಾಸನದ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಹೇಳಿದರು.ತಾಲೂಕಿನ ಹಳೇಕೋಟೆ ಹೋಬಳಿಯ ಕಲ್ಲೇನಹಳ್ಳಿ ಗ್ರಾಮದಲ್ಲಿ ಪಟ್ಟಾಭಿ ಶ್ರೀರಾಮ ದೇವಸ್ಥಾನ, ಅಭಯಹಸ್ತ ಗಣೇಶ ಪುನರ್ ಜೀರ್ಣೋದ್ಧಾರದ ಮತ್ತು ನೂತನ ವಿಗ್ರಹ ಪ್ರತಿಷ್ಠಾಪನೆ, ಕುಂಭಾಭಿಷೇಕ ಪೂಜಾ ಮಹೋತ್ಸವದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.
‘ಮನಸ್ಸು ಎಂಬ ಮನೆ ಹಾಗೂ ಭಗವಂತ ನೀಡಿದ ವಾತಾವಾರಣವನ್ನು ನಾವು ಕುಲಷಿತ ಮಾಡಿಕೊಂಡಿದ್ದೇವೆ. ಭಗವಂತ ನೀಡಿದ ಅವಕಾಶವನ್ನು ಎಷ್ಟು ಸದುಪಯೋಗ ಮಾಡಿಕೊಂಡಿದ್ದೇವೆ, ಮನುಷ್ಯ ಜನ್ಮವನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಂಡಿದ್ದೇವೆಯೇ ಎಂದು ಪ್ರಶ್ನಿಸಿಕೊಳ್ಳಬೇಕು. ಮನವನ್ನು ಕುಲಷಿತ ಮಾಡಿಕೊಂಡು ದೇವಾಲಯಕ್ಕೆ ಹೋದರೆ ಏನು ಪ್ರಯೋಜನ, ಮೊದಲಿಗೆ ಮನಸ್ಸಿನಲ್ಲಿ ದೇವಾಲಯ ನಿರ್ಮಿಸಿಕೊಂಡು ಹೃದಯದಲ್ಲಿ ದೇವರನ್ನು ಪ್ರತಿಷ್ಠಾಪಿಸಿ, ಸದಾ ಒಳ್ಳೆಯ ವಿಚಾರಗಳನ್ನು ನೆನೆಯುತ್ತ, ಮನ ಮೆಚ್ಚುವ ರೀತಿಯಲ್ಲಿ ನಡವಳಿಕೆ ರೂಪಿಸಿಕೊಂಡು ಸಾಗಿದಾಗ ಶ್ರೀ ಸ್ವಾಮಿಯ ಕೃಪೆ ನಮ್ಮನ್ನು ರಕ್ಷಿಸುತ್ತದೆ. ಆದ್ದರಿಂದ ಭಕ್ತಿಯ ದಾರಿಯನ್ನು ತೋರುವ ಗುರುಗಳ ಆಶೀರ್ವಚನವನ್ನು ಕೇಳುವ ಮೂಲಕ ಜೀವನವನ್ನು ರೂಪಿಸಿಕೊಳ್ಳಬೇಕು. ವಿಶೇಷವಾದ ಮನುಷ್ಯ ಜನ್ಮವನ್ನು ಸಾರ್ಥಕಗೊಳಿಸಲು ಗುರುಗಳು ತೋರಿದ ದಾರಿಯಲ್ಲಿ ಸಾಗಿದಾಗ ಮಾತ್ರ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಜಿಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಭವಾನಿ ರೇವಣ್ಣ ಮಾತನಾಡಿ, ಕಳೆದ ಕೆಲವು ತಿಂಗಳಿಂದ ಮಂಡಿ ನೋವು ಉಲ್ಪಣಗೊಂಡು ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಬೇಕಾಯಿತು. ಆದ್ದರಿಂದ ಹೊರಗೆ ಕಾಣಿಸಿಕೊಳ್ಳದೇ ಇದ್ದ ಸಂದರ್ಭದಲ್ಲಿ ಕೆಲವು ಜನರು ಅವರ ಮನಸ್ಥಿತಿಯಂತೆ ನಾಪತ್ತೆ ಎಂದು ನಾನಾ ರೀತಿಯಲ್ಲಿ ಮಾತನಾಡಿದ್ದಾರೆ. ಆದರೆ ಗ್ರಾಮದ ದೇವಾಲಯದ ಪೂಜಾ ಮಹೋತ್ಸವ ಹಾಗೂ ಗುರುಗಳ ಆಶೀರ್ವಾದ ಪಡೆಯುವ ಸೌಭಾಗ್ಯಕ್ಕೆ ಭಗವಂತನ ಪ್ರೇರಣೆ ಆಗಿರುವಾಗ, ತಪ್ಪಿಸಲು ಸಾದ್ಯವೇ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಿಮ್ಮ ಜತೆಗೆ ಎಂದಿನಂತೆ ಭಾಗವಹಿಸುತ್ತೇನೆ ಎಂದರು.
ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ಮೂಡಲಕೊಪ್ಪಲು ಹಾಗೂ ಪಿಳ್ಳೇನಹಳ್ಳಿ ಗ್ರಾಮದಲ್ಲಿ ನೂತನ ದೇವಾಲಯಗಳ ಜೀರ್ಣೋದ್ಧಾರಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದರು.ಹಿರಿಯ ಅರ್ಚಕರಾದ ಸಂಪತ್ತಯ್ಯ ಭಟ್ಟರ ಮಾರ್ಗದರ್ಶನದಲ್ಲಿ ಸಂತೋಷ್, ದರ್ಶನ್, ನವೀನ್ ಹಾಗೂ ದನುಷ್ ಪೂಜಾ ಕೈಂಕರ್ಯ ನೆರವೇರಿಸಿದರು.
ಪೂಜಾ ಮಹೋತ್ಸವದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಪದ್ಮರಾಜು, ಕಲ್ಲೇನಹಳ್ಳಿಯ ನಿವಾಸಿ ಹಾಗೂ ದೊಡ್ಡಕುಂಚೆ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಕೆ.ಎಂ., ಗ್ರಾ.ಪಂ.ಸದಸ್ಯ ದಿನೇಶ್, ಮುಖಂಡರಾದ ನಿಂಗೇಗೌಡ, ಕೃಷ್ಣೇಗೌಡ, ರಾಜಣ್ಣ, ಬನಕುಪ್ಪೆ ಅಣ್ಣಪ್ಪ, ಪುಟ್ಟಸ್ವಾಮಿ, ರಂಗಸ್ವಾಮಿ, ಕೃಷ್ಣಮೂರ್ತಿ, ಪುಟ್ಟರಾಜು ಭಾಗವಹಿಸಿದ್ದರು.ಹೊಳೆನರಸೀಪುರದ ಕಲ್ಲೇನಹಳ್ಳಿ ಗ್ರಾಮದಲ್ಲಿ ಅಭಯಹಸ್ತ ಗಣೇಶ ದೇಗುಲದ ಪುನರ್ ಜೀರ್ಣೋದ್ಧಾರದ ಮತ್ತು ನೂತನ ವಿಗ್ರಹ ಪ್ರತಿಷ್ಠಾಪನೆ, ಕುಂಭಾಭಿಷೇಕ ಪೂಜಾ ಮಹೋತ್ಸವದಲ್ಲಿ ಶಂಭುನಾಥ ಸ್ವಾಮೀಜಿ ಆಶೀರ್ವಚನ ನೀಡಿದರು.