ಕೋಟಿ ರು.ದುರ್ಬಳಕೆ ಕೇಳಿದ್ದಕ್ಕೆ ಕಿರುಕುಳ:ಹಾರಗದ್ದೆ ಬ್ಯಾಂಕ್‌ ಮ್ಯಾನೇಜರ್‌ ನೇಣಿಗೆ

| Published : Aug 23 2025, 02:00 AM IST

ಕೋಟಿ ರು.ದುರ್ಬಳಕೆ ಕೇಳಿದ್ದಕ್ಕೆ ಕಿರುಕುಳ:ಹಾರಗದ್ದೆ ಬ್ಯಾಂಕ್‌ ಮ್ಯಾನೇಜರ್‌ ನೇಣಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಆನೇಕಲ್ ತಾಲೂಕಿನ ಹಾರಗದ್ದೆ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್‌ನ ಮ್ಯಾನೇಜರ್ ಒಬ್ಬರು ಸಹೋದ್ಯೋಗಿಗಳ ಕಿರುಕುಳ ಸಹಿಸದೆ ಮನೆಯಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಗಣಿ ಠಾಣಾ ವ್ಯಾಪ್ತಿಯ ಹಾರಗದ್ದೆಯಲ್ಲಿ ಬುಧವಾರ ಸಂಜೆ ನಡೆದಿದೆ.

ಕನ್ನಡಪ್ರಭ ವಾರ್ತೆ ಆನೇಕಲ್ಆನೇಕಲ್ ತಾಲೂಕಿನ ಹಾರಗದ್ದೆ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್‌ನ ಮ್ಯಾನೇಜರ್ ಒಬ್ಬರು ಸಹೋದ್ಯೋಗಿಗಳ ಕಿರುಕುಳ ಸಹಿಸದೆ ಮನೆಯಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಗಣಿ ಠಾಣಾ ವ್ಯಾಪ್ತಿಯ ಹಾರಗದ್ದೆಯಲ್ಲಿ ಬುಧವಾರ ಸಂಜೆ ನಡೆದಿದೆ.

ಹಾರಗದ್ದೆ ನಿವಾಸಿ ಪ್ರಕಾಶ್ (41) ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಮ್ಯಾನೇಜರ್.

ಈ ಘಟನೆ ಸಂಬಂಧ ಹಾರಗದ್ದೆ ವಾಸಿಗಳಾದ ಬ್ಯಾಂಕ್ ಅಕೌಂಟೆಂಟ್ ನಾಗರಾಜ್, ಕಂಪ್ಯೂಟರ್ ಆಪರೇಟರ್ ಸಂದೀಪ್ ಹಾಗೂ ಕ್ಯಾಷಿಯರ್ ರೂಪಾ ಸಂಬಂಧಿ ಶ್ರೀನಿವಾಸ್ ಎಂಬುವರನ್ನು ಬಂಧಿಸಲಾಗಿದೆ.

ಡೆತ್‌ ನೋಟಲ್ಲಿ ಏನಿದೆ?

ಬ್ಯಾಂಕ್ ಅಕೌಂಟೆಂಟ್ ನಾಗರಾಜ್, ಕ್ಯಾಷಿಯರ್ ರೂಪಾ, ರೂಪಾ ಸಂಬಂಧಿ ಶ್ರೀನಿವಾಸ್ ಹಾಗೂ ಕಂಪ್ಯೂಟರ್ ಆಪರೇಟರ್ ಸಂದೀಪ್ ತನ್ನ ಸಾವಿಗೆ ಕಾರಣ ಎಂದು ಡೆತ್ ನೋಟ್‌ನಲ್ಲಿ ಬರೆಯಲಾಗಿದೆ.

ನಾಲ್ವರು ಆರೋಪಿಗಳಿಂದ 1 ಕೋಟಿ ರು.ಗೂ ಅಧಿಕ ಹಣ ಪರಭಾರೆಯಾಗಿದೆ. ನನ್ನ ನಂಬಿಕೆಗೆ ದ್ರೋಹ ಬಗೆದು ಬ್ಯಾಂಕ್‌ನ ಹಣ ವಂಚನೆ ಮಾಡಲಾಗಿದೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ನನ್ನನ್ನು ಬ್ಲಾಕ್ ಮೇಲ್ ಮಾಡಿದ ನಾಲ್ವರು ಆರೋಪಿಗಳು ಷಡ್ಯಂತ್ರ ಮಾಡಿ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಡೆತ್ ನೋಟ್ ನಲ್ಲಿ ತಿಳಿಸಿದ್ದಾರೆ.

ಅಕೌಂಟೆಂಟ್ ನಾಗರಾಜ್ 15 ಲಕ್ಷ ರು. ಬ್ಯಾಂಕ್ ಹಣ ದುರುಪಯೋಗ ಮಾಡಿಕೊಂಡು ಕೆಲವೇ ದಿನಗಳಲ್ಲಿ ಹಿಂತಿರುಗಿಸುವುದಾಗಿ ಅಲವತ್ತು ಕೊಂಡಿದ್ದರು. ಈ ಬಗ್ಗೆ ಇತರೆ ಸಿಬ್ಬಂದಿಗೆ ನಾಗರಾಜ್ ತಿಳಿಸಿದ್ದ ಕಾರಣ ಇತರೆ ಸಿಬ್ಬಂದಿ ಸಹ ಇದನ್ನೇ ನೆಪವಾಗಿಸಿಕೊಂಡು ಬ್ಲಾಕ್ ಮೇಲ್ ಮಾಡಿದರು. ಕಂಪ್ಯೂಟರ್ ಆಪರೇಟರ್ ಸಂದೀಪ್ ಹತ್ತು ಲಕ್ಷ ಪಡೆದಿದ್ದರೆ, ಕ್ಯಾಷಿಯರ್ ರೂಪಾ ಸಹ ದೊಡ್ಡ ಮೊತ್ತ ಪಡೆದು ತನ್ನ ಸಂಬಂಧಿ ಶ್ರೀನಿವಾಸ್ ಮೂಲಕ 43 ಲಕ್ಷ 50 ಸಾವಿರ ಹಣದ ಜೊತೆ ಅಡಮಾನದ ಚಿನ್ನಾಭರಣ ನೀಡದೇ ಮೋಸ ಮಾಡಿದ್ದಾರೆ ಎಂದು ಡೆತ್ ನೋಟ್ ನಲ್ಲಿ ಪ್ರಕಾಶ್‌ ವಿವರಿಸಿದ್ದಾರೆ.

ಘಟನೆ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಿಯಮಾವಳಿ ಮೀರಿ ಹೆಚ್ಚು ಸಾಲ

ಬ್ಯಾಂಕ್ ವ್ಯವಹಾರ ಸುಸೂತ್ರವಾಗಿಯೇ ನಡೆದುಕೊಂಡು ಹೋಗುತ್ತಿತ್ತು. ಆದರೆ ಕಳೆದ ಒಂದು ವರ್ಷದಲ್ಲಿ ಬ್ಯಾಂಕ್ ನಿಂದ ನೀಡುವ ಸಾಲ ಸೌಲಭ್ಯ ವ್ಯವಸ್ಥೆಯಲ್ಲಿ ಮೃದು ಧೋರಣೆ ತಳೆದು ನಿಯಮಾವಳಿ ಮೀರಿ ಹೆಚ್ಚುವರಿ ಸಾಲ ನೀಡಿದ್ದರು ಎಂದು ಹೆಸರು ತಿಳಿಸಲು ಇಚ್ಛಿಸದ ಬ್ಯಾಂಕ್‌ನ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

ಕಳೆದ ಜೂನ್ ನಲ್ಲಿ ಹೊಸ ಆಡಳಿತ ಮಂಡಳಿ ರಚನೆ ಆಗಿದ್ದು ಸಭೆ ಕರೆದು ಲೆಕ್ಕಪತ್ರ ತೋರಿಸಲು ಕೇಳಿದಾಗ ಸಮಯಾವಕಾಶ ಪಡೆದು ಕೊಂಡಿದ್ದ ಮ್ಯಾನೇಜರ್‌ ಪ್ರಕಾಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.