ಮತಾಂತರವಾಗುವಂತೆ ಕಿರುಕುಳ: ವೈದ್ಯಕೀಯ ವಿದ್ಯಾರ್ಥಿಯ ಬಂಧನ

| Published : Sep 04 2024, 01:47 AM IST

ಸಾರಾಂಶ

ಆರೋಪಿ ಮಣಿಪಾಲ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಯಾಗಿದ್ದು, ಅದೇ ಕಾಲೇಜಿನಲ್ಲಿ ಕಲಿಯುತ್ತಿರುವ ರಾಜಸ್ಥಾನದ ಹಿಂದು ವಿದ್ಯಾರ್ಥಿನಿಯನ್ನು ಕ್ಯಾಂಪಸ್‌ನಲ್ಲಿ ಭೇಟಿಯಾಗಿ, ಪರಸ್ಪರ ಪ್ರೀತಿಸುತ್ತಿದ್ದರು ಮತ್ತು ಮದುವೆಯಾಗಲು ಸಿದ್ಧರಾಗಿದ್ದರು.

ಕನ್ನಡಪ್ರಭ ವಾರ್ತೆ ಮಣಿಪಾಲ

ವಿದ್ಯಾರ್ಥಿನಿಯೊಬ್ಬಳಿಗೆ ಮತಾಂತರವಾಗುವಂತೆ ಒತ್ತಾಯಿಸಿ, ಲೈಂಗಿಕ ಕಿರುಕುಳ, ದೈಹಿಕ ಹಿಂಸೆ ನೀಡಿದ ವೈದ್ಯಕೀಯ ವಿದ್ಯಾರ್ಥಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ದೆಹಲಿಯ ಮಹಮ್ಮದ್ ಡ್ಯಾನಿಷ್ ಖಾನ್ (27) ಎಂದು ಗುರುತಿಸಲಾಗಿದೆ. ಈತ ಮಣಿಪಾಲ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಯಾಗಿದ್ದು, ಅದೇ ಕಾಲೇಜಿನಲ್ಲಿ ಕಲಿಯುತ್ತಿರುವ ರಾಜಸ್ಥಾನದ ಹಿಂದು ವಿದ್ಯಾರ್ಥಿನಿಯನ್ನು ಕ್ಯಾಂಪಸ್‌ನಲ್ಲಿ ಭೇಟಿಯಾಗಿ, ಪರಸ್ಪರ ಪ್ರೀತಿಸುತ್ತಿದ್ದರು ಮತ್ತು ಮದುವೆಯಾಗಲು ಸಿದ್ಧರಾಗಿದ್ದರು.ಆದರೆ ಮಹಮ್ಮದ್ ಡ್ಯಾನಿಷ್ ಖಾನ್, ಮದುವೆಗೆ ಮೊದಲು ಆಕೆಯನ್ನು ಇಸ್ಲಾಂ ಮತಕ್ಕೆ ಮತಾಂತರವಾಗಬೇಕು ಎಂದು ಷರತ್ತು ಹಾಕಿದ್ದ, ಆದರೆ ಇದಕ್ಕೆ ಆಕೆ ಒಪ್ಪಿರಲಿಲ್ಲ. ಆಕೆಯನ್ನು ಮಾತನಾಡುವುದಕ್ಕೆ ತಮ್ಮ ರೂಮಿಗೆ ಕರೆಸಿಕೊಂಡಿದ್ದ ಆತ, ಹಿಂದೂ ಧರ್ಮ ಹಾಗೂ ರಾಮ ಮಂದಿರದ ಬಗ್ಗೆ ಅವಹೇಳನಕಾರಿಯಾಗಿಯೂ ಮಾತನಾಡಿದ್ದ. ವಿರೋಧಿಸಿದಾಗ ಆಕೆಯ ಕೆನ್ನೆಗೆ ಹೊಡೆದು, ಕೂದಲು ಹಿಡಿದು ಎಳೆದಿದ್ದ ಮಾತ್ರವಲ್ಲ, ತನ್ನ ದೇಹದ ಖಾಸಗಿ ಭಾಗವನ್ನು ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದಾಕೆ ಮಣಿಪಾಲ ಠಾಣೆಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾಳೆ. ಆತನಿಂದ ತಾನು ದೂರವಾದರೂ ಫೋನ್‌ ಕರೆ ಮಾಡಿ ನಿರಂತರ ಕಿರುಕುಳ ನೀಡುತ್ತಿದ್ದ ಎಂದೂ ಆಕೆ ದೂರಿದ್ದಾಳೆ.ಈ ಹಿನ್ನೆಲೆಯಲ್ಲಿ ಮಣಿಪಾಲ ಪೊಲೀಸರು, ಮಹಮ್ಮದ್ ಡ್ಯಾನಿಷ್ ಖಾನ್‌ನನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.