ಹನೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ

| Published : Mar 29 2024, 12:47 AM IST / Updated: Mar 29 2024, 12:48 AM IST

ಸಾರಾಂಶ

ಹನೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು ಕಳೆದ 14 ಚುನಾವಣೆಗಳ ಪೈಕಿ ಹತ್ತು ಚುನಾವಣೆಗಳಲ್ಲಿ ದಿ.ರಾಜುಗೌಡ ಅವರ ಮನೆತನದವರೇ ಆಡಳಿತ ನಡೆಸಿರುವುದು ಸಂತಸದ ವಿಚಾರ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ ಮಹದೇವಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಹನೂರು ಹನೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು ಕಳೆದ 14 ಚುನಾವಣೆಗಳ ಪೈಕಿ ಹತ್ತು ಚುನಾವಣೆಗಳಲ್ಲಿ ದಿ.ರಾಜುಗೌಡ ಅವರ ಮನೆತನದವರೇ ಆಡಳಿತ ನಡೆಸಿರುವುದು ಸಂತಸದ ವಿಚಾರ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ ಮಹದೇವಪ್ಪ ಹೇಳಿದರು.ವಾಸವಿ ಮಹಲ್ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಹನೂರು ವಿಧಾನಸಭಾ ಕ್ಷೇತ್ರದಲ್ಲಿ ದಿ.ರಾಜುಗೌಡರ ಕುಟುಂಬ ಹೆಚ್ಚು ಕಾಲ ಆಡಳಿತ ನಡೆಸಿ ಹನೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಮೂರು ಬಾರಿ ಶಾಸಕರಾಗಿದ್ದ ಆರ್.ನರೇಂದ್ರ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಿಂದ 3000 ಕೋಟಿ ರು. ಅನುದಾನ ತಂದು ಅಭಿವೃದ್ಧಿಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಈ ಲೋಕಸಭಾ ಚುನಾವಣೆಯಲ್ಲಿ ಮಾಜಿ ಶಾಸಕ ಆರ್. ನರೇಂದ್ರ ಅವರ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಬಡವರು ಹಿಂದುಳಿದವರು, ಶೋಷಿತ ವರ್ಗದವರ ಸಮಗ್ರ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ಮೀಸಲಿಟ್ಟಿದ್ದಾರೆ. ಚುನಾವಣಾ ಪೂರ್ವದಲ್ಲಿ ನೀಡಿದ್ದ 5 ಭರವಸೆಗಳನ್ನು ಕಳೆದ 9 ತಿಂಗಳ ಅವಧಿಯಲ್ಲಿ ಕೊಟ್ಟ ಮಾತಿನಂತೆ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದಾರೆ. ಮನೆಯ ಯಜಮಾನನಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 2 ಸಾವಿರ ರು. , ಶಕ್ತಿ ಯೋಜನೆಯ ಉಚಿತ ಬಸ್ ಪ್ರಯಾಣ, ಅನ್ನಭಾಗ್ಯ ಯೋಜನೆಯಡಿ ಐದು ಕೆಜಿ ಅಕ್ಕಿ, ಹೆಚ್ಚುವರಿ 5 ಕೆ.ಜಿ ಅಕ್ಕಿಗೆ ತಗಲುವ ಹಣ, ಯುವನಿಧಿ ಯೋಜನೆಯಡಿ ನಿರುದ್ಯೋಗಿ ವಿದ್ಯಾವಂತರಿಗೆ 3000 ಸಹಾಯಧನ, ಗೃಹಜೋತಿ ಯೋಜನೆ ಅಡಿ 200 ಯೂನಿಟ್ ವಿದ್ಯುತ್ ನೀಡಲಾಗುತ್ತಿದೆ. ಈ ಹಿಂದೆ ಲೋಕೋಪಯೋಗಿ ಸಚಿವರಾಗಿದ್ದಾಗ ಹನೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡಿದ್ದೇನೆ, ಮುಂದಿನ ದಿನಗಳಲ್ಲಿ ಮಾಜಿ ಶಾಸಕ ಆರ್ ನರೇಂದ್ರ ರವರಿಗೆ ಉತ್ತಮ ಭವಿಷ್ಯವಿದೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ ವೆಂಕಟೇಶ್ ಮಾತನಾಡಿ, ಚಾ.ನಗರ ಜಿಲ್ಲೆ ಕಾಂಗ್ರೆಸ್‌ ಭದ್ರಕೋಟೆ ಅದನ್ನು ನಾವು ಮತ್ತೊಮ್ಮೆ ಸಾಬೀತುಪಡಿಸಬೇಕು. ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಡವರಿಗೆ 10 ವರ್ಷದಲ್ಲಿ ಯಾವ ಯೋಜನೆಯನ್ನು ಕೊಟ್ಟಿದೆ ಎಂದು ವಿಮರ್ಶೆ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಈ ಹಿಂದೆಯಿಂದ ಬಿಜೆಪಿ ಸರ್ಕಾರ ಸಿದ್ದರಾಮಯ್ಯ ಜಾರಿಗೆ ತಂದಿದ್ದ ಹಲವು ಕಾರ್ಯಕ್ರಮಗಳನ್ನು ನಿಲ್ಲಿಸಿರುವುದೇ ಇವರ ಸಾಧನೆ. ಬಿಜೆಪಿಯವರು ಅಭಿವೃದ್ಧಿ ವಿಚಾರ ಚರ್ಚೆ ಮಾಡದೆ ಭಾವನಾತ್ಮಕ ವಿಚಾರಗಳನ್ನು ಇಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದಾರೆ. ದೇಶದಲ್ಲಿ ೪೦೦ ಸಂಸತ್ ಸದಸ್ಯರನ್ನು ಆಯ್ಕೆ ಮಾಡಿದರೆ ಮುಂದಿನ ದಿನಗಳಲ್ಲಿ ಚುನಾವಣೆ ನಡೆಯುವುದಿಲ್ಲ ಎಂದರು.

ಪ್ರಾಸ್ತಾವಿಕವಾಗಿ ಮಾಜಿ ಶಾಸಕ ಆರ್ ನರೇಂದ್ರ ಮಾತನಾಡಿ ಕಳೆದ ಚುನಾವಣೆಯಲ್ಲಿ ನಾವು ಯಾವ ರೀತಿ ಪರಾಭವ ಗೊಂಡಿದ್ದೇವೆ ಎಂಬುದು ಕ್ಷೇತ್ರದ ಪ್ರತಿಯೊಬ್ಬ ಮತದಾರರಿಗೂ ತಿಳಿದಿರುವ ವಿಚಾರ, ಹೊರಗಡೆಯಿಂದ ಬಂದವರು ಹನೂರು ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ, ಕಳೆದ ಒಂದು ವರ್ಷದಿಂದ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ, ಅಭಿವೃದ್ಧಿ ಕುಂಠಿತವಾಗಿದೆ. ರೈತರ ಪರ ಕಾಳಜಿ ಇದ್ದರೆ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ 6 ಕೋಟಿ ಅನುದಾನ ತಂದಿದ್ದರೆ ರಾಮನ ಗುಡ್ಡ ಹಾಗೂ ಹುಬ್ಬೆ ಹುಣಸೆ ಜಲಾಶಯಕ್ಕೆ ಕಾವೇರಿ ನದಿ ಮೂಲದಿಂದ ನೀರು ತುಂಬಿಸಬಹುದಾಗಿತ್ತು ಎಂದು ವಾಗ್ದಾಳಿ ನಡೆಸಿದರು. ಕಳೆದ ಮೂರು ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಹೆಚ್ಚಿನ ಮತ ಕೊಡಿಸುವಲ್ಲಿ ಯಶಸ್ವಿಯಾಗಿದ್ದೇನೆ ಈ ಬಾರಿಯೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನಿಲ್ ಬೋಸ್ ರವರಿಗೆ 25 ಸಾವಿರ ಮತಗಳ ಅಂತರ ನೀಡಲು ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಮನೆಮನೆಗೆ ಮುಟ್ಟಿಸಬೇಕು ಎಂದರು.ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನಿಲ್ ಬೋಸ್ ಮಾತನಾಡಿ, 2018 ರಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದೇನೆ. ನಾನು ಎರಡು ಬಾರಿ ನಂಜನಗೂಡು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ ನನಗೆ ಅವಕಾಶ ದೊರೆತಿರಲಿಲ್ಲ, ಇದೀಗ ಪಕ್ಷ ನನ್ನ ಸಂಘಟನೆಯನ್ನು ಮೆಚ್ಚಿ ಟಿಕೆಟ್ ನೀಡಿದೆ. ಪಕ್ಷದ ವರಿಷ್ಠರು ನನ್ನ ಮೇಲೆ ವಿಶ್ವಾಸವಿಟ್ಟು ಟಿಕೆಟ್ ನೀಡಿರುವುದಕ್ಕೆ ಅವರಿಗೆ ಆಭಾರಿಯಾಗಿದ್ದೇನೆ ನಾನು ಅಂಬೇಡ್ಕರ್‌ರ ಸಂವಿಧಾನದ ಆಶಯದಡಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡು ನಿಮ್ಮ ಸೇವಕನಾಗಲು ಬಯಸಿದ್ದೇನೆ. ಕ್ಷೇತ್ರದ ಮತದಾರರು ತಮ್ಮ ಅಮೂಲ್ಯ ಮತವನ್ನು ನೀಡಿ ನನ್ನನ್ನು ಜಯಶೀಲನನ್ನಾಗಿ ಮಾಡಲು ತಾವು ಸಹಕಾರ ನೀಡಬೇಕು ಎಂದು ಕೈಮುಗಿದು ಪ್ರಾರ್ಥನೆ ಮಾಡಿದರು. ಮಾಜಿ ಶಾಸಕ ಜಿ ಎನ್ ನಂಜುಂಡಸ್ವಾಮಿ ಮಾತನಾಡಿ, ನಾನು ಲೋಕಸಭಾ ಚುನಾವಣೆಗೆ ಪ್ರಬಲ ಆಕಾಂಕ್ಷಿಯಾಗಿ ಕಳೆದ ಒಂದು ವರ್ಷದಿಂದ ನಾಯಿ ರೀತಿ ಸುತ್ತಿದ್ದೆ, ಆದರೆ ಹಿರಿಯರ ಆದೇಶದಂತೆ ಯುವಕ ಸುನೀಲ್ ಬೋಸ್ ರವರಿಗೆ ಅವಕಾಶ ಮಾಡಿಕೊಟ್ಟಿದ್ದೇನೆ. ಪಕ್ಷದ ನಾಯಕರು ನನಗೆ ಮೋಸ, ದ್ರೋಹ ಮಾಡಬೇಡಿ ಎಂದು ಮನವಿ ಮಾಡಿದರು.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಗುಜರಾತ್ ನಲ್ಲಿ ನರಮೇಧ ಮಾಡಿದವರು ಕ್ರಿಮಿನಲ್ ಚಟುವಟಿಕೆ ಹಿನ್ನೆಲೆಯುಳ್ಳ ವರು ಈಗ ದೇಶದ ಉನ್ನತ ಸ್ಥಾನದಲ್ಲಿದ್ದಾರೆ. ಇಂತಹವರನ್ನು ಮೋದಿ ಅವರು ತಮ್ಮ ಪಕ್ಕದಲ್ಲೇ ಉಳಿಸಿಕೊಂಡಿದ್ದಾರೆ ಎರಡು ಕೋಟಿ ಉದ್ಯೋಗ ಸೃಷ್ಟಿ ಅಂತ ಹೇಳಿದ್ದರು. ಈಗ ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿ ಮಾಡೋದು ಕೇಂದ್ರ ಸರ್ಕಾರ ಹೊಣೆಯಲ್ಲ ಅಂತಿದ್ದಾರೆ. ಕಪ್ಪು ಹಣ ವಾಪಸ್ ತರುವ ಕೆಲಸ ನಮ್ಮದು ಅಂದ್ರು, ಆದ್ರೆ ಸ್ವಿಸ್ ಬ್ಯಾಂಕ್ ನಲ್ಲಿ ಯಾರದೆಲ್ಲ ಖಾತೆ ಇದೆ ಅಂತ ಪಟ್ಟಿ ಕೂಡ ರಿಲೀಸ್ ಮಾಡಿಲ್ಲ ಪೆಟ್ರೋಲ್ ಡೀಸೆಲ್ ದರ ಹೆಚ್ಚಾಗಿದೆ. ಇವರ ಅಧಿಕಾರ ಅವಧಿಯಲ್ಲಿ 4 ಹೆಚ್ಚು ಸ್ಥಾನ ಅಂತ ದೇಶದ ಎಲ್ಲೆಡೆ ಹೇಳ್ತಾ ಇದ್ದಾರೆ ಹೆಚ್ಚು ಸ್ಥಾನ ಬಂದ್ರೆ ಬಿಜೆಪಿ ಪಕ್ಷದವರು ಸಂವಿಧಾನ ಬದಲಾವಣೆ ಮಾಡೋದೇ ಇವರ ಅಜೆಂಡಾ ದೇಶದ ಇತಿಹಾಸದ ಪ್ರಜಾಪ್ರಭುತ್ವದಲ್ಲಿ ಕತ್ತು ಹಿಸುಕುವ ಸರ್ಕಾರ ಅಂದ್ರೆ ಅದು ಮೋದಿ ಸರ್ಕಾರ ಎಂದು ಪಟ್ಟಣದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಕೇಂದ್ರ ಹಾಗೂ ಮೋದಿ ವಿರುದ್ಧ ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಸಭೆಯಲ್ಲಿ ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಡಾ. ತಿಮ್ಮಯ್ಯ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಪ್ರಚಾರ ಸಮಿತಿ ಅಧ್ಯಕ್ಷ ಶಿವಕುಮಾರ್, ಕೆಪಿಸಿಸಿ ಸದಸ್ಯ ಬಸವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಈಶ್ವರ್, ಮುಕುಂದವರ್ಮ, ಚಾಮುಲ್ ನಿರ್ದೇಶಕರಾದ ನಂಜುಂಡಸ್ವಾಮಿ ಪಪಂ ಸದಸ್ಯರಾದ ಹರೀಶ್, ಸುದೇಶ್ ಗಿರೀಶ್, ಸಂಪತ್, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚೇತನ್, ಮುಖಂಡರಾದ ನವನೀತ್ ಗೌಡ, ಎಲ್ ನಾಗೇಂದ್ರ, ಮಾದೇಶ್, ಅಜ್ಜಿಪುರ ನಾಗರಾಜು, ಮುರುಡೇಶ್ವರ ಸ್ವಾಮಿ ಮಂಗಲ ಪುಟ್ಟರಾಜು, ಕೊಪ್ಪಳಿ ಮಹದೇವ ನಾಯಕ್, ಗುಂಡಾಪುರ ಮಾದೇಶ್, ರಮೇಶ್ , ರಾಜೇಶ್ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.