ಸಾರಾಂಶ
ಕನ್ನಡಪ್ರಭ ವಾರ್ತೆ ಕುಷ್ಟಗಿ
ತಾಲೂಕಿನ ಹನುಮಸಾಗರ ಸಮೀಪದ ಹೂಲಗೇರಾ ಗ್ರಾಮದಲ್ಲಿ ಫೆ. 15ರಂದು ನಡೆಯಲಿರುವ ತಾಲೂಕು ಮಟ್ಟದ 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಪಟ್ಟಣದ ನಿವಾಸಿ ಹಿರಿಯ ಸಾಹಿತಿ ಹನುಮಂತಪ್ಪ ಯಲ್ಲಪ್ಪ ಈಟಿಯವರ ಆಯ್ಕೆಯಾಗಿದ್ದಾರೆ.ಪಟ್ಟಣದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಸಮ್ಮೇಳನದ ಸರ್ವಾಧ್ಯಕ್ಷರಾಗಲು ಒಟ್ಟು ಆರು ಹೆಸರು ಕೇಳಿಬಂದಿದ್ದವು. ಸಾಹಿತ್ಯ ಕೃಷಿ ಹಾಗೂ ವಯೋಮಿತಿ ಆಧಾರದಲ್ಲಿ ಈಟಿಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ಪರಿಚಯ:
ಮೂಲತಃ ಗದಗ ಜಿಲ್ಲೆಯ ರೋಣ ತಾಲೂಕಿನ ನರೆಗಲ್ ಗ್ರಾಮದವರಾದ ಹನುಮಂತಪ್ಪ ಯಲ್ಲಪ್ಪ ಈಟಿಯವರು ಮಾ., 1943ರಂದು ಜನಿಸಿದ್ದು, 1968 ರಿಂದ 2001ರ ವರೆಗೆ ಮಹಿಳಾ ಮತ್ತ ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸುವ ಮೂಲಕ ಸಿಡಿಪಿಒ ಆಗಿ ನಿವೃತ್ತರಾಗಿದ್ದಾರೆ. ನಂತರ ಸಾಹಿತ್ಯ, ಸಾಮಾಜಿಕ ಚಟುವಟಿಕೆ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಸಾಹಿತ್ಯ:
ನಮ್ಮೊಳಗೆ ನೀವು ನಿಮ್ಮೊಳಗೆ ನಾವು- ಕವನ ಸಂಕಲನ, ಹದವರಿತು ಬಾಳು ಸ್ವ-ರಚಿತ ಲೇಖನಗಳ ಸಂಗ್ರಹ, ಬೆಳಕಿನೆಡೆಗೆ, ಮಧುರ ಬಾಳಿಗಾಗಿ ದಾರಿದೀಪಗಳು, ಕಾಮನಬಿಲ್ಲು. ಸಂಪಾದಿತ ಕೃತಿಗಳು: ಅಂಕೋಲಾದಲ್ಲಿ-ಅರಿವಿನೆಡೆಗೆ, ಕಲ್ಬುರ್ಗಿಯಲ್ಲಿ-ಹೊಂಬೆಳಕು, ಹುಬ್ಬಳ್ಳಿಯಲ್ಲಿ-ಹೂಬಳ್ಳಿ, ಬೀಳಗಿಯಲ್ಲಿ-ಬೆಳ್ಳಿಚುಕ್ಕಿ, ಕುಷ್ಟಗಿಯಲ್ಲಿ ಕುಸುಮ, ಕುಷ್ಟಗಿಯಲ್ಲಿ-ಮಹರ್ಷಿ ವಾಲ್ಮೀಕಿ, ನಾಗಣ್ಣ ಗಣಜಲಖೇಡರ 75ನೇ ವರ್ಷಕ್ಕಾಗಿ ಅಭಿನಂದನಾ ಗ್ರಂಥ-ಸಂಜೀವಿನಿ ಸೇರಿ ವಿವಿಧ ಗ್ರಂಥ ರಚಿಸಿದ್ದಾರೆ.2003-04ನೇ ಸಾಲಿನ ಡಾ. ಬಿ.ಆರ್. ಅಂಬೇಡ್ಕರ್ ಫೆಲೋಶಿಪ್ ಪ್ರಶಸ್ತಿ ಹಾಗೂ ಹಲವಾರು ಸಂಘ-ಸಂಸ್ಥೆಗಳಿಂದ ಸನ್ಮಾನ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಸಾಹಿತ್ಯ ಸಮ್ಮೇಳನ- ಲೇಖನಗಳಿಗೆ ಆಹ್ವಾನ:ತಾಲೂಕಿನ ಹೂಲಗೇರಿ ಗ್ರಾಮದಲ್ಲಿ ಫೆ.15ರಂದು ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸ್ಮರಣ ಸಂಚಿಕೆಯನ್ನು ಹೊರತರುತ್ತಿರುವ ಹಿನ್ನೆಲೆ ತಾಲೂಕಿನ ಐತಿಹಾಸಿಕ, ಸಾಂಸ್ಕೃತಿಕ, ಪಾರಂಪರಿಕ ವಿಷಯಗಳ ಕುರಿತು ಮೌಲಿಕ ಲೇಖನಗಳಿಗೆ ಆಹ್ವಾನ ಮಾಡಲಾಗಿದೆ.ತಾಲೂಕಿನ ಬರಹಗಾರರು, ಕವಿಗಳು, ಚಿಂತಕರು ಲೇಖನಗಳನ್ನು ಒಂದು ಪುಟಕ್ಕೂ ಮೀರದಂತೆ ಸಿದ್ಧಪಡಿಸುವ ಮೂಲಕ ಲೇಖನಗಳಿಗೆ ಸಂಬಂಧಪಟ್ಟಂತಹ ಪೋಟೊಗಳೊಂದಿಗೆ ಹಾಗೂ ಲೇಖಕರ ಹೆಸರು ಮತ್ತು ಭಾವಚಿತ್ರವನ್ನು ಸಾಪ್ಟ್ ಕಾಫಿಯನ್ನು ಮಾತ್ರ ಜ.10ರೊಳಗಾಗಿ kasapakushtagi@gmail.com ಗೆ ಕಳುಹಿಸಬೇಕು.ಸೂಚನೆ: ಲೇಖನ ಒಂದು ಪುಟ ಮೀರದಂತೆ ಡಿಟಿಪಿ ಮಾಡಿಸಿರಬೇಕು, ಕಳುಹಿಸಿರುವ ಲೇಖನಗಳ ಆಯ್ಕೆ ಮತ್ತು ಪ್ರಕಟಣೆಯನ್ನು ಸಂಪಾದಕ ಮಂಡಳಿಯ ತೀರ್ಮಾನ ಅಂತಿಮ, ಕೈ ಬರಹ, ಪ್ರಿಂಟ್ ಮಾಡಿದ ಪ್ರತಿ, ಫೊಟೊ ಕಾಪಿ ಮತ್ತು ಬರಹಗಳು ಹಾಗೂ ಲೇಖನಗಳನ್ನು ವಾಟ್ಸ್‌ಆ್ಯಪ್ ಮೂಲಕ ಸ್ವೀಕರಿಸುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಹನುಮೇಶ ಗುಮಗೇರಿ 9731375341, ಲೆಂಕಪ್ಪ ವಾಲಿಕಾರ 9742893750, ಶರಣಪ್ಪ ಲೈನದ 9880685837, ದೇವರಾಜ ವಿಶ್ವಕರ್ಮ 9945750945 ಅವರನ್ನು ಸಂಪರ್ಕಿಸಬೇಕು ಎಂದು ಪ್ರಕಟಣೆ ತಿಳಿಸಿದೆ.