ಸಾರಾಂಶ
ಮಲೆನಾಡು, ಕರಾವಳಿ ಸೇರಿ ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಲೆನಾಡು, ಕರಾವಳಿ ಸೇರಿ ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.ಕೊಡಗಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಹಾರಂಗಿ ಜಲಾಶಯ ಮತ್ತೆ ಭರ್ತಿಯಾಗಿದ್ದು, ನಾಲ್ಕು ಕ್ರೆಸ್ಟ್ ಗೇಟ್ ಮೂಲಕ 5 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಅಕ್ಟೋಬರ್ ತಿಂಗಳಲ್ಲಿ ಜಲಾಶಯ ಮತ್ತೆ ಭರ್ತಿಯಾಗಿದೆ. ಕೆಆರ್‌ಎಸ್ ಕೂಡ ಭರ್ತಿಯಾಗಿದ್ದು, 40 ಸಾವಿರ ಕ್ಯುಸೆಕ್‌ಗೂ ಹೆಚ್ಚು ನೀರನ್ನು ನದಿಗೆ ಬಿಡಲಾಗುತ್ತಿದೆ.
ಚಿಕ್ಕಮಗಳೂರು ತಾಲೂಕಿನ ದೇವಗೊಂಡನಹಳ್ಳಿಯ ಲಕ್ಷ್ಮಣ್‌ಗೌಡ (45) ಎಮ್ಮೆ ಮೇಯಿಸಲು ಹೋದಾಗ ಹಳ್ಳದಲ್ಲಿ ಬಿದ್ದು, ಪ್ರವಾಹದ ನೀರಲ್ಲಿ ಕೊಚ್ಚಿಹೋಗಿದ್ದಾರೆ. ಕಣಿವೆ ಗ್ರಾಮದ ಬಳಿ ರೈಲ್ವೆ ಮಾರ್ಗದ ಜಲ್ಲಿ ಕಲ್ಲುಗಳು ಭಾರೀ ಮಳೆಗೆ ಕೊಚ್ಚಿ ಹೋಗಿವೆ. ಚಿಕ್ಕಮಗಳೂರಿನಿಂದ ಬುಧವಾರ ಬೆಳಗ್ಗೆ 7.10ಕ್ಕೆ ಶಿವಮೊಗ್ಗಕ್ಕೆ ಹೊರಟಿದ್ದ ಪ್ಯಾಸೆಂಜರ್ ರೈಲನ್ನು ಅರ್ಧದಲ್ಲಿಯೇ ನಿಲ್ಲಿಸಲಾಯಿತು.ಜಿಲ್ಲೆಯ ಕಡೂರು ತಾಲೂಕೊಂದರಲ್ಲಿಯೇ 25 ಕೆರೆಗಳು ಕೋಡಿ ಬಿದ್ದಿದ್ದು, 56 ಮನೆಗಳು ಕುಸಿದಿವೆ. ಕಡೂರು ತಾಲೂಕಿನ ಗಣಪತಿಹಳ್ಳಿಯಲ್ಲಿ ನಿರಂತರ ಮಳೆಗೆ ಪುರಾತನ ಬಾವಿಯೊಂದು ಸಂಪೂರ್ಣ ಕುಸಿದು ಬಿದ್ದು, ಮುಚ್ಚಿ ಹೋಗಿದೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಕಾಶಾಪುರದಲ್ಲಿ ಹೊಲಕ್ಕೆ ತೆರಳಿದ್ದಾಗ ಸಿಡಿಲು ಬಡಿದು ಮೂವರು ಗಾಯಗೊಂಡಿದ್ದಾರೆ. ಇದೇ ವೇಳೆ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಗದಗ ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಮಳೆಯಾಗುತ್ತಿದೆ.;Resize=(128,128))
;Resize=(128,128))
;Resize=(128,128))