2ಎ ಮೀಸಲಾತಿ ಹೋರಾಟ ಮುಂದುವರಿಸುತ್ತಾ, ಬೃಹತ್ ಉದ್ಯೋಗ ಮೇಳ ನಡೆಸಲಾಗಿದೆ. 18 ವಿವಿ ಕುಲಪತಿಗಳೊಂದಿಗೆ ಶೃಂಗಸಭೆ ನಡೆಸಲಾಗಿದೆ.
ಕೂಡ್ಲಿಗಿ: ಭಕ್ತರ ಧನಸಹಾಯದಲ್ಲೇ ನಿತ್ಯ ದಾಸೋಹ, ಅನಾಥ, ಕಡುಬಡ ಮಕ್ಕಳಿಗೆ ಉಚಿತ ಶಿಕ್ಷಣ ಕಲ್ಪಿಸಲು ಸಾಧ್ಯವಾಗಿದೆ. ಹರಿಹರ ಪೀಠದಲ್ಲಿ ಪ್ರತಿ ವರ್ಷ ಜ.15ರಂದು ಹರ ಜಾತ್ರೆ ಆರಂಭಿಸಿರುವುದು ಪಂಚಮಸಾಲಿ ಸಮುದಾಯವನ್ನು ಒಗ್ಗಟ್ಟಿಸುವ ಉದ್ದೇಶವಾಗಿದೆ ಎಂದು ಹರಿಹರ ಪೀಠದ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪಂಚಮಸಾಲಿ ಸಂಘದ ತಾಲೂಕು ಘಟಕದಿಂದ ಬುಧವಾರ ಆಯೋಜಿಸಿದ್ದ ಹರ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.2ಎ ಮೀಸಲಾತಿ ಹೋರಾಟ ಮುಂದುವರಿಸುತ್ತಾ, ಬೃಹತ್ ಉದ್ಯೋಗ ಮೇಳ ನಡೆಸಲಾಗಿದೆ. 18 ವಿವಿ ಕುಲಪತಿಗಳೊಂದಿಗೆ ಶೃಂಗಸಭೆ ನಡೆಸಲಾಗಿದೆ. ತರಳಬಾಳು ಉತ್ಸವದ ಮಾದರಿಯಲ್ಲಿ ನಮ್ಮ ಹರ ಜಾತ್ರೆ ಮಾಡುವ ಮೂಲಕ ಕೃಷಿ ಮೇಳ, ಹರ ಮಾಲೆ ಸೇರಿ ನಾನಾ ಕಾರ್ಯಗಳನ್ನು ಮಾಡಬೇಕಾಗಿದೆ ಎಂದರು.
ಪಂಚಮಸಾಲಿ ಸಮುದಾಯದ ಹರಿಹರ ಪೀಠವನ್ನು ಅಕ್ಷರ, ಅನ್ನ, ಆಶ್ರಯದ ಜತೆಗೆ ಧ್ಯಾನ, ಯೋಗಾಭ್ಯಾಸದಂಥ ಪಂಚ ದಾಸೋಹದ ಪೀಠವನ್ನಾಗಿ ಮಾಡುವ ಸಂಕಲ್ಪ ಹೊಂದಿದ್ದೇವೆ ಎಂದು ತಿಳಿಸಿದರು.ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಸೋಮನಗೌಡ ಮಾತನಾಡಿ, ಪೀಠದ ಸ್ವಾಮೀಜಿ ಮತ್ತು ನಾನು ಸೇರಿದಂತೆ ಮುಖಂಡರು ರಾಜ್ಯಾದ್ಯಂತ ಪ್ರವಾಸ ಮಾಡಿ ಹರ ಜಾತ್ರೆಗೆ ಬರುವಂತೆ ಸಭೆ ಮಾಡಲಾಗಿದೆ. ಜಾತ್ರೆಗೆ ಬರುವ ಪ್ರತಿ ಮಹಿಳೆಗೆ ಕಂಕಣ ಕಟ್ಟಿ, ಕುಂಕುಮ ಇಡುವ ಸಂಪ್ರದಾಯ ಮಾಡಿದ್ದೇವೆ. ರೈತರಿಗೆ ಹೆಣ್ಣು ಕೊಡಲ್ಲ ಎಂಬ ಅಪವಾದ ಹೋಗಲಾಡಿಸಲು ಜಾತ್ರೆ ಸಂದರ್ಭದಲ್ಲಿ ವಧು-ವರರ ಅನ್ವೇಷಣೆಯನ್ನು ನಡೆಸುತ್ತಿದ್ದು, ಬಯೋಡೆಟಾ ತರುವಂತೆ ತಿಳಿಸಿದರು. ಎಲ್ಲರೂ ಹಣ ನೀಡಿ ಸಹಕಾರ ಕೊಟ್ಟರೆ ರಥ ನಿರ್ಮಿಸಲಾಗುವುದು. ಪ್ರೋತ್ಸಾಹ ಸಿಗದಿದ್ದರೆ ನಾನು ಎರಡು ಎಕರೆ ಜಮೀನು ಮಾರಾಟ ಮಾಡಿ ತೇರು ನಿರ್ಮಿಸಲಾಗುವುದು ಎಂದು ತಿಳಿಸಿದರು.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಪಂಚಮಸಾಲಿ ಸಮುದಾಯದ ಹಿರಿಯ ಮುಖಂಡ ಗುಂಡುಮುಣುಗು ಕೆ.ತಿಪ್ಪೇಸ್ವಾಮಿ ಮಾತನಾಡಿ, ಪಂಚಮಸಾಲಿ ಸಮುದಾಯ ಸಂಘಟಿತರಾಗಿ ಅಭಿವೃದ್ಧಿಗೆ ಮುಂದಾಗಬೇಕಿದೆ. ಪಂಚಮಸಾಲಿ ಪೀಠದ ಇಬ್ಬರು ಜಗದ್ಗುರುಗಳು ಒಂದಾಗಿದ್ದಾರೆ ಎಂದು ತಿಳಿಸಿದರು.ಹರಿಹರದಲ್ಲಿ ಜ.15ರಂದು ನಡೆಯುವ ಹರ ಜಾತ್ರೆಗೆ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸೋಣ ಎಂದು ತಿಳಿಸಿದರು.
ಪಂಚಮಸಾಲಿ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್ ಪಾಟೀಲ್ ಮಾತನಾಡಿ, ಸಮುದಾಯವು ಒಗ್ಗಟ್ಟಾಗಬೇಕೆಂಬ ಸಂಕಲ್ಪದೊಂದಿಗೆ ಮಕರ ಸಂಕ್ರಾಂತಿಯನ್ನು ಎಳ್ಳು, ಬೆಲ್ಲ ಸವಿಯುವ ಸಂದರ್ಭಕ್ಕಾಗಿ ಪ್ರತಿವರ್ಷ ಹರ ಜಾತ್ರೆ ಆಚರಿಸಲಾಗುತ್ತಿದೆ. 200ನೇ ವರ್ಷದ ಕಿತ್ತೂರು ರಾಣಿ ಚೆನ್ನಮ್ಮ ವಿಜಯೋತ್ಸವ, ಪೀಠಾಧ್ಯಕ್ಷರಾಗಿ 8 ವರ್ಷದ ಪೀಠಾರೋಹಣ, ಪಲ್ಲಕ್ಕಿ ಉತ್ಸವ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಈ ವರ್ಷ ಹರ ಜಾತ್ರೆ ಮಾಡುವ ಉದ್ದೇಶ ಮಾಡಲಾಗಿದೆ ಎಂದರು.ಗುಳಿಗಿ ವೀರೇಂದ್ರ ಅವರ ಜನ್ಮದಿನಕ್ಕೆ 20 ಕ್ವಿಂಟಲ್ ಅಕ್ಕಿಯನ್ನು ನೀಡಿದ್ದು ಅನ್ನದಾಸೋಹಕ್ಕೆ ಆಸರೆಯಾಗಿದೆ ಎಂದು ತಿಳಿಸಿದರು.
ಹರ ಜಾತ್ರೆ ಸಮಿತಿ ಅಧ್ಯಕ್ಷ ಡಾ.ಬಸವರಾಜ ವೀರಾಪುರ ಮಾತನಾಡಿ, ₹20 ಲಕ್ಷ ವೆಚ್ಚದ ರಥ ನಿರ್ಮಿಸುವುದಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಕೋರಿದರು.ಪಂಚಮಸಾಲಿ ಸಂಘದ ಯುವ ಘಟಕದ ರಾಜ್ಯಾಧ್ಯಕ್ಷ ಕಿಚಿಡಿ ಕೊಟ್ರೇಶ್ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಅಕ್ಕಮಹಾದೇವಿಯಂಥ ಮಹಿಳಾ ಸಾಧಕರು ಪಂಚಮಸಾಲಿ ಸಮುದಾಯದವರು ಎನ್ನುವ ಹೆಮ್ಮೆಯಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಹರಿಹರ ಪಂಚಮಸಾಲಿ ಪೀಠದಲ್ಲಿ ಹರ ಜಾತ್ರೆಯ ಪೋಸ್ಟರ್ ಗಳನ್ನು ಬಿಡುಗಡೆಗೊಳಿಸಲಾಯಿತು. ಹರಪನಹಳ್ಳಿ ಎ.ಜಿ. ಮಂಜುನಾಥ, ರಾಜ್ಯ ನೌಕರರ ಘಟಕದ ಅಧ್ಯಕ್ಷ ರವಿ ಉತ್ತಂಗಿ, ಜಿಲ್ಲಾಧ್ಯಕ್ಷ ಎಂ.ಜಿ. ರವೀಂದ್ರ, ಕೋಗಳಿ ಕೊಟ್ರೇಶ್, ಟಿ.ಜಿ. ನಾಗರಾಜ ಗೌಡ, ಸುನಿಲ್ ಗೌಡ, ಮರುಳಸಿದ್ದಪ್ಪ, ನಂದಿ ಬಸವರಾಜ, ಲಕ್ಷ್ಮಿದೇವಿ, ಕಾನಾಹೊಸಹಳ್ಳಿ ಜಗದೀಶ್ ಎಂ.ಬಿ.ಅಯ್ಯನಹಳ್ಳಿ ಅಜ್ಜನಗೌಡ, ಹಾರಕಬಾವಿ ಗ್ರಾಪಂ ಅಧ್ಯಕ್ಷ ಕೋಟಿಲಿಂಗನಗೌಡ ಇದ್ದರು.