ಹರಪನಹಳ್ಳಿ ಪಟ್ಟಣದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಪುರಸಭಾ ಸದಸ್ಯರು ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಪಟ್ಟುಹಿಡಿದರು.

ಸಾಮಾನ್ಯ ಸಭೆ । ಅಭಿವೃದ್ಧಿಗೆ ₹100 ಕೋಟಿ ನೀಡಲು ಸದಸ್ಯರ ಒತ್ತಾಯ

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ಹರಪನಹಳ್ಳಿ ಪಟ್ಟಣದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಪುರಸಭಾ ಸದಸ್ಯರು ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಪಟ್ಟುಹಿಡಿದರು.

ಸಾಮಾನ್ಯ ಸಭೆಯ ಅಜೆಂಡದಲ್ಲಿನ ವಿಷಯ ಓದುತ್ತಾ ಹೋದಾಗ ಕೆಕೆಆರ್‌ ಡಿಬಿಯಲ್ಲಿ ಪಟ್ಟಣದ ಮೇಗಳಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲು ₹15 ಲಕ್ಷ ಅನುದಾನ ಬಂದಿರುವ ಬಗ್ಗೆ ಪ್ರಸ್ತಾಪಿಸಿದಾಗ ಹಿರಿಯ ಸದಸ್ಯ ಎಂ.ವಿ. ಅಂಜಿನಪ್ಪ ಪಟ್ಟಣದಲ್ಲಿ ನಿಮಗೆ 6 ವರೆ ಸಾವಿರ ಮತ ಲೀಡ್‌ ಕೊಟ್ಟಿದ್ದೇವೆ, ಪಟ್ಟಣಕ್ಕೆ ಅನುದಾನ ಕಡಿಮೆಯಾಗುತ್ತದೆ ಎಂದರು.

ಅದಕ್ಕೆ ಅಬ್ದುಲ್‌ ರಹಿಮಾನ್, ಎಚ್‌.ಎಂ. ಅಶೋಕ, ಉದ್ದಾರ ಗಣೇಶ, ಲಾಟಿದಾದಾಪೀರ, ಗೊಂಗಡಿ ನಾಗರಾಜ ಮುಂತಾದವರು ಪಟ್ಟಣದ ಅಭಿವೃದ್ಧಿಗೆ ₹100 ಕೋಟಿ ಕೊಡಿ ಎಂದು ಬಲವಾಗಿ ಪಕ್ಷಭೇದ ಮರೆತು ವಾದಿಸಿದರು.

ಆಗ ಶಾಸಕಿ ಎಂ.ಪಿ. ಲತಾ ಮಾತನಾಡಿ, ಪಟ್ಟಣದಲ್ಲಿ ಲೀಡ್‌ ಕೊಡದಿದ್ದರೂ ಅನುದಾನ ಕೊಡುತ್ತಿದ್ದೆ, ಶೇ.25 ಶಿಕ್ಷಣಕ್ಕೆ ಹೋಗುತ್ತಿದೆ. ಉಳಿದ ಶೇ.75 ರಷ್ಟು ವಿವಿಧ ಅಭಿವೃದ್ಧಿಗೆ ಖರ್ಚು ಮಾಡಲಾಗುತ್ತದೆ. ಹಳ್ಳಿ ಹಾಗೂ ದಿಲ್ಲಿ ಎಂಬ ಲೆಕ್ಕಾಚಾರ ಬೇಡ ಮಾರ್ಚ್‌ನಲ್ಲಿ ಹೊಸ ಅನುದಾನ ಬರುತ್ತೆ, ಅವಾಗ ಪಟ್ಟಣಕ್ಕೆ ಕೊಡೋಣ ಎಂದು ಹೇಳಿದರು.

ಎಂ.ವಿ. ಅಂಜಿನಪ್ಪ ನಿಮ್ಮದಿನ್ನು 3 ವರ್ಷವಿದೆ, ನಮ್ಮದು ಇನ್ನು 9 ತಿಂಗಳು ಅವಧಿ ಇದೆ, ಪಟ್ಟಣಕ್ಕೆ ನೂರು ಕೋಟಿ ಅನುದಾನ ಕೊಡಿ ಎಂದು ಶಾಸಕರಲ್ಲಿ ಕೋರಿದರು.

ಈವರೆಗೂ ಡಿಎಂಎಫ್‌ ಅನುದಾನ ಬಂದಿರುವುದಿಲ್ಲ, ಇದೀಗ ಕೋರ್ಟ್‌ನಲ್ಲಿ ಸಮಸ್ಯೆ ಬಗೆಹರಿದಿದೆ, ಇನ್ನು ಮೇಲೆ ಡಿಎಂಎಫ್‌ ಅನುದಾನ ಬರುತ್ತೆ ಎಂದು ಶಾಸಕಿ ತಿಳಿಸಿದರು.

ಪಟ್ಟಣದ ಪೂರ್ವಚಾರಿ ಬಡಾವಣೆಯಲ್ಲಿ ನಿರ್ಮಾಣವಾಗುತ್ತಿರುವ ಗ್ರಂಥಾಲಯ ಕಟ್ಟಡ ಕಾಮಗಾರಿ ಕಳಪೆಯಾಗಿದೆ ಎಂದು ಸದಸ್ಯ ಕಿರಣ್‌ ಶಾನ್ಬಾಗ್‌ ಆರೋಪಿಸಿದರು.

ಹರಿಹರ ಹಾಗೂ ಕೊಟ್ಟೂರು ವೃತ್ತಗಳಲ್ಲಿನ ಅವೈಜ್ಞಾನಿಕ ಸರ್ಕಲ್‌ ಕಟ್ಟಡ ಕಾಮಗಾರಿ ತೆರವುಗೊಳಿಸಲು ಜಿಲ್ಲಾಧಿಕಾರಿಯವರಿಗೆ ಹೇಳಿದ್ದೇನೆ ಎಂದು ಸದಸ್ಯರ ಪ್ರಶ್ನೆಗೆ ಶಾಸಕರು ಉತ್ತರಿಸಿದರು.

ಪಟ್ಟಣದ ಅಭಿವೃದ್ದಿಗೆ ರೂಪಿಸಿರುವ ಮಾಸ್ಟರ್‌ ಪ್ಲಾನ್‌ ಅನುಷ್ಠಾನ ವಿಳಂಬವಾಗುತ್ತಿದೆ. ಹೀಗಾದರೆ ಧರಣಿ ಸತ್ಯಾಗ್ರಹ ನಡೆಸುತ್ತೇನೆ ಎಂದು ಹರಾಳು ಅಶೋಕ ಹೇಳಿದರು.

ಆಗ ಶಾಸಕಿ ಎಂ.ಪಿ.ಲತಾ ಈ ಕುರಿತು ಟೌನ್‌ ಪ್ಲಾನ್‌ ಅಧಿಕಾರಿಗೆ ಪತ್ರ ಬರೆಯಿರಿ ಎಂದು ಮುಖ್ಯಾಧಿಕಾರಿಗೆ ಸೂಚಿಸಿದರು.

ಹರಪನಹಳ್ಳಿ ಪಟ್ಟಣಕ್ಕೆ ತುಂಗಭದ್ರಾ ನದಿಯಿಂದ ಎರಡನೇ ಹಂತದ ಕುಡಿಯುವ ನೀರಿನ ಯೋಜನೆಗೆ ₹43.36 ಕೋಟಿ ಅನುದಾನಕ್ಕೆ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ ಎಂದು ಪುರಸಭಾ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ತಿಳಿಸಿದರು.

ಪುರಸಭಾ ಅಧ್ಯಕ್ಷೆ ಎಂ. ಪಾತೀಮಾಭಿ, ಉಪಾಧ್ಯಕ್ಷ ಎಚ್‌. ಕೊಟ್ರೇಶ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ. ವೆಂಕಟೇಶ, ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ, ಆರೋಗ್ಯ ನಿರೀಕ್ಷಕ ಮಂಜುನಾಥ, ಎಂಜಿನಿಯರ್‌ ಸಿದ್ದೇಶ್ವರ ಉಪಸ್ಥಿತರಿದ್ದರು.