ಸಾರಾಂಶ
ಅರಣ್ಯ ವಸತಿ ಮತ್ತು ವಿಹಾರ ಧಾಮ ಜಂಗಲ್ ಲಾಡ್ಜ್ ವತಿಯಿಂದ ಹಾರಂಗಿ ಜಲಾಶಯದಲ್ಲಿ ದಿಢೀರನೆ ವಾಟರ್ ಸ್ಪೋರ್ಟ್ಸ್ ಸಾಹಸಿ ಕ್ರೀಡಾ ಚಟುವಟಿಕೆಗೆ ಅಧಿಕೃತ ಚಾಲನೆ ನೀಡಿರುವುದು ಬೆಳಕಿಗೆ ಬಂದಿದೆ. ಈ ಬೆಳವಣಿಗೆಗೆ ಸ್ಥಳೀಯರು ಹಾಗೂ ನಾಗರಿಕರ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕನ್ನಡಪ್ರಭ ವಾರ್ತೆ ಕುಶಾಲನಗರ
ಹಾರಂಗಿ ಜಲಾಶಯದಲ್ಲಿ ಅರಣ್ಯ ವಸತಿ ಮತ್ತು ವಿಹಾರ ಧಾಮ ಜಂಗಲ್ ಲಾಡ್ಜ್ ವತಿಯಿಂದ ದಿಢೀರನೆ ವಾಟರ್ ಸ್ಪೋರ್ಟ್ಸ್ ಸಾಹಸಿ ಕ್ರೀಡಾ ಚಟುವಟಿಕೆಗೆ ಅಧಿಕೃತ ಚಾಲನೆ ನೀಡಿರುವುದು ಬೆಳಕಿಗೆ ಬಂದಿದೆ.ಯುಗಾದಿ ದಿನದಿಂದ ಪ್ರವಾಸಿಗರಿಗೆ ಜಲಾಶಯದಲ್ಲಿ ಸಾಹಸಿ ಕ್ರೀಡಾ ಚಟುವಟಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸಂಸ್ಥೆಯ ಸಿಬ್ಬಂದಿ ತಿಳಿಸಿದ್ದಾರೆ.
ಮಾ.7ರಂದು ಅಧಿಕೃತವಾಗಿ ಉದ್ಘಾಟನೆಗೊಳ್ಳ ಬೇಕಾಗಿದ್ದ ಸಾಹಸಿ ಕ್ರೀಡಾ ಚಟುವಟಿಕೆ ಹಲವು ಕಾರಣಗಳಿಂದ ದಿಢೀರ್ ರದ್ದುಗೊಂಡಿತ್ತು. ಸ್ಥಳೀಯ ಜನಪ್ರತಿನಿಧಿಗಳು ಮತ್ತು ನಾಗರಿಕರ ದೂರಿನ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಂದೂಡಲಾಗಿತ್ತು.ಇದೀಗ ನಿರಂತರ ಸರಕಾರಿ ರಜೆಗಳ ನಡುವೆ ಈ ಚಟುವಟಿಕೆ ಆರಂಭಗೊಂಡಿದ್ದು ತಿಳಿದು ಹಾರಂಗಿ , ಅತ್ತೂರು ನದಿ ತಟದ ಸುತ್ತಮುತ್ತಲ ವ್ಯಾಪ್ತಿಯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೇಸಿಗೆಯ ನಡುವೆ ನೀರಿನ ಕೊರತೆ ಎದುರಿಸುತ್ತಿರುವ ಹಾರಂಗಿ ಮತ್ತು ಕಾವೇರಿ ಜಲಾನಯನ ಪ್ರದೇಶಗಳ ಜನರು ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿರುವ ನಡುವೆ ಮೋಜು ಮಸ್ತಿಗಾಗಿ ಸರ್ಕಾರದ ಅಂಗ ಸಂಸ್ಥೆ ಯೊಂದು ಜಲಾಶಯದ ನೀರನ್ನು ಬಳಸುತ್ತಿರುವುದು ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.ಇಂತಹ ಕ್ರೀಡೆಗಳನ್ನು ಆಯೋಜಿಸಿದಲ್ಲಿ ನದಿ ನೀರಿನ ಗುಣಮಟ್ಟ ಸಂಪೂರ್ಣ ಕುಸಿಯಲಿದೆ ಎನ್ನುತ್ತಾರೆ ಕೂಡು ಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್.
ಈ ಬಗ್ಗೆ ಈಗಾಗಲೇ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರಿಗೆ ಸಮಗ್ರ ಮಾಹಿತಿ ನೀಡಲಾಗಿದೆ, ಅವರ ಗಮನಕ್ಕೆ ಬಾರದೆ ಈ ರೀತಿಯ ಚಟುವಟಿಕೆಗಳು ನಡೆಯುತ್ತಿವೆ. ತಕ್ಷಣ ಈ ಚಟುವಟಿಕೆಗಳಿಗೆ ನಿರ್ಬಂಧ ಹೇರದಿದ್ದಲ್ಲಿ ಹಾರಂಗಿ ಅತ್ತೂರು ಭಾಗದ ಜನತೆ ಈ ಬಾರಿಯ ಲೋಕಸಭಾ ಚುನಾವಣೆ ಬಹಿಷ್ಕಾರ ಮಾಡುವ ಮೂಲಕ ಪ್ರತಿಭಟಿಸಲಾಗುವುದು ಎಂದು ತಿಳಿಸಿದ್ದಾರೆ.ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಕ್ಷೇತ್ರದ ಶಾಸಕ ಡಾ ಮಂತರ್ ಗೌಡ, ತನಗೆ ಈ ಬಗ್ಗೆ ಮಾಹಿತಿ ಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಜಲಾಶಯದಿಂದ ಹಾರಂಗಿ ಅತ್ತೂರು ಮತ್ತು ಕೆಳಭಾಗದ ನದಿ ತಟದ ಜನತೆಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಅಲ್ಲದೆ ಸೋಮವಾರಪೇಟೆ ಪಟ್ಟಣಕ್ಕೆ ಇದೇ ಜಲಾಶಯದಿಂದ ಕುಡಿಯುವ ನೀರು ಸರಬರಾಜು ಆಗುತ್ತಿದ್ದು, ಜಲಾಶಯದಲ್ಲಿ ನೀರಿನ ಸಂಗ್ರಹದ ಕೊರತೆ ಇದ್ದು ನೀರಿನ ಗುಣಮಟ್ಟ ಸಂಪೂರ್ಣ ಕುಸಿತ ಸಾಧ್ಯತೆ ಇದೆ , ಆ ಹಿನ್ನೆಲೆಯಲ್ಲಿ ಕೂಡಲೇ ಸಾಹಸಿ ಕ್ರೀಡಾ ಚಟುವಟಿಕೆ ಸ್ಥಗಿತಗೊಳಿಸುವಂತೆ ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ.--------
ತಕ್ಷಣ ಈ ಚಟುವಟಿಕೆಗಳಿಗೆ ನಿರ್ಬಂಧ ಹೇರದಿದ್ದಲ್ಲಿ ಹಾರಂಗಿ ಅತ್ತೂರು ಭಾಗದ ಜನತೆ ಈ ಬಾರಿಯ ಲೋಕಸಭಾ ಚುನಾವಣೆ ಬಹಿಷ್ಕಾರ ಮಾಡುವ ಮೂಲಕ ಪ್ರತಿಭಟಿಸಲಾಗುವುದು.-ಭಾಸ್ಕರ ನಾಯಕ್, ಕೂಡುಮಂಗಳೂರು ಗ್ರಾ.ಪಂ. ಅಧ್ಯಕ್ಷ.