ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ವಿದ್ಯಾರ್ಥಿ ಜೀವನದಲ್ಲಿ ಕಠಿಣ ಪರಿಶ್ರಮ ಅಗತ್ಯ ಎಂದು ಡಿಡಿಪಿಯು ಮಂಜುನಾಥ ಪ್ರಸನ್ನ ಹೇಳಿದರು.ನಗರದ ಜೆಎಸ್ಎಸ್ ಮಹಿಳಾ ಪದವಿ ಪೂರ್ವ ಕಾಲೇಜಿನ ಕ್ರೀಡಾ, ಸಾಂಸ್ಕೃತಿಕ ವೇದಿಕೆ ಹಾಗೂ ಎನ್‌ಎಸ್‌ಎಸ್ ಯೋಜನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಸಮರ್ಪಣ ಮನೋಭಾವದಿಂದ ತೊಡಗಿಸಿಕೊಂಡು ಓದಿದರೆ ಮಾತ್ರ ಸಾಧನೆ ಮಾಡಲು ಸಾಧ್ಯ. ಯಾವ ಸಮಾಜ ಶಿಕ್ಷಿತವಾಗಿರುತ್ತದೆ. ಅಂತಹ ಸಮಾಜ ಆದರ್ಶ ಸಮಾಜವಾಗುತ್ತದೆ. ಶಿಕ್ಷಣ ನೈತಿಕತೆ ಮತ್ತು ಮಾನವೀಯತೆಯನ್ನು ಕಲಿಸುತ್ತದೆ ಎಂದು ತಿಳಿಸಿದರು.ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು. ತಮ್ಮಲ್ಲಿರುವ ಪ್ರತಿಭೆಯನ್ನು ಹೊರ ಹಾಕಲು ಕಾಲೇಜು ವೇದಿಕೆ ನಿರ್ಮಿಸಿಕೊಡುತ್ತದೆ. ಅದನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜೆಎಸ್ಎಸ್ ಪದವಿ ಕಾಲೇಜು ಪ್ರಾಂಶುಪಾಲ ಎನ್.ಮಹದೇವಸ್ವಾಮಿ ಮಾತನಾಡಿ. ಕಾಲೇಜು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಬೇಕಾದ ಎಲ್ಲಾ ರೀತಿಯ ನೆರವನ್ನು ಕಲ್ಪಿಸಿಕೊಡುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಬಳಸಿಕೊಂಡು ಸೃಜನಶೀಲತೆ ಬೆಳೆಸಿಕೊಳ್ಳಬೇಕು ಎಂದರು.ವಿದ್ಯಾರ್ಥಿಗಳಿಗೆ ಸಂಸ್ಕೃತಿ ಮತ್ತು ಸಂಸ್ಕಾರ ಎಂಬುದು ನಿರಂತರವಾಗಿ ಇರಬೇಕು.ಆಗ ಮಾತ್ರ ಜವಾಬ್ದಾರಿಯುತ ನಾಗರೀಕರಾಗಲು ಸಾಧ್ಯ. ಇವೆರಡನ್ನು ಅಳವಡಿಕೊಂಡು ಬದುಕಿನಲ್ಲಿ ಸಾಧನೆ ಮಾಡಬೇಕು ಎಂದು ಪಣತೊಟ್ಟರೆ ಖಂಡಿತ ಯಶಸ್ಸು ನಿಮ್ಮದಾಗುತ್ತದೆ. ಇಂದು ನೀವು ಮೊಬೈಲ್ ಬಿಟ್ಟರೆ ಮಾತ್ರ ಮುಂದೆ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು.
ಅಂತಾರಾಷ್ಟ್ರೀಯ ಖೋಖೋ ಪಟು ಎಂ. ವೀಣಾ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆ ಮತ್ತು ಎನ್‌ಎಸ್‌ಎಸ್ ಚಟುವಟಿಕೆಗಳಲ್ಲೂ ತೊಡಗಿಕೊಂಡು ಉತ್ತಮ ಸಾಧನೆ ಮಾಡಬೇಕು. ಕ್ರೀಡೆಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.ಕ್ರೀಡಾಪಟುವಾಗಬೇಕಾದರೆ ಮೊದಲು ಶಿಸ್ತು, ತಾಳ್ಮೆ ಮತ್ತು ಸಮಯಪ್ರಜ್ಞೆ ಇರಬೇಕು. ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದರೆ ಸಮಾಜ ನಮ್ಮನ್ನು ಗುರುತಿಸುತ್ತದೆ. ಜೊತೆಗೆ ಕೆಲವು ವಿಭಾಗಗಳಲ್ಲಿ ಉದ್ಯೋಗವೂ ದೊರಕುತ್ತದೆ ಎಂದು ತಿಳಿಸಿದರು.
ಪ್ರಾಂಶುಪಾಲ ದೇವರಾಜಮೂರ್ತಿ, ಕ್ರೀಡಾ ಸಂಚಾಲಕ ರವಿಕುಮಾರ್, ಎನ್‌ಎಸ್ಎಸ್ ಮತ್ತು ಸಾಂಸ್ಕೃತಿಕ ವೇದಿಕೆ ಸಂಚಾಲಕ ಗಿರೀಶ್ ಸಿ. ಹರವೆ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ರಿಫಾ, ವಸುಧಾ ಇದ್ದರು. ಕೋಟ್ಅನ್ನದ ಮಹತ್ವ ಸಾರುವ "ಅನ್ನ " ಚಲನ ಚಿತ್ರ ಚಾಮರಾಜನಗರ ಭಾಷೆಯಲ್ಲಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಪೋಷಕರ ಜೊತೆಗೂಡಿ ಚಲನ ಚಿತ್ರ ವೀಕ್ಷಣೆ ಮಾಡುವ ಮೂಲಕ ನಮ್ಮ ಭಾಗದ ಕಲಾವಿದರನ್ನು ಪ್ರೊತ್ಸಾಹಿಸಬೇಕು.
-ಮಂಜುನಾಥ ಪ್ರಸನ್ನ, ಉಪನಿರ್ದೇಶಕ, ಪಪೂ ಶಿಕ್ಷಣ ಇಲಾಖೆ.