ಸಾರಾಂಶ
ರೈತನ ಸಾವಿಗೆ ಕಾರಣವಾದ ಖಾಸಗಿ ಹಣಕಾಸು ಸಂಸ್ಥೆ ವಿರುದ್ಧ ಪ್ರತಿಭಟನೆ ನಡೆಸಿದ ರೈತರು, ತಾಲೂಕಿನಲ್ಲಿ ಖಾಸಗಿ ಹಣಕಾಸು ಸಂಸ್ಥೆಗಳು ವ್ಯಾಪಕವಾಗಿ ತಲೆ ಎತ್ತಿದ್ದು, ಬಡ್ಡಿ ಆಸೆಗಾಗಿ ರೈತರಿಗೆ ಇಲ್ಲಸಲ್ಲದ ಆಮಿಷ ಒಡ್ಡಿ ಅತಿ ಸರಳವಾಗಿ ಸಾಲ ನೀಡುತ್ತಾರೆ. ಬಳಿಕ ರೈತರು ಪಡೆದ ಸಾಲಕ್ಕೆ ದುಪ್ಪಟ್ಟು ಬಡ್ಡಿ ವಸೂಲಿಗೆ ಮುಂದಾಗುತ್ತಾರೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಖಾಸಗಿ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲ ಮರು ಪಾವತಿಸುವಂತೆ ಅಧಿಕಾರಿಗಳು ನೀಡಿದ ಕಿರುಕುಳದಿಂದ ಹೆದರಿ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಗಾಣದ ಹೊಸೂರು ಗ್ರಾಮದಲ್ಲಿ ನಡೆದಿದೆ.ಗ್ರಾಮದ ಕೆಂಚೇಗೌಡ (54) ಆತ್ಮಹತ್ಯಗೆ ಶರಣಾದ ರೈತ.
ಮೃತ ರೈತ ತಮ್ಮ ಎರಡು ಎಕರೆ ಜಮೀನಿನಲ್ಲಿ ಬೆಳೆ ಬೆಳೆಯಲು ವಿವಿಧ ಖಾಸಗಿ ಹಣಕಾಸು ಸಂಸ್ಥೆಗಳಿಂದ ಸುಮಾರು 15 ಲಕ್ಷ ರು. ಸಾಲ ಪಡೆದುಕೊಂಡಿದ್ದರು. ಹಣಕಾಸು ಸಂಸ್ಥೆಗಳು ಸಾಲದ ಕಂತು ಕಟ್ಟಲು ಒತ್ತಾಯಿಸುತ್ತಿದ್ದರು ಎನ್ನಲಾಗಿದೆ.ಜತೆಗೆ ಖಾಸಗಿ ಹಣಕಾಸು ಸಂಸ್ಥೆಯಿಂದ ಸಾಲ ಪಡೆದಿದ್ದ ಗ್ರಾಮದ ಮತ್ತೋರ್ವ ರೈತನ ಮನೆಗೆ ಕಳೆದ ಮೂರು ದಿನಗಳ ಹಿಂದೆ ಖಾಸಗಿ ಬ್ಯಾಂಕ್ ಅಧಿಕಾರಿಗಳು ಸೀಜ್ ಮಾಡಿ ಬೀಗ ಜಡಿದಿದ್ದ ಪರಿಣಾಮ ನನಗೂ ಈ ಸ್ಥಿತಿ ಬರಬಹುದೆಂದು ಹೆದರಿದ ರೈತ ಮನೆಯಲ್ಲಿ ನೇಣಿಗೆ ಕೊರಳು ಒಡ್ಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೃತ ರೈತನಿಗೆ ಪತ್ನಿ ಹಾಗೂ ಒಂದು ಗಂಡು ಮತ್ತು ಒಂದು ಹೆಣ್ಣು ಮಕ್ಕಳಿದ್ದಾರೆ. ಪಾಂಡವಪುರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಶವ ಒಪ್ಪಿಸಲಾಗಿದೆ. ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಖಾಸಗಿ ಹಣಕಾಸು ಸಂಸ್ಥೆಗಳಿಗೆ ಕಡಿವಾಣ ಆಗ್ರಹ:
ರೈತನ ಸಾವಿಗೆ ಕಾರಣವಾದ ಖಾಸಗಿ ಹಣಕಾಸು ಸಂಸ್ಥೆ ವಿರುದ್ಧ ಪ್ರತಿಭಟನೆ ನಡೆಸಿದ ರೈತರು, ತಾಲೂಕಿನಲ್ಲಿ ಖಾಸಗಿ ಹಣಕಾಸು ಸಂಸ್ಥೆಗಳು ವ್ಯಾಪಕವಾಗಿ ತಲೆ ಎತ್ತಿದ್ದು, ಬಡ್ಡಿ ಆಸೆಗಾಗಿ ರೈತರಿಗೆ ಇಲ್ಲಸಲ್ಲದ ಆಮಿಷ ಒಡ್ಡಿ ಅತಿ ಸರಳವಾಗಿ ಸಾಲ ನೀಡುತ್ತಾರೆ. ಬಳಿಕ ರೈತರು ಪಡೆದ ಸಾಲಕ್ಕೆ ದುಪ್ಪಟ್ಟು ಬಡ್ಡಿ ವಸೂಲಿಗೆ ಮುಂದಾಗುತ್ತಾರೆ.ಹಣಕಾಸು ಸಂಸ್ಥೆಗಳ ಸಾಲ ನೀಡುವ ಮುನ್ನ ವಿಧಿಸುವ ನಿರ್ಬಂಧಗಳ ಬಗ್ಗೆ ಅರಿವಿಲ್ಲದ ರೈತರು ಖಾಸಗಿ ಬ್ಯಾಂಕ್ ಅಧಿಕಾರಿಗಳು ನೀಡುವ ಪತ್ರಗಳಿಗೆ ಸಹಿ ಹಾಕಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ತಾಲೂಕಿನಾದ್ಯಂತ ಇಂತಹ ನೂರಾರು ಹಣಕಾಸು ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು, ಸಾಲ ಪಡೆಯುವಂತೆ ಒತ್ತಾಯಿಸಿ ಬಳಿಕ ಸಾಲ ಮರುಪಾವತಿಗಾಗಿ ಕಿರುಕುಳ ನೀಡುತ್ತಿದ್ದಾರೆ.
ತಾಲೂಕಿನಲ್ಲಿರುವ ಎಲ್ಲಾ ಖಾಸಗಿ ಹಣಕಾಸು ಸಂಸ್ಥೆಗಳ ಬಂದ್ ಮಾಡಿಸಲು ಸರ್ಕಾರ ಮುಂದಾಗಬೇಕಿದೆ. ಇಲ್ಲವಾದರೆ ರೈತರೊಡಗೂಡಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಎಚ್.ಎನ್.ಮಂಜುನಾಥ್ ಆಗ್ರಹಿಸಿದರು. ಶಾಸಕ ದರ್ಶನ್ ಪುಟ್ಟಣ್ಣಯ್ಯ ಆಸ್ಪತ್ರೆ ಶವಾಗಾರಕ್ಕೆ ಭೇಟಿ ನೀಡಿ ಮೃತ ರೈತನ ಕುಟುಂಬಕ್ಕೆ ಸಾಂತ್ವನ ಹೇಳಿದರು. ಪ್ರತಿಭಟನೆಯಲ್ಲಿ ಎನ್.ಎನ್.ಮಂಜುನಾಥ್, ಕೃಷ್ಣೇಗೌಡ, ಶಿವಕುಮಾರ್ ಇತರರು ಇದ್ದರು.