ವಚನಾನಂದ ಶ್ರೀಗಳು ಗುರುವಾರ ಚಿತ್ರದುರ್ಗದಲ್ಲಿ ಹರಜಾತ್ರೆ ಪ್ರಚಾರ ಪರಿಕರ ಬಿಡುಗಡೆ ಮಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮಕರ ಸಂಕ್ರಾಂತಿ ದಿನವಾದ ಜನವರಿ 15, 2026 ರಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ಹರಜಾತ್ರೆ ನಡೆಸಲು ನಿರ್ಧರಿಸಲಾಗಿದೆ ಎಂದು ಪಂಚಮಸಾಲಿ ಗುರುಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು.

ಹರ ಜಾತ್ರೆಗೆ ಸಂಬಂಧಿಸಿದಂತೆ ಗುರುವಾರ ಇಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು ಸೂರ್ಯ ಪಥ ಬದಲಿಸುವ ಮಕರ ಸಂಕ್ರಾಂತಿ ದಿನ ಕಿತ್ತೂರು ರಾಣಿ ಚನ್ನಮ್ಮಾಜೀ ದ್ವಿಶತಮಾನ ವಿಜಯೋತ್ಸವ ಸಮಾರೋಪ ಸಮಾರಂಭ ಹಾಗೂ ಡಾ.ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳವರ 13ನೇ ವರ್ಷದ ಪುಣ್ಯ ಸ್ಮರಣೋತ್ಸವ ಹಾಗೂ ಯೋಗಸಿಂಹಾಸನಾಧೀಶ್ವರ, ಹರಪೀಠಾಧ್ಯಕ್ಷ, ಪಂಚಮಸಾಲಿ ಜಗದ್ಗುರು ವಚನಾನಂದ ಮಹಾಸ್ವಾಮಿಗಳವರ ಅಷ್ಟಮ ವಾರ್ಷಿಕ ಪೀಠಾರೋಹಣ ಸಮಾರಂಭ ಅಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ.

ಕಿತ್ತೂರು ರಾಜ್ಯವನ್ನಾಳಿದ ವೀರ ರಾಣಿ-ಕಿತ್ತೂರು ಚನ್ನಮ್ಮಾಜಿ ಅವರ ದ್ವಿ ಶತಮಾನೋತ್ಸವ ಸಂಭ್ರಮಾಚರಣೆಯ ಸವಿ ನೆನಪಿಗಾಗಿ, ಅವರ ಹೆಸರಿನಲ್ಲಿ 200 ರು. ಮುಖಬೆಲೆಯ ನಾಣ್ಯವನ್ನು ಬಿಡುಗಡೆಗೊಳಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಕೇಂದ್ರ ಸರ್ಕಾರ ಕಳೆದ ವರ್ಷ ಸಂಸತ್ ಭವನದಲ್ಲಿ 200 ರು. ಮುಖ ಬೆಲೆಯ ನಾಣ್ಯವನ್ನು ಬಿಡುಗಡೆಗೊಳಿಸಿರುವುದು ಸಂತಸದ ವಿಷಯವಾಗಿದೆ ಎಂದು ವಚನಾನಂದಶ್ರೀಗಳು ಹೇಳಿದರು.

ಈ ವರ್ಷದ ಹರ ಜಾತ್ರೆಯ ನಿಮಿತ್ತ ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದಿರುವ ಮಹನೀಯ ಸಾಧಕರನ್ನು ಗುರುತಿಸಿ, ಅವರುಗಳಿಗೆ ವೀರ ರಾಣಿ ಕಿತ್ತೂರು ಚನ್ನಮ್ಮಾಜಿ ಹೆಸರಿನಲ್ಲಿ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ ಎಂದರು.

ಹರಜಾತ್ರೆಯ ಅಧ್ಯಕ್ಷ ಹಾವೇರಿಯ ವೈದ್ಯ ಡಾ.ಬಸವರಾಜ ವೀರಾಪುರ, ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ, ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಜಿಲ್ಲಾ ಘಟಕ ಜಿಲ್ಲಾಧ್ಯಕ್ಷ ಜೆ.ಶಿವಪ್ರಕಾಶ, ವೀರಶೈವ ಸಮಾಜದ ಅಧ್ಯಕ್ಷ ತಿಪ್ಪೇಸ್ವಾಮಿ, ಅಖಿಲ ಭಾರತ ವೀರಶೈವ ಲಿಂಗಾಯತವ ಸಮಾಜದ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ, ಆಶಾಕಲ್ಲಪ್ಪ, ಶಿವನಂದಗೌಡ ಪಾಟೀಲ್, ಬಸವರಾಜು, ಮಾಮದೇವ್, ಶಿವಕುಮಾರ್ ಇದ್ದರು.