ಸಾರಾಂಶ
ಖಾಸಗಿ ಫೈನಾನ್ಸ್‌ಗಳು ರೈತ ಕಾರ್ಮಿಕರು, ಕೂಲಿ ಕಾರ್ಮಿಕರು, ಮಧ್ಯಮ ವರ್ಗದ ಬಡವರಿಗೆ ಕಿರುಕುಳ ಕೊಡುತ್ತಿದ್ದು, ಒತ್ತಾಯ ಪೂರ್ವಕಾಗಿ ಸಾಲ ವಸೂಲಾತಿ ಮಾಡದಂತೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿ ರೈತರು ಹಾಗೂ ಬಡ ಕೂಲಿಕಾರ್ಮಿಕರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಹಾವೇರಿ: ಜಿಲ್ಲೆಯಲ್ಲಿ ಕೆಲವು ಖಾಸಗಿ ಫೈನಾನ್ಸ್‌ಗಳು ರೈತ ಕಾರ್ಮಿಕರು, ಕೂಲಿ ಕಾರ್ಮಿಕರು, ಮಧ್ಯಮ ವರ್ಗದ ಬಡವರಿಗೆ ಕಿರುಕುಳ ಕೊಡುತ್ತಿದ್ದು, ಒತ್ತಾಯ ಪೂರ್ವಕಾಗಿ ಸಾಲ ವಸೂಲಾತಿ ಮಾಡದಂತೆ ಖಾಸಗಿ ಫೈನಾನ್ಸ್‌ಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿ ಶನಿವಾರ ರೈತರು ಹಾಗೂ ಬಡ ಕೂಲಿಕಾರ್ಮಿಕರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಹನುಮಂತಪ್ಪ ಕಬ್ಬಾರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜಿಲ್ಲಾದ್ಯಂತ ಖಾಸಗಿ ಫೈನಾನ್ಸ್‌ಗಳು ನಾಯಿಕೊಡೆಯಂತೆ ಹುಟ್ಟಿಕೊಂಡಿದ್ದು ಮತ್ತು ಬೇರೆ ಜಿಲ್ಲೆಗಳಿಂದ ಬಂದು ಲೋನ್ ಕೊಟ್ಟು, ದುಪ್ಪಟ್ಟು ಬಡ್ಡಿಯನ್ನು ವಸೂಲಿ ಮಾಡುತ್ತಿವೆ. ಸಂಜೆಯ ವೇಳೆ ೭ ಗಂಟೆಯಿಂದ ರಾತ್ರಿ ೧೧ ಗಂಟೆಯವರೆಗೆ ಹಣ ಮತ್ತು ಅದರ ಬಡ್ಡಿಯನ್ನು ಕಟ್ಟುವಂತೆ ಮನೆಯ ಮುಂದೆ ಅವಮಾನಗೊಳಿಸುತ್ತ ಮನೆಗೆ ಬೀಗ ಹಾಕುತ್ತೇವೆ.
ಹರಾಜು ಮಾಡುತ್ತೇವೆ ಎಂದು ಮರ್ಯಾದೆ ತೆಗೆಯುವಂತಹ ಕೆಲಸವನ್ನು ಮಾಡುತ್ತಿವೆ ಎಂದು ದೂರಿದರು.ಈಗಾಗಲೇ ಬರಗಾಲ ಮುಗಿದು ಮುಂಗಾರು ಮಳೆಯಿಂದ ಚೇತರಿಸಿಕೊಳ್ಳುವ ಪರಿಸ್ಥಿತಿಯಲ್ಲಿ ಕೆಲಸಗಳು ಪ್ರಾರಂಭವಾಗಿದ್ದು, ನಾವು ಕಟ್ಟುತ್ತೇವೆ ಕಾಲಾವಕಾಶ ಕೊಡಿ ಎಂದು ಕೇಳಿದರೂ ಕೂಡ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ಮನೆಯ ಮುಂದೆ ಕುಳಿತುಕೊಂಡು ಮರ್ಯಾದೆ ತೆಗೆಯುವಂತಹ ಕೆಲಸವನ್ನು ಖಾಸಗಿ ಫೈನಾನ್ಸ್‌ಗಳಿಂದ ಮಾಡಲಾಗುತ್ತಿದೆ.
ಒಂದು ಆಧಾರ ಕಾರ್ಡ್‌ಗೆ ಹಣ ಕೊಟ್ಟ ನಂತರ ಮತ್ತೆ ಇನ್ನೊಂದು ಖಾಸಗಿ ಫೈನಾನ್ಸ್‌ಗಳಲ್ಲಿ ೫-೬ ಕಡೆ ಹಳ್ಳಿಯ ಮುಗ್ಧ ಹೆಣ್ಣುಮಕ್ಕಳ ಆಧಾರ ಕಾರ್ಡನ್ನು ಬಳಕೆ ಮಾಡಿಕೊಂಡು ಹಣ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಮನೆಯಲ್ಲಿರುವ ಗಂಡಂದಿರಿಗೂ ಕೂಡ ವಿಷಯ ಗೊತ್ತಾಗದಂತಹ ಪರಿಸ್ಥಿತಿಯಲ್ಲಿ ಕೆಲವೊಬ್ಬರು ಏಜೆಂಟರುಗಳು ಈ ದಂಧೆ ನಡೆಸುತ್ತಿದ್ದಾರೆ.
ಹಿರೇಕೆರೂರು, ರಟಿಹಳ್ಳಿ, ಬ್ಯಾಡಗಿ, ರಾಣಿಬೆನ್ನೂರಗಳಲ್ಲಿ ನಾಯಿಕೊಡೆಯಂತೆ ಎದ್ದಿರುವ ಖಾಸಗಿ ಫೈನಾನ್ಸ್‌ಗಳ ಮೇಲೆ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳು ಮತ್ತು ತಾಲೂಕ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಖಾಸಗಿ ಫೈನಾನ್ಸ್ ವ್ಯಕ್ತಿಗಳನ್ನು ಕರೆಯಿಸಿ ನಿಯಮಾವಳಿಗಳ ಪ್ರಕಾರ ಸಾಲ ವಸೂಲಿ ಮಾಡುವಂತೆ ಮತ್ತು ಕಾಲಾವಕಾಶಗಳನ್ನು ಕೊಡಿಸಿ ಹಣ ವಸೂಲಿ ಮಾಡಿಕೊಳ್ಳಲಿಕ್ಕೆ ಆದೇಶಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನೂರಅಹ್ಮದ್ ಬಡಗೇರ, ಚಂದ್ರಪ್ಪ ತಳವಾರ, ರಮೇಶ ಹೆಡಿಯಾಲ, ಜಗದೀಶ ತಳವಾರ, ಉಸೇನ್‌ಸಾಬ್ ಬಡಿಗೇರ, ದಾದಾಪೀರ್ ಯಲಿಗಾರ, ಮುಸ್ತಾಕ್ ಕಮ್ಮಾರ, ಮಾಲತೇಶ ಓಲೇಕಾರ, ಶಿವಪ್ಪ ಬೇವಿನಹಳ್ಳಿ ಇತರರು ಇದ್ದರು.