ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುತಾಲೂಕಿನ ಹರಳೂರು ಶ್ರೀ ವೀರಭದ್ರಸ್ವಾಮಿ ರಥೋತ್ಸವ ಅದ್ಧೂರಿಯಾಗಿ ನಡೆಯಿತು. ಏ. 30 ರಿಂದ ವೀರಭದ್ರಸ್ವಾಮಿಯ ಜಾತ್ರಾ ಮಹೋತ್ಸವ ಆರಂಭವಾಗಿದ್ದು, ಎರಡು ದಿನಗಳ ಧಾರ್ಮಿಕ ವಿಧಿ, ವಿಧಾನ ಮತ್ತು ಪೂಜಾ ಕೈಂಕರ್ಯಗಳ ನಂತರ ಗುರುವಾರ ಮಧ್ಯಾಹ್ನ 1 ಗಂಟೆಗೆ ಶ್ರೀ ವೀರಭದ್ರಸ್ವಾಮಿಯ ರಥೋತ್ಸವ ಜರುಗಿತು.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಶ್ರೀ ವೀರಭದ್ರಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಕುಮಾರಯ್ಯ ಮಾತನಾಡಿ, ಹರಳೂರಿನ ಶ್ರೀ ವೀರಭದ್ರಸ್ವಾಮಿಗೆ ಪುರಾತನ ಇತಿಹಾಸವಿದೆ. ಗೌತಮ ಮಹರ್ಷಿಗಳು ಪ್ರವಾಸದ ಸಂದರ್ಭದಲ್ಲಿ ಈ ಪ್ರದೇಶಕ್ಕೆ ಬಂದು ಇಷ್ಟಲಿಂಗ ಪೂಜೆಗೆ ಅಗತ್ಯವಿರುವ ಹೂವುಗಳನ್ನು ಹರಳೂರಿನಿಂದ ತೆಗೆದುಕೊಂಡು ಹೋಗುತ್ತಿದ್ದರೂ ಎಂದು ಪುರಾಣದ ಕಥೆಗಳು ಹೇಳುತ್ತವೆ ಎಂದರು.
ಚೋಳರ ವಾಸ್ತುಶಿಲ್ಪ ಶೈಲಿಯಲ್ಲಿ ಪುರಾತನ ಶ್ರೀ ವೀರಭದ್ರಸ್ವಾಮಿ ದೇವಾಲಯ ನಿರ್ಮಾಣಗೊಂಡಿದ್ದು, ಇತ್ತೀಚಿಗೆ ಕೆಲ ಭಾಗ ಜೀರ್ಣೋದ್ದಾರಗೊಂಡಿದೆ. ಶೈವ ಪರಂಪರೆ ಶ್ರೀ ವೀರಭದ್ರಸ್ವಾಮಿ ದೇವಾಲಯದಲ್ಲಿ ಶಿವನ ಜೊತೆಗೆ, ಚನ್ನಕೇಶವಸ್ವಾಮಿಯ ಮೂರ್ತಿಗಳು ಪೂಜಿಸಲ್ಪಡುತ್ತವೆ ಎಂದು ಹೇಳಿದರು.ಜಾತ್ರಾ ಮಹೋತ್ಸವದ ಉತ್ಸವ ಮೂರ್ತಿ ಅದ್ಬುತ, ಮನೋಹರವಾಗಿದೆ. ಸುಮಾರು 400 ವರ್ಷಗಳಿಗೂ ಹೆಚ್ಚು ಕಾಲದಿಂದ ಇಲ್ಲಿ ಪ್ರತಿ ವರ್ಷ ಒಂದು ವಾರಗಳ ಕಾಲ ಜಾತ್ರಾ ಮಹೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಸದರಿ ಜಾತ್ರೆಗೆ ಸಿದ್ದಗಂಗೆಯ ಲಿಂಗೈಕ್ಯರಾದ ತ್ರಿವಿಧ ದಾಸೋಹಿ ಡಾ.ಶ್ರೀ ಶಿವಕುಮಾರ ಸ್ವಾಮಿಜೀಗಳು ಪ್ರತಿ ವರ್ಷ ಚಾಲನೆ ನೀಡುತ್ತಿದ್ದರು. ಇದರ ನೆನಪಿಗಾಗಿ ಸ್ವಾಮೀಜಿಗಳು ಲಿಂಗೈಕ್ಯರಾದ ನಂತರ ಜಾತ್ರಾ ಸಂದರ್ಭದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಗಳ ಉತ್ಸವವನ್ನು ಸಹ ಕಳೆದ ಎರಡು ವರ್ಷಗಳಿಂದ ಜಾತ್ರೆಯ ಮುನ್ನದಿನ ನಡೆಸಲಾಗುತ್ತಿದೆ ಎಂದರು.ಈ ವರ್ಷ ರಾಜ್ಯದಲ್ಲಿ ಭೀಕರ ಬರಗಾಲ ಮತ್ತು ಅತಿಯಾದ ತಾಪಮಾನವಿದ್ದು, ಇದರ ನಿವಾರಣೆಗಾಗಿ ಶ್ರೀ ವೀರಭದ್ರ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಗಿದೆ. ಜಾತ್ರೆಗೆ ಬರುವ ಎಲ್ಲ ಭಕ್ತರಿಗೆ ದಾಸೋಹದ ಜೊತೆಗೆ, ನಗರಗಳಿಂದ ಬಂದು ಹೋಗಲು ವಾಹನದ ವ್ಯವಸ್ಥೆ ಸಹ ಕೆಎಸ್‌ಆರ್‌ಟಿಸಿ ಸಹಯೋಗದಲ್ಲಿ ಮಾಡಲಾಗಿದೆ. ಜಾತ್ರೆ ಸಮಯವಲ್ಲದೆ ದೇವಾಲಯಕ್ಕೆ ಬರುವ ಭಕ್ತರಿಗೆ ಪ್ರತಿ ದಿನವೂ ದಾಸೋಹ ನೀಡಲಾಗುತ್ತದೆ. ಶ್ರೀ ಶಿವಕುಮಾರ ಸ್ವಾಮೀಜಿಗಳು ಆರಂಭಿಸಿರುವ ದಾಸೋಹ ಎಂದಿಗೂ ನಿಲ್ಲುವುದಿಲ್ಲ. ನಿರಂತರವಾಗಿ ನಡೆದುಕೊಂಡು ಹೋಗಲಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಹೇಳಿದರು.ಮೇ.4 ರ ಸಂಜೆ 7 ಗಂಟೆಗೆ ಶ್ರೀ ವೀರಭದ್ರಸ್ವಾಮಿಗೆ ಬೆಲ್ಲದ ಆರತಿ ಸೇವೆ, ರಾತ್ರಿ 10 ಗಂಟೆಗೆ ಅಕ್ಕಿ ಪೂಜಾ ಅಲಂಕಾರ, ಪಲ್ಲಕ್ಕಿ ಉತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ ಜರುಗಲಿದೆ. ಮೇ.5ರಂದು ತಿರುಮಣಿ ಉತ್ಸವ, ಮೇ.6 ಕ್ಕೆ ಓಕಳಿ ಮೆರವಣಿಗೆ ಜರುಗಲಿದೆ. ಹರಳೂರು ಜಂಗಮಮಠದ ಶ್ರೀ ಚನ್ನಬಸವಸ್ವಾಮೀಗಳ ನೇತೃತ್ವದಲ್ಲಿ ಎಲ್ಲ ಧಾರ್ಮಿಕ ಕೈಂಕರ್ಯಗಳು ಜರುಗಲಿವೆ.
ಶ್ರೀ ವೀರಭದ್ರಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಕೆ.ಎಸ್.ಶಂಕರಯ್ಯ, ಕಾರ್ಯದರ್ಶಿ ಹೆಚ್.ಎಸ್.ಉಮಾಶಂಕರ್, ಶ್ರೀ ವೀರಭದ್ರಸ್ವಾಮಿ ದಾಸೋಹ ಟ್ರಸ್ಟನ ಅಧ್ಯಕ್ಷ ಕುಮಾರಯ್ಯ ಎಚ್.ಕೆ., ಕಾರ್ಯದರ್ಶಿ ರುದ್ರೇಶ್, ಮಲ್ಲಿಕಾರ್ಜುನ್, ಹರಳೂರು ಶಿವಕುಮಾರ್, ಸೇರಿದಂತೆ ಪದಾಧಿಕಾರಿಗಳು, ಹರಳೂರು ಗ್ರಾಮಸ್ಥರು, ಭಕ್ತಾಧಿಕಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.ಕಂಬದ ರಂಗಯ್ಯ ತಂಡದಿಂದ ಸಂಗೀತ ಕಾರ್ಯಕ್ರಮ: ರಥೋತ್ಸವದ ನಂತರವೂ ಜಾತ್ರಾ ಮಹೋತ್ಸವ ಮುಂದುವರೆಯಲಿದ್ದು, ಶುಕ್ರವಾರ ರಾತ್ರಿ ನಂದಿ ವಾಹನ ಸೇವೆ ಜರುಗಲಿದೆ. ಸಂಜೆ 6:40 ಕ್ಕೆ ಜೀ ಕನ್ನಡ ಸರಿಗಮಪ ಖ್ಯಾತಿಯ ಕಂಬದ ರಂಗಯ್ಯ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ಜರುಗಲಿದೆ.