ಸಾರಾಂಶ
ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ಶಾಸಕ ಎಂ.ಪಿ. ಲತಾ ಮಲ್ಲಿಕಾರ್ಜುನ ಶಂಕುಸ್ಥಾಪನೆಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಮೈಕ್ರೋ ಯೋಜನೆಯಡಿ ಮಂಜೂರಾಗಿದ್ದ ₹5 ಕೋಟಿ ಅನುದಾನದಲ್ಲಿ ಹರಪನಹಳ್ಳಿ ತಾಲೂಕಿಗೆ 11 ಹೊಸ ಬಸ್ ಲೋಕಾರ್ಪಣೆ ಮಾಡಲಾಗಿದೆ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.ಅವರು ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ 11 ಹೊಸ ಬಸ್ ಲೋಕಾರ್ಪಣೆ ಹಾಗೂ ಶೃಂಗಾರತೋಟದ ಬಳಿ ನಿರ್ಮಿಸಿರುವ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಸೋಮವಾರ ಮಾತನಾಡಿದರು.
ಕಳೆದ 2 ವರ್ಷಗಳಿಂದ ತಾಲೂಕಿನ ಗ್ರಾಮೀಣ ಭಾಗದಿಂದ ವಿದ್ಯಾರ್ಥಿಗಳು ಹರಪನಹಳ್ಳಿ ಪಟ್ಟಣದ ಶಾಲಾ-ಕಾಲೇಜುಗಳಿಗೆ ಬರಲು ಕಷ್ಟ ಪಡುತ್ತಿದ್ದುದನ್ನು ನೋಡಿ, ಕೆಕೆಆರ್‌ಡಿಬಿಯಲ್ಲಿ ಅನುದಾನ ತಂದು 11 ಹೊಸ ಬಸ್ ಖರೀದಿ ಮಾಡಿ ಇಲ್ಲಿಯ ಡಿಪೋಗೆ ನೀಡಿದ್ದೇನೆ ಎಂದರು.ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ವ್ಯಾಪ್ತಿಯ 7 ಜಿಲ್ಲೆಗಳ 43 ಶಾಸಕರಲ್ಲಿ ದೇವದುರ್ಗ ಶಾಸಕಿ ಕರಿಯಮ್ಮ ಹಾಗೂ ನಾನು ಮಾತ್ರ ಹೆಚ್ಚಿನ ಅನುದಾನ ತಂದಿದ್ದೇವೆ ಎಂದು ಹೇಳಿದರು.
ಹರಪನಹಳ್ಳಿ ಪಟ್ಟಣಕ್ಕೆ ನಗರ ಸಾರಿಗೆಗಾಗಿ 6 ಬಸ್ ಸಹ ಕೇಳಿದ್ದೇನೆ. ತಾಲೂಕಿನ ಪ್ರತಿಯೊಂದು ಹಳ್ಳಿಯೂ ಬಸ್ ಸಂಪರ್ಕ ಹೊಂದಬೇಕು ಎಂಬ ಗುರಿ ನನ್ನದಾಗಿದೆ ಎಂದು ಹೇಳಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಚಪ್ಪ ಮಾತನಾಡಿ, ₹5 ಕೋಟಿ ವೆಚ್ಚದಲ್ಲಿ 11 ಬಸ್ಸುಗಳನ್ನು ಶಾಸಕರು ಖರೀದಿಸಿ ಕೊಟ್ಟಿದ್ದು ರಾಜ್ಯದಲ್ಲಿಯೇ ಪ್ರಥಮ ಎಂದರು.ಶಕ್ತಿ ಯೋಜನೆಯಲ್ಲಿ ಈ ವರೆಗೂ 83 ಲಕ್ಷ ಮಹಿಳೆಯರು ಹರಪನಹಳ್ಳಿ ತಾಲೂಕಲ್ಲಿ ಹಾಗೂ ಪ್ರತಿ ದಿನ 14 ಸಾವಿರ ಮಹಿಳೆಯರು ತಾಲೂಕಿನಲ್ಲಿ ತಿರುಗಾಡುತ್ತಿದ್ದಾರೆ. ಶೀಘ್ರ ಹರಪನಹಳ್ಳಿ ಪಟ್ಟಣಕ್ಕೆ 2 ನಗರ ಸಾರಿಗೆ ಬಸ್ ವ್ಯವಸ್ಥೆ ಮಾಡುತ್ತೇವೆ. ಹರಪನಹಳ್ಳಿ ಪಟ್ಟಣದಲ್ಲಿ ಹೊಸ ಬಸ್ ನಿಲ್ದಾಣ ನಿರ್ಮಾಣಕ್ಕೆ ನಾವು ಶೇ. 50ರಷ್ಟು ಅನುದಾನ ನೀಡುತ್ತೇವೆ. ಉಳಿದ ಹಣವನ್ನು ಶಾಸಕರು ತಮ್ಮ ಅನುದಾನದಲ್ಲಿ ನೀಡಿದರೆ ಅನುಕೂಲವಾಗುತ್ತದೆ ಎಂದರು.
ಗ್ಯಾರಂಟಿ ಯೋಜನೆಗಳ ಜಿಲ್ಲಾ ಸಮಿತಿ ಅಧ್ಯಕ್ಷ ಶಿವಮೂರ್ತಿ, ತಾಲೂಕು ಅಧ್ಯಕ್ಷ ಉದಯಶಂಕರ ಮಾತನಾಡಿದರು. ಆಶಾ ಕಾರ್ಯಕರ್ತರಿಗೆ ಸಮವಸ್ತ್ರಗಳನ್ನು ಶಾಸಕರು ವಿತರಿಸಿದರು.ಪುರಸಭಾ ಅಧ್ಯಕ್ಷೆ ಎಂ. ಫಾತೀಮಾಬಿ, ಉಪಾಧ್ಯಕ್ಷ ಎಚ್. ಕೊಟ್ರೇಶ, ಸದಸ್ಯರಾದ ಟಿ. ವೆಂಕಟೇಶ, ಅಬ್ದುಲ್ ರಹಿಮಾನ್, ಗೊಂಗಡಿ ನಾಗರಾಜ, ಲಾಟಿದಾದಾಪೀರ, ಮಂಜುನಾಥ ಇಜಂತಕರ್, ಜಾಕೀರ ಹುಸೇನ್, ಭರತೇಶ, ಉದ್ದಾರ ಗಣೇಶ, ಸಾರಿಗೆ ಇಲಾಖೆಯ ಡಿಸಿ ತಿಮ್ಮಾರೆಡ್ಡಿ, ಬಿಇಒ ಲೇಪಾಕ್ಷಪ್ಪ, ವೈದ್ಯಾಧಿಕಾರಿ ಪ್ರಥ್ಯೂ, ಕಂಚಿಕೇರಿ ಜಯಲಕ್ಷ್ಮಿ, ತಹಸೀಲ್ದಾರ್ ಬಿ.ವಿ. ಗಿರೀಶಬಾಬು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಗುಡ್ಡಪ್ಪ, ಸ್ಥಳೀಯ ಸಾರಿಗೆ ಡಿಪೊ ವ್ಯವಸ್ಥಾಪಕಿ ಮಂಜುಳಾ, ಮತ್ತೂರು ಬಸವರಾಜ, ಇಸಿಒ ಗಿರಜ್ಜಿ ಮಂಜುನಾಥ, ವಸಂತಪ್ಪ, ಉಪಸ್ಥಿತರಿದ್ದರು.