ತಾಲೂಕಿನ ಕೇರವಾಡ ಕ್ರಾಸ್ ಬಳಿ ಇರುವ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ ಸಾಂಬ್ರಾಣಿಯಲ್ಲಿ ಮಕ್ಕಳಿಗೆ ಕಳಪೆ ಆಹಾರ ಪೂರೈಕೆ ಮಾಡಲಾಗುತ್ತಿದೆ ಮತ್ತು ಇತರ ಸೌಲಭ್ಯ ಸಮರ್ಪಕವಾಗಿ ದೊರೆಯುತ್ತಿಲ್ಲ ಎಂದು ವಿದ್ಯಾರ್ಥಿಗಳ ಪಾಲಕರು ಮಾಧ್ಯಮಗಳ ಎದುರಿಗೆ ತಮ್ಮ ಅಸಮಾಧಾನ ಹೊರಹಾಕಿದ ಘಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಹಳಿಯಾಳ

ತಾಲೂಕಿನ ಕೇರವಾಡ ಕ್ರಾಸ್ ಬಳಿ ಇರುವ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ ಸಾಂಬ್ರಾಣಿಯಲ್ಲಿ ಮಕ್ಕಳಿಗೆ ಕಳಪೆ ಆಹಾರ ಪೂರೈಕೆ ಮಾಡಲಾಗುತ್ತಿದೆ ಮತ್ತು ಇತರ ಸೌಲಭ್ಯ ಸಮರ್ಪಕವಾಗಿ ದೊರೆಯುತ್ತಿಲ್ಲ ಎಂದು ವಿದ್ಯಾರ್ಥಿಗಳ ಪಾಲಕರು ಮಾಧ್ಯಮಗಳ ಎದುರಿಗೆ ತಮ್ಮ ಅಸಮಾಧಾನ ಹೊರಹಾಕಿದ ಘಟನೆ ನಡೆಯಿತು.

ಶುಕ್ರವಾರ ಶಾಲೆಯಿಂದ ಆಯೋಜಿಸಲಾಗಿದ್ದ 2025-26ನೇ ಸಾಲಿನ ಪಾಲಕರ ಸಭೆಗೆ ಆಗಮಿಸಿದ್ದ ವಿದ್ಯಾರ್ಥಿಗಳ ಪಾಲಕರು ವಸತಿ ಶಾಲೆಯಲ್ಲಿನ ಅವ್ಯವಸ್ಥೆಯ ಆಗರವನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರಲ್ಲದೇ ತಮ್ಮ ಮಕ್ಕಳ ಆರೋಗ್ಯದ ಜೊತೆ ವಾರ್ಡನ್ ಮತ್ತು ಶಾಲೆಯ ಪ್ರಾಂಶುಪಾಲರು ಆಟವಾಡುತ್ತಿದ್ದಾರೆಂದು ಕಿಡಿ ಕಾರಿದರು‌.

ಈ ವಸತಿ ಶಾಲೆಯಲ್ಲಿ ಹಳಿಯಾಳ ತಾಲೂಕಿನ ಮಾತ್ರವಲ್ಲದೇ ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ಧಾರವಾಡ, ಹಾನಗಲ್ ಇತರ ಭಾಗಗಳ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.

ಸಭೆಗೂ ಮುನ್ನ ಪಾಲಕರು ಮಕ್ಕಳಿಂದ ಬರುತ್ತಿದ್ದ ದೂರುಗಳನ್ನು ಆಲಿಸಿ ವಸತಿ ಶಾಲೆಯ ಮೇಲ್ವಿಚಾರಕ ಈಶ್ವರ ಸಂಗಯ್ಯಗೊಳ ಅವರಿಗೆ ವಸತಿ ಶಾಲೆಯನ್ನು ತೋರಿಸುವಂತೆ ಕೇಳಿದಾಗ ಅವರು ಕೆಲಕಾಲ ಅವಕಾಶ ನೀಡದೆ ಎಲ್ಲ ಸರಿಯಾಗಿದೆ ಎಂದು ವಾದಿಸಿದರು. ಇದಕ್ಕೆ ಪಾಲಕರಿಂದ ಪ್ರತಿರೋಧ ವ್ಯಕ್ತವಾಗಿ ಸಭೆ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು‌.

ಇದರಿಂದ ಗಲಿಬಿಲಿಗೊಂಡ ಈಶ್ವರ ಪಾಲಕರಿಗೆ ಅವಕಾಶ ನೀಡಿದಾಗ ಪಾಲಕರು ಖುದ್ದು ಮಕ್ಕಳೊಂದಿಗೆ ತೆರಳಿ ಆಹಾರ ದಾಸ್ತಾನು ಕೊಠಡಿ, ಶೌಚಗೃಹ, ನೀರಿನ ಟ್ಯಾಂಕಗಳು ಎಲ್ಲೆಡೆ ಪರಿಶೀಲನೆ ನಡೆಸಿದಾಗ ಅಲ್ಲಿ ಅಕ್ಕಿಯ ಮೂಟೆಗಳು ಇಲಿ, ಹಲ್ಲಿಯ ಮಲ(ಹಿಕ್ಕೆ) ಯಿಂದ, ನುಶಿಯಿಂದ , ಕಸ ಕಡ್ಡಿಗಳಿಂದ ತುಂಬಿರುವುದು ಜೊತೆಗೆ ಬಳಸಲು ಅಯೋಗ್ಯವಾದ 5 ಕ್ವಿಂಟಲ್‌ನಷ್ಟು ಗೋದಿ, ಮೊಳಕೆ ಒಡೆದ ಬಟಾಟೆ, ಈರುಳ್ಳಿ, ಗಜ್ಜರಿ, ಕೊಳೆತ ಬದನೆಕಾಯಿ, ಬಿಟ್ರೂಟ್ ಇತ್ಯಾದಿ ತರಕರಾರಿಯನ್ನು ಮತ್ತು ಬಳಸಲು ಯೋಗ್ಯವಲ್ಲದ ಶೇಂಗಾವನ್ನು ಕಂಡು ಹೌಹಾರಿದ ಪಾಲಕರು ತಮ್ಮ ಮಕ್ಕಳಿಗೆ ಯೋಗ್ಯವಲ್ಲದ ಆಹಾರ ಬಡಿಸಲಾಗುತ್ತಿದೆ ಎಂದು ಖಚಿತಪಡಿಸಿಕೊಂಡು ಆಘಾತಕ್ಕೆ ಒಳಗಾದರು.

ಈ ಸಂದರ್ಭದಲ್ಲಿ ಪಾಲಕರು ವಸತಿ ನಿಲಯ ಮೇಲ್ವಿಚಾರಕರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸುವ ಬಗ್ಗೆ ಎಚ್ಚರಿಕೆ ನೀಡಿದರು.

ಬಳಿಕ ನಡೆದ ಪಾಲಕರ ಸಭೆಯಲ್ಲಿ ಅನೇಕ ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಆಹಾರ ನೀಡುತ್ತಿಲ್ಲ, ಶೌಚಗೃಹಗಳಂತೂ ಬಳಸಲು ಯೋಗ್ಯವಾಗಿಲ್ಲ, ನೀರಿನ ಟ್ಯಾಂಕ್ ಸ್ವಚ್ಚವಾಗಿಲ್ಲ ಇದಷ್ಟೇ ಅಲ್ಲದೇ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ ‌ಇದು ಯಾವ ನ್ಯಾಯ ಎಂದು ಕಿಡಿಕಾರಿದರಲ್ಲದೇ ವಸತಿ ಶಾಲೆಯ ಮೇಲ್ವಿಚಾರಕ ಮತ್ತು ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡರು.

ಪಾಲಕರ ಸಭೆಯಲ್ಲಿ ಮಾತನಾಡಿದ ಗಣಿತ ಶಿಕ್ಷಕ ಪ್ರಶಾಂತ ಹೆಗಡೆ, ಮಕ್ಕಳ ಪಾಲಕರು ವಸತಿ ಶಾಲೆಯಲ್ಲಿ ಪರಿಶೀಲನೆ‌ ಮಾಡುವಂತಿಲ್ಲ, ನೀವು ಹೀಗೆ ಮಾಡಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪಾಲಕರಿಗೆ ಆವಾಜ್ ಹಾಕಿದ್ದು ಮಾತ್ರ ಇಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಆರೋಪಗಳಿಗೆ ಪುಷ್ಟಿ ನೀಡಿದಂತಾಯಿತು.

ಶಾಲೆಯ ಪ್ರಾಂಶುಪಾಲ ಶಿವಾನಂದ ಜೆ. ಈ ಬಗ್ಗೆ ಸಾಕಷ್ಟು ಕಾರಣ ನೀಡಲು ಪ್ರಯತ್ನಿಸಿದರೂ ಪಾಲಕರ ಕೋಪ ಮಾತ್ರ ಕಡಿಮೆ ಆಗದೆ ಇರುವುದು ಕಂಡು ಬಂದಿತು.ಮಕ್ಕಳ ಆರೋಗ್ಯದೊಂದಿಗೆ ಚೆಲ್ಲಾಟ

ವಸತಿ ಶಾಲೆಯಲ್ಲಿ ಮಕ್ಕಳ ಆರೋಗ್ಯದೊಂದಿಗೆ ಚೆಲ್ಲಾಟ ಆಡಲಾಗುತ್ತಿದೆ.‌ ಇಲ್ಲಿ ಪರಿಸರ ಹಾಳಾಗಿದೆ, ನೀರಿನ ವ್ಯವಸ್ಥೆ ಸರಿಯಾಗಿಲ್ಲ ತಮ್ಮ ಜೊತೆ ಆಗುತ್ತಿರುವ ಅನ್ಯಾಯದ ಬಗ್ಗೆ ಹೇಳುವ ಮಕ್ಕಳನ್ನು ಗುರಿಯಾಗಿಸಿ ಸಮಸ್ಯೆ ಮಾಡಲಾಗುತ್ತಿದೆ ಎಂದು ವಿವಿಧ ತಾಲೂಕುಗಳಿಂದ ಬಂದಿದ್ದ ಮಕ್ಕಳ ಪಾಲಕರಾದ ಸಂಜು ಕಾಮ್ರೇಕರ, ವೀರೇಶ ಕುಪಕಡ್ಡಿ, ಸುಭಾನಿ ಮಸ್ತಮದನಿ, ಮಂಜುನಾಥ ದಡ್ಡಿಕರ, ಯಲ್ಲಪ್ಪ ಜಿವೋಜಿ, ಸಂತೋಷ ಬೆಳಗಾಂವಕರ ಮಾಧ್ಯಮಗಳ ಎದುರು ತಮ್ಮ ಸಮಸ್ಯೆ ಹೇಳಿಕೊಂಡರು.