ಸಾರಾಂಶ
ಹುಬ್ಬಳ್ಳಿ: ಎಲ್ಲಿವರೆಗೆ ಈ ದೇಹ ಇರುತ್ತದೆ ಅಲ್ಲಿಯ ವರೆಗೂ ಪ್ರೀತಿ ವಿಶ್ವಾಸದಿಂದ ಇದ್ದರೆ ನಮ್ಮ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ ಬರುತ್ತದೆ. ನಮ್ಮ ಸುತ್ತಲಿನವರು ಸಂತೋಷವಾಗಿದ್ದರೆ ನಾವು ಸಂತೋಷವಾಗಿರಲು ಸಾಧ್ಯ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿನ ಉಣಕಲ್ ಗ್ರಾಮದ ಶ್ರೀ ಕಲ್ಲೇಶ್ವರ ದೇವಸ್ಥಾನದ ಕಾರ್ತಿಕ ದೀಪೋತ್ಸವ ಸಮಾರಂಭ ಮತ್ತು ಆಧ್ಯಾತ್ಮಿಕ ಪ್ರವಚನ ಹಾಗೂ ಇಷ್ಟಲಿಂಗಧಾರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಉಣಕಲ್ ಸಣ್ಣ ಗ್ರಾಮ ಇತ್ತು. ಈಗ ಉಣಕಲ್ಲಿನ ಮೂರನೇ ಪೀಳಿಗೆ ಜತೆಗೆ ನಮ್ಮ ಸಂಬಂಧ. ಈ ಸಂಬಂಧವನ್ನು ಹೆಚ್ಚಿಸಿಕೊಂಡು ಹೋಗಬೇಕು. ಪ್ರೀತಿ, ವಿಶ್ವಾಸದಿಂದ ಇಲ್ಲಿಯ ಯುವಕರು ಉಣಕಲ್ಲಿನ ಆ ಸಂಸ್ಕೃತಿ ಪರಂಪರೆ, ಅಣ್ಣ ತಮ್ಮಂದಿರು. ಮಾವ-ಅಳಿಯಂದಿರ ಸಂಬಂಧ, ಹಳ್ಳಿಯ ಸಂಬಂಧವನ್ನು ಇಂದಿಗೂ ಬಿಟ್ಟುಕೊಟ್ಟಿಲ್ಲ. ಅದು ಸಂತಸ ತರುವ ವಿಷಯ. ನಿಮ್ಮ ಭೂಮಿಗೆ ಸಾವಿರ ಪಟ್ಟು ಬೆಲೆ ಬಂದಿರಬಹುದು. ಆ ಬೆಲೆಯ ದುಡ್ಡು ಬಂದಿರುವುದು ಶಾಶ್ವತವಾಗಿರುವುದಿಲ್ಲ. ಒಂದಿಲ್ಲೊಂದು ದಿನ ಆದು ಬೇರೆ ಕಡೆ ಹಂಚಿ ಹೋಗುತ್ತದೆ. ಆದರೆ, ಸಂಬಂಧ, ಪ್ರೀತಿ, ವಿಶ್ವಾಸ ಎಂದಿಗೂ ಶಾಶ್ವತವಾಗಿರುತ್ತದೆ. ಒಬ್ಬ ವ್ಯಕ್ತಿ ನಿಧನ ಹೊಂದಿದಾಗ ಆತನ ಮೈ ಮೇಲಿನ ಬಂಗಾರವನ್ನು ತೆಗೆದುಕೊಂಡು ಹೋಗುತ್ತಾರೆ. ಅಲ್ಲಿಗೆ ಬಂದಾಗ ಜನರು ಅವರ ಬಗ್ಗೆ ಆಡುವ ಒಳ್ಳೆಯ ಮಾತುಗಳು ಬಂಗಾರಕ್ಕಿಂತ ಬಹಳ ದೊಡ್ಡದು ಎಂದರು.
ಸನ್ಯಾಸತ್ವವನ್ನು ಪ್ರಾಮಾಣಿಕವಾಗಿ ನಡೆಸಿ ಸಂಪೂರ್ಣವಾಗಿ ಭಕ್ತರ ಮನ ಮುಟ್ಟಿ ತಮ್ಮ ಪೂಜಾ ಫಲವನ್ನು ಯಾರು ನೀಡುತ್ತಾರೋ ಅವರು ನಿಜವಾದ ಸ್ವಾಮೀಜಿ. ಸತ್ಯ ಯುಗ ಅಂತ ಒಂದಿತ್ತು. ಸತ್ಯ ಯುಗದಲ್ಲಿ ಏಕಾತ್ಮ ಇತ್ತು. ಒಂದೇ ಆತ್ಮ ಇತ್ತು. ಆ ನಂತರ ದ್ವಾಪರ ಯುಗ ಬಂತು ಅಲ್ಲಿ ಆತ್ಮದ ಜತೆಗೆ ಪರಮಾತ್ಮ ಬಂತು. ತ್ರೇತಾಯುಗದಲ್ಲಿ ಪರಮಾತ್ಮನನ್ನು ಕಾಣುವ ಮಾರ್ಗ ತೋರುವ ಗುರುಗಳ ಸೃಷ್ಟಿಯಾಯಿತು ಎಂದರು.ಈ ಸಂದರ್ಭದಲ್ಲಿ ಉಪ್ಪಿನ ಬೆಟಗೇರಿ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಶ್ರೀಗಳು, ಸುಳ್ಳ ಪಂಚಗೃಹ ಸಂಸ್ಥಾನ ಹಿರೇಮಠದ ಶಿವ ಸಿದ್ದರಾಮ ಶಿವಯೋಗಿ ಶಿವಾಚಾರ್ಯರು, ಶಾಸಕ ಮಹೇಶ ಟೆಂಗಿನಕಾಯಿ, ಪಾಲಿಕೆ ಸದಸ್ಯರಾದ ತಿಪ್ಪಣ್ಣ ಮಜ್ಜಗಿ, ರಾಜಣ್ಣ ಕೊರವಿ ಸೇರಿದಂತೆ ಉಣಕಲ್ ಗ್ರಾಮಸ್ಥರು ಪಾಲ್ಗೊಂಡಿದ್ದರು.
;Resize=(128,128))
;Resize=(128,128))
;Resize=(128,128))