ಸಾರಾಂಶ
- ಮಡಕಿಹೊನ್ನಿಹಳ್ಳಿಯಲ್ಲಿ ಕಾಶಿ ಜಗದ್ಗುರುಗಳ ಅಡ್ಡಪಲ್ಲಕ್ಕಿಯಲ್ಲಿ ಶಿವಾಚಾರ್ಯರು
ಕನ್ನಡಪ್ರಭ ವಾರ್ತೆ ಧಾರವಾಡ
ಸಾಹಿತ್ಯದ ಓದಿನಿಂದ ಲೌಕಿಕ ಮತ್ತು ಅಲೌಕಿಕ ಜ್ಞಾನ ಲಭಿಸುತ್ತದೆ. ಆಧ್ಯಾತ್ಮದ ವಿದ್ಯೆಯು ಸದ್ಗತಿಯ ಮಾರ್ಗ ತೋರುತ್ತದೆ ಮತ್ತು ಧರ್ಮಾಚರಣೆಯು ಜೀವನಕ್ಕೆ ಅಗತ್ಯವಿರುವ ಸುಖ, ಸಮೃದ್ದಿ, ಸಮಾಧಾನಗಳನ್ನು ನೀಡುತ್ತದೆ ಎಂದು ಕಾಶಿ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರು ನುಡಿದರು.ತಾಲೂಕಿನ ಮಡಕಿಹೊನ್ನಳ್ಳಿ ಗ್ರಾಮದಲ್ಲಿ ಧಾರವಾಡ ವೀರಶೈವ ಜಂಗಮ ಸಂಸ್ಥೆಯು ಗ್ರಾಮಸ್ಥರ ಸಹಕಾರದಲ್ಲಿ ಆಯೋಜಿಸಿದ್ದ ಕಾಶಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಮತ್ತು ಜಗದ್ಗುರುಗಳ ಕುರಿತು ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆರಂಭಿಸಿರುವ ದತ್ತಿನಿಧಿಯ ಪ್ರಥಮ ಉಪನ್ಯಾಸ ಉದ್ಘಾಟಿಸಿ ಮಾತನಾಡಿದರು.
ಧರ್ಮದಿಂದ ನಡೆಯಲು ಪ್ರತಿಯೊಬ್ಬರಿಗೆ ಧಾರ್ಮಿಕ ಸಂಸ್ಕಾರ ಮುಖ್ಯ. ಸಾಹಿತ್ಯದಲ್ಲಿ ಸಂಸ್ಕಾರವಿದೆ. ಪಂಚಪೀಠಗಳ ಕುರಿತು ದತ್ತಿನಿಧಿ ಸ್ಥಾಪಿಸಿ, ಪರಂಪರೆಯನ್ನು ಇನ್ನಷ್ಟು ಜನಸಾಮಾನ್ಯರಿಗೆ ತಲುಪಿಸುವ ಮತ್ತು ಜನರನ್ನು ಸಂಸ್ಕಾರವಂತರನ್ನಾಗಿ ಮಾಡುವ ಕಾರ್ಯಕ್ರಮಗಳು ಅಗತ್ಯವಾಗಿವೆ ಎಂದರು.ಇಂದು ವೀರಶೈವ ಧರ್ಮ ಬೆಳೆಸಿ, ಉಳಿಸಲು ಪಂಚಪೀಠಗಳು ಸದಾ ನಾಡಿನ ತುಂಬಾ ಸಂಚರಿಸಿ, ಸಂಸ್ಕಾರ ನೀಡುತ್ತಿವೆ. ಧರ್ಮದ ಮಾರ್ಗ ತೋರುವುದು ಗುರುಗಳ ಕರ್ತವ್ಯ. ಅದರಂತೆ ಭಕ್ತರು ನಡೆಯುವುದು ಆದ್ಯ ಕರ್ತವ್ಯ ಎಂದ ಜಗದ್ಗುರುಗಳು, ಮಕ್ಕಳಲ್ಲಿ ಸಂಸ್ಕಾರ ಬೆಳೆಸಬೇಕು. ಪ್ರತಿಯೊಬ್ಬರು ಲಿಂಗಧಾರಣೆ, ವಿಭೂತಿ ಧಾರಣೆ ಮಾಡಬೇಕು. ವೀರಶೈವ ಧರ್ಮ ಬೋಧಿಸಿದ ಸರಳ ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನುಡಿದರು.
ನವಲಗುಂದ ತಾಲೂಕಿನ ಶಿರಕೋಳದ ಹಿರೇಮಠದ ಗುರುಸಿದ್ದೇಶ್ವರ ಶಿವಾಚಾರ್ಯರು ಪ್ರಥಮ ದತ್ತಿ ಉಪನ್ಯಾಸ ನೀಡಿದರು. ನವನಗರದ ಕಾಶಿ ಶಾಖಾಮಠದ ರಾಜಶೇಖರ ಶಿವಾಚಾರ್ಯರು, ಅಂತೂರ-ಬೆಂತೂರ ಬೂದಿಸ್ವಾಮಿ ಹಿರೇಮಠದ ಕುಮಾರದೇವರು, ಬೆಲವಂತರದ ಸಿದ್ದಯ್ಯ ಅಜ್ಜನವರು ಧರ್ಮ ಸಂದೇಶ ನೀಡಿದರು. ಕಲಘಟಗಿಯ ಹನ್ನೆರಡುಮಠದ ರೇವಣಸಿದ್ದ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು.ವೀರಶೈವ ಜಂಗಮ ಸಂಸ್ಥೆಯ ನಿರ್ದೇಶಕ ಪ್ರೊ. ಜಗದೀಶ ಕಾಡದೇವರಮಠ ಸ್ವಾಗತಿಸಿದರು. ಅಧ್ಯಕ್ಷ ಡಾ. ಎಸ್.ಎಂ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಪ್ರಭು ಕೆಂಡದಮಠ ವಂದಿಸಿದರು. ವೀರಯ್ಯ ನಾಗಲೋತಿಮಠ ನಿರೂಪಿಸಿದರು. ನಿರ್ಮಿತಿ ಕೇಂದ್ರದ ಶಿವಕುಮಾರ ಪಾಟೀಲ, ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಮೃತ್ಯುಂಜಯ ಕೋರಿಮಠ, ಪಂಚಾಕ್ಷರಯ್ಯ ಹಿರೇಮಠ, ಈಶ್ವರ ಜವಳಿ, ರಮೇಶ ಹೊಲ್ತಿಕೋಟಿ ಮತ್ತಿತರರು ಇದ್ದರು.
ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಉತ್ಸವ ಮಡಕಿಹೊನ್ನಳ್ಳಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಕ್ತರ ಜಯಘೋಷಗಳ ಮಧ್ಯದಲ್ಲಿ ಅದ್ಧೂರಿಯಾಗಿ ಜರುಗಿತು. ಗ್ರಾಮದ ಸುಮಂಗಲೆಯರು ಆರತಿ, ಪೂರ್ಣಕುಂಭ ಹೊತ್ತು ಮೆರವಣಿಗೆ ಮೂಲಕ ಜಗದ್ಗುರುಗಳನ್ನು ಸ್ವಾಗತಿಸಿದರು. ಭಜನಾ ತಂಡ, ಕರಡಿ ಮಜಲು, ಮಂಗಲವಾದ್ಯಗಳು, ಮುತ್ತೈದೆಯರ ಭಕ್ತಿಗೀತೆಗಳು ಅಡ್ಡಪಲ್ಲಕ್ಕಿ ಉತ್ಸವಕ್ಕೆ ಮೆರಗು ತಂದಿತು.ಕಾಶಿಗೆ ಬರುವ ಭಕ್ತರಿಗೆ ಜಂಗಮವಾಡಿ ಮಠದಲ್ಲಿ ಉಚಿತ ವಸತಿ, ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಕಾಶಿ ವಿಶ್ವನಾಥನ ದರ್ಶನ ಪಡೆದು ಪುಣಿತರಾಗಬೇಕು. ಈಗ ರಾಮೇಶ್ವರದಲ್ಲಿಯೂ ಭಕ್ತರಿಗೆ ಉಳಿದುಕೊಳ್ಳಲು ವಸತಿ ಸಮುಚ್ಚಯ ನಿರ್ಮಿಸಲಾಗುತ್ತಿದೆ. ಇದಕ್ಕೆ ಭಕ್ತರು ತನು ಮನ ಧನದಿಂದ ತಮ್ಮ ಸೇವೆ ಸಲ್ಲಿಸಬೇಕು ಎಂದು ಕಾಶಿ ಪೀಠದ ಡಾ. ಚಂದ್ರಶೇಖರ ಶಿವಾಚಾರ್ಯರು ತಿಳಿಸಿದ್ದಾರೆ.