ಹರಪನಹಳ್ಳಿ ಅಭಿವೃದ್ಧಿಗೆ ₹120 ಕೋಟಿ ಮಂಜೂರು: ಶಾಸಕಿ ಲತಾ ಮಲ್ಲಿಕಾರ್ಜುನ

| Published : Mar 12 2024, 02:01 AM IST

ಹರಪನಹಳ್ಳಿ ಅಭಿವೃದ್ಧಿಗೆ ₹120 ಕೋಟಿ ಮಂಜೂರು: ಶಾಸಕಿ ಲತಾ ಮಲ್ಲಿಕಾರ್ಜುನ
Share this Article
  • FB
  • TW
  • Linkdin
  • Email

ಸಾರಾಂಶ

ಹರಪನಹಳ್ಳಿ ಪಟ್ಟಣಕ್ಕೆ ತುಂಗಭದ್ರಾ ನದಿಯಿಂದ ಕುಡಿಯುವ ನೀರು ಪೂರೈಸುವ ಎರಡನೇ ಹಂತದ ಯೋಜನೆಗೆ ಅಮೃತಧಾರೆ ಸ್ಕೀಂನಲ್ಲಿ ₹37 ಕೋಟಿ ಅನುಮೋದನೆ ದೊರೆತಿದೆ.

ಹರಪನಹಳ್ಳಿ: ಪಟ್ಟಣದ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ₹120 ಕೋಟಿ ಮಂಜೂರಾತಿ ಆಗಿದ್ದು, ಶೀಘ್ರ ಅನುದಾನ ಬಿಡುಗಡೆಯಾಗಲಿದೆ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.

ಅವರು ಪಟ್ಟಣದ ಪುರಸಭೆಯ ಬಜೆಟ್‌ ಸಭೆಯಲ್ಲಿ ಪಾಲ್ಗೊಂಡು ಸೋಮವಾರ ಮಾಹಿತಿ ನೀಡಿದರು. ನಗರಾಭಿವೃದ್ಧಿ ಇಲಾಖೆಯಿಂದ ₹120 ಕೋಟಿ ಅನುದಾನ ಬರುತ್ತದೆ ಎಂದು ತಿಳಿಸಿದರು.

₹37 ಕೋಟಿಗೆ ಅನುಮೋದನೆ: ಹರಪನಹಳ್ಳಿ ಪಟ್ಟಣಕ್ಕೆ ತುಂಗಭದ್ರಾ ನದಿಯಿಂದ ಕುಡಿಯುವ ನೀರು ಪೂರೈಸುವ ಎರಡನೇ ಹಂತದ ಯೋಜನೆಗೆ ಅಮೃತಧಾರೆ ಸ್ಕೀಂನಲ್ಲಿ ₹37 ಕೋಟಿ ಅನುಮೋದನೆ ದೊರೆತಿದೆ. ಯೋಜನೆಯ ಮೊತ್ತ ₹98 ಕೋಟಿ ಆಗಿದೆ. ಅದರಲ್ಲಿ ಪ್ರಥಮವಾಗಿ ₹37 ಕೋಟಿಗೆ ಒಪ್ಪಿಗೆ ಸಿಕ್ಕಿದೆ ಎಂದು ತಿಳಿಸಿದರು.ಬಜೆಟ್‌ ಸಮರ್ಪಕವಾಗಿ ಅನುಷ್ಟಾನವಾಗುತ್ತಿಲ್ಲ. ಹೈಟೆಕ್‌ ಶೌಚಾಲಯ, ಉತ್ತಮ ಉದ್ಯಾನ ನಿರ್ಮಿಸಬೇಕು ಎಂದು ಎಚ್‌.ಎಂ. ಅಶೋಕ ಒತ್ತಾಯಿಸಿದಾಗ, ಶಾಸಕಿ ಎಂ.ಪಿ.ಲತಾ ಉತ್ತರಿಸಿ, ಬರ ಮುಗಿಯಲಿ. ಉದ್ಯಾನ ಅಭಿವೃದ್ಧಿಗೆ ಆದ್ಯತೆ ಕೊಡೋಣ ಎಂದು ಉತ್ತರಿಸಿದರು.ಕಾಮಗಾರಿ ಸ್ಥಗಿತಗೊಂಡಿರುವ ದಿನವಹಿ ಸಂತೆ ಮಾರುಕಟ್ಟೆ ಪುನಾರಾರಂಭಕ್ಕೆ ಗುತ್ತಿಗೆದಾರರು ಈ ಮಾ.25ರವರೆಗೆ ಸಮಯ ಕೇಳಿದ್ದಾರೆ, ಕಾದು ನೋಡಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಸಕಿ ಲತಾ ಹಾಗೂ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಹೇಳಿದರು.ಹಿರಿಯ ಸದಸ್ಯ ಅಬ್ದುಲ್‌ ರಹಿಮಾನ್‌, ತ್ಯಾಜ್ಯ ಸಂಗ್ರಹಿಸುವ ವಾಹನಕ್ಕೆ ಕಸ ಹಾಕಲು ಈ ಹಿಂದೆ ಕೊಟ್ಟಂತೆ ಈ ಬಾರಿಯೂ ಪ್ಲಾಸ್ಟಿಕ್‌ ಬಕೆಟ್‌ ಕೊಡಿ ಎಂದು ಒತ್ತಾಯಿಸಿದರು.ಮಾಜಿ ಅಧ್ಯಕ್ಷ ಮಂಜುನಾಥ ಇಜಂತಕರ್‌, ಮುಕ್ತಿವಾಹನ ಬಾಡಿಗೆ ₹1000 ಶುಲ್ಕ ಇದೆ. ಕಡಿಮೆ ಮಾಡಿ ಎಂದು ಕೋರಿದಾಗ ₹500ಕ್ಕೆ ಇಳಿಸಲು ಸಭೆ ಒಪ್ಪಿಗೆ ಸೂಚಿಸಿತು.ಪಟ್ಟಣದಲ್ಲಿರುವ ಬಸ್‌ ತಂಗುದಾಣ ಅಭಿವೃದ್ಧಿ ಪಡಿಸುವಂತೆ ಸದಸ್ಯ ಟಿ.ವೆಂಕಟೇಶ ಕೋರಿದರು. ಉಪವಿಭಾಗಾಧಿಕಾರಿ ಚಿದಾನಂದಗುರುಸ್ವಾಮಿ, ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಉಪಸ್ಥಿತರಿದ್ದರು.

₹98 ಲಕ್ಷ ಉಳಿತಾಯ ಬಜೆಟ್‌: ಇಲ್ಲಿಯ ಪುರಸಭೆಯಲ್ಲಿ ಸೋಮವಾರ 2024-25ನೇ ಸಾಲಿನ ಆಯ-ವ್ಯಯ ಮಂಡಿಸಲಾಗಿದ್ದು, ಸಭೆ ₹98.75 ಲಕ್ಷ ಉಳಿತಾಯ ಬಜೆಟ್‌ಗೆ ಒಪ್ಪಿಗೆ ನೀಡಿತು.ನಿರೀಕ್ಷಿತ ಆದಾಯ ₹59.35 ಕೋಟಿ ಇದ್ದು, ಆರಂಭಿಕ ನಗದು ಮತ್ತು ಬ್ಯಾಂಕ್‌ ಶುಲ್ಕ ಸೇರಿ ₹60.88 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ₹59.89 ಕೋಟಿ ನಿರೀಕ್ಷಿತ ಖರ್ಚನ್ನು ಅಂದಾಜಿಸಲಾಗಿದೆ. ಅಂತಿಮವಾಗಿ ₹98.75 ಲಕ್ಷ ಉಳಿತಾಯ ಬಜೆಟ್‌ನ್ನು ಪುರಸಭೆಯ ಆಡಳಿತಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಚಿದಾನಂದಗುರುಸ್ವಾಮಿ ಮಂಡಿಸಿ ಸಭೆಯ ಒಪ್ಪಿಗೆ ಪಡೆದರು.ವೇತನ ಅನುದಾನ ₹4.92 ಕೋಟಿ, ಎಸ್‌ಎಫ್‌ಸಿ ಮುಕ್ತನಿಧಿ ಅನುದಾನ ₹94 ಲಕ್ಷ, ನೀರು ಸರಬರಾಜು ನಿರ್ವಹಣೆ ₹3.4 ಕೋಟಿ, ಬೀದಿದೀಪ ನಿರ್ವಹಣೆ ₹1.23 ಕೋಟಿ, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಬಿಡುಗಡೆಯಾಗಬಹುದಾದ ಅನುದಾನ ₹25 ಲಕ್ಷ, ಸಿಎಂ ನಗರೋತ್ಥಾನ ಅನುದಾನ ₹5 ಕೋಟಿ, ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯ ಅನುದಾನ ₹35 ಲಕ್ಷ, ಶಾಸಕರ ಅನುದಾನ ₹1 ಕೋಟಿ, ಕಲ್ಯಾಣ ಕರ್ನಾಟಕ ವಿಶೇಷ ಅನುದಾನ ₹3 ಕೋಟಿ, ಕೇಂದ್ರ ಸರ್ಕಾರದ ಅನುದಾನ (15ನೇ ಹಣಕಾಸು) ₹2.62 ಕೋಟಿ, ಮನೆ ಕಂದಾಯ ಶುಲ್ಕ ₹1.36 ಕೋಟಿ, ವಾಣಿಜ್ಯ ಮಳಿಗೆಗಳ ಬಾಡಿಗೆ ಶುಲ್ಕ ₹48.69 ಲಕ್ಷವಾಗಿದೆ.

ಶಾಸಕಿ ಎಂ.ಪಿ. ಲತಾಮಲ್ಲಿಕಾರ್ಜುನ, ಎಸಿ ಚಿದಾನಂದಗುರುಸ್ವಾಮಿ, ಪುರಸಭಾ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ, ಆರೋಗ್ಯ ನಿರೀಕ್ಷಕ ಮಂಜುನಾಥ, ಎಂಜಿನಿಯರ್‌ ಸಿದ್ದೇಶ್ವರ ಸ್ವಾಮಿ, ಲೆಕ್ಕ ಸಮಾಲೋಚಕ ವಿ.ಹನುಮೇಶಿ, ಪುರಸಭಾ ಸದಸ್ಯರಾದ ಅಬ್ದುಲ್‌ ರಹಿಮಾನ, ಟಿ.ವೆಂಕಟೇಶ, ಉದ್ದಾರ ಗಣೇಶ, ಮಂಜುನಾಥ ಇಜಂತಕರ್, ಕೊಟ್ರೇಶ ಎಚ್‌.ಎಂ., ಅಶೋಕ ಇದ್ದರು.