ಕಲೆಗಳಿಂದ ಬದುಕಿನಲ್ಲಿ ಸಂತೋಷ, ನೆಮ್ಮದಿ: ಡಾ.ಮಹಾಬಲೇಶ್ವರ

| Published : May 28 2024, 01:13 AM IST

ಕಲೆಗಳಿಂದ ಬದುಕಿನಲ್ಲಿ ಸಂತೋಷ, ನೆಮ್ಮದಿ: ಡಾ.ಮಹಾಬಲೇಶ್ವರ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಯೊಬ್ಬರೂ ಬದುಕಿನಲ್ಲಿ ಸಂತೋಷ, ನೆಮ್ಮದಿ ಪಡೆಯುವಲ್ಲಿ ಕಲೆ ಎಂಬುದು ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಕಲೆ ಇಲ್ಲದೇ ಜೀವನವೇ ಇಲ್ಲ ಎಂದು ದಾವಣಗೆರೆ ವಿಶ್ವವಿದ್ಯಾನಿಲಯ ಕುಲ ಸಚಿವ ಡಾ. ಯು.ಎಸ್. ಮಹಾಬಲೇಶ್ವರ ದಾವಣಗೆರೆಯಲ್ಲಿ ಹೇಳಿದ್ದಾರೆ.

- ದಾವಿವಿ ದೃಶ್ಯಕಲಾ ಕಾಲೇಜಿನಲ್ಲಿ 2023-24ನೇ ಸಾಲಿನ ಭಿತ್ತಿಚಿತ್ರ ಕಲಾ ಶಿಬಿರ । ದೊಡ್ಡ ಕಲಾವಿದರಾಗಿ ಸಾಧನೆ ಮೆರೆಯಲು ಹಾರೈಕೆ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಪ್ರತಿಯೊಬ್ಬರೂ ಬದುಕಿನಲ್ಲಿ ಸಂತೋಷ, ನೆಮ್ಮದಿ ಪಡೆಯುವಲ್ಲಿ ಕಲೆ ಎಂಬುದು ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಕಲೆ ಇಲ್ಲದೇ ಜೀವನವೇ ಇಲ್ಲ ಎಂದು ದಾವಣಗೆರೆ ವಿಶ್ವವಿದ್ಯಾನಿಲಯ ಕುಲ ಸಚಿವ ಡಾ. ಯು.ಎಸ್. ಮಹಾಬಲೇಶ್ವರ ಹೇಳಿದರು.

ನಗರದ ದಾವಣಗೆರೆ ವಿವಿ ದೃಶ್ಯಕಲಾ ಮಹಾ ವಿದ್ಯಾಲಯದಲ್ಲಿ ಎನ್ಎಸ್‌ಎಸ್ ಘಟಕ- ದಾವಣಗೆರೆ ವಿವಿ ಎನ್‌ಎಸ್‌ಎಸ್‌ ಘಟಕ ಸೋಮವಾರ ಹಮ್ಮಿಕೊಂಡಿದ್ದ 2023- 24ನೇ ಸಾಲಿನ ವಿಶೇಷ ವಾರ್ಷಿಕ ಶಿಬಿರ ಭಿತ್ತಿಚಿತ್ರ ಕಲಾ ಶಿಬಿರವನ್ನು ಕಾಲೇಜಿನ ಕಾಂಪೌಂಡ್ ಗೋಡೆ ಮೇಲೆ ಚಿತ್ರ ಬಿಡಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ದೃಶ್ಯಕಲಾ ವಿದ್ಯಾರ್ಥಿಗಳಿಗೆ ಭಿತ್ತಿ ಚಿತ್ರಕಲಾ ಶಿಬಿರ ಆಯೋಜನೆ ಉತ್ತಮ ಕಾರ್ಯವಾಗಿದೆ. ಇಲ್ಲಿ ಮೂಡಿ ಬರುವ ಚಿತ್ತಾರಗಳು ಅರ್ಥಪೂರ್ಣವಾಗಿದ್ದು, ನೋಡುಗರಿಗೂ ಆನಂದವುಂಟು ಮಾಡುವಂತಿವೆ. ಇಂತಹ ಉತ್ತಮ ಸಂದೇಶ ನೀಡುವಂತಹ ಚಿತ್ತಾರ ರಚಿಸಿ. ದೃಶ್ಯಕಲಾ ಮಹಾ ವಿದ್ಯಾಲಯ ವಿದ್ಯಾರ್ಥಿಗಳು ದೊಡ್ಡ ಕಲಾವಿದರಾಗಿ ಸಾಧನೆ ಮಾಡುವಂತಾಗಲಿ ಎಂದು ಹಾರೈಸಿದರು.

ದಾವಿವಿ ಎನ್‌ಎಸ್‌ಎಸ್‌ ಸಂಯೋಜನಾಧಿಕಾರಿ ಡಾ.ಅಶೋಕಕುಮಾರ ವಿ. ಪಾಳೇದ ಮಾತನಾಡಿ, ಎನ್‌ಎಸ್‌ಎಸ್‌ 2023-2024ನೇ ಸಾಲಿನ ಚಟುವಟಿಕೆಗಳ ಕುರಿತ ಅನುದಾನದಡಿ ಶಿಬಿರ ಆಯೋಜಿಸಲಾಗಿದೆ. ದೃಶ್ಯಕಲಾ ಮಹಾವಿದ್ಯಾಲಯದ ಆವರಣದ ಗೋಡೆಗಳು ಅಲಂಕಾರಗೊಳ್ಳುವುದು, ಈ ಭಾಗದಲ್ಲಿ ಸಂಚರಿಸುವ, ಸಾಗುವ ಜನರ ಗಮನ ಇಲ್ಲಿನ ಚಿತ್ರಗಳು ಸೆಳೆದು, ಈ ಮೂಲಕ ಮೌಲ್ಯಯುಕ್ತ ಸಂದೇಶ ನೀಡುವತಾಗಲಿ ಎಂಬುದು ಶಿಬಿರದ ಉದ್ದೇಶ. ಕಾಲೇಜಿನ ಅಸ್ಮಿತೆ ಕಾಪಾಡುವುದು ಸಹ ಇದರ ಹಿಂದಿನ ಧ್ಯೇಯ ಎಂದು ಹೇಳಿದರು.

ಹಿರಿಯ ಕಲಾವಿದ ಎ.ಮಹಲಿಂಗಪ್ಪ ಮಾತನಾಡಿ, ದೃಶ್ಯಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಭೆ ಕೇವಲ ಕಾಲೇಜು, ವಿ.ವಿ.ಗೆ ಮಾತ್ರವೇ ಸೀಮಿತ ಆಗಬಾರದು. ನಿಮ್ಮೆಲ್ಲರ ಪ್ರತಿಭೆ ಜಿಲ್ಲಾದ್ಯಂತ ಗೊತ್ತಾಗಬೇಕು. ಈ ನಿಟ್ಟಿನಲ್ಲಿ ದಾವಿವಿಯು ಜಿಲ್ಲಾಡಳಿತ, ಜಿಪಂ, ಪಾಲಿಕೆ ಜೊತೆ ಸಂವಹನ ನಡೆಸಿ, ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಕಾನೂನಾತ್ಮಕವಾಗಿ ಜಿಲ್ಲಾದ್ಯಂತ ಬಿತ್ತಿ ಚಿತ್ರ ರಚಿಸಲು ಅವಕಾಶ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ಕಾಲೇಜಿನ ಎನ್‌ಎಸ್‌ಎಸ್‌ ಕಾರ್ಯಕ್ರಮ ಅಧಿಕಾರಿ ಡಾ.ಸತೀಶಕುಮಾರ ಪಿ. ವಲ್ಲೇಪುರೆ, ಬೋಧನಾ ಸಹಾಯಕ ದತ್ತಾತ್ರೇಯ ಎನ್. ಭಟ್ಟ, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ದಾವಿವಿ ಕುಲಪತಿ ಪ್ರೊ. ಬಿ.ಡಿ.ಕುಂಬಾರ ದಾವಿವಿ ದೃಶ್ಯ ಕಲಾ ಮಹಾವಿದ್ಯಾಲಯ ವಿದ್ಯಾರ್ಥಿಗಳ ಚಿತ್ರ ರಚನೆಗೆ ತೊಡಗುವ ಸಿದ್ಧತೆಯಲ್ಲಿದ್ದಾಗ ಸ್ವಯಂ ಆಸಕ್ತಿಯಿಂದ ಧಾವಿಸಿ, ಗೋಡೆ ಮೇಲೆ ಎನ್‌ಎಸ್‌ಎಸ್‌ ಎಂಬುದಾಗಿ ಬರೆದು, ಶುಭ ಕೋರಿ, ಎಲ್ಲರ ಪ್ರಶಂಸೆಗೆ ಪಾತ್ರರಾದರು.

- - - -27ಕೆಡಿವಿಜಿ3:

ದಾವಣಗೆರೆಯಲ್ಲಿ ದಾವಿವಿ ದೃಶ್ಯಕಲಾ ಮಹಾ ವಿದ್ಯಾಲಯದಲ್ಲಿ ಭಿತ್ತಿಚಿತ್ರ ಕಲಾ ಶಿಬಿರವನ್ನು ದಾವಣಗೆರೆ ವಿವಿ ಕುಲ ಸಚಿವ ಡಾ. ಯು.ಎಸ್. ಮಹಾಬಲೇಶ್ವರ ಗೋಡೆ ಬರದ ಬರೆಯುವ ಮೂಲಕ ಉದ್ಘಾಟಿಸಿದರು.