ಹಾವೇರಿ ತಾಲೂಕಿನ ಕಬ್ಬೂರು ಗ್ರಾಮದಲ್ಲಿರುವ ಸರ್ಕಾರಿ ಪಿಯು ಕಾಲೇಜಿನಲ್ಲಿ 2025-26ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಹಾವೇರಿ: ವಿದ್ಯಾರ್ಥಿಗಳು ಕಠಿಣ ಪರಿಶ್ರಮಪಟ್ಟು ಅಧ್ಯಯನ ಮಾಡಿದರೆ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಅವಕಾಶವಿದೆ. ಅಲ್ಲದೇ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಹಾಗೂ ಸಮಾಜಮುಖಿಯಾಗಿ ಬೆಳವಣಿಗೆ ಹೊಂದಲು ಸಾಧ್ಯವಿದೆ ಎಂದು ಪದವಿ ಪೂರ್ವ ಕಾಲೇಜ್ ಉಪನಿರ್ದೇಶಕ ಅಶೋಕ್ ಶಾಸ್ತ್ರಿ ಹೇಳಿದರು.

ತಾಲೂಕಿನ ಕಬ್ಬೂರು ಗ್ರಾಮದಲ್ಲಿರುವ ಸರ್ಕಾರಿ ಪಿಯು ಕಾಲೇಜಿನಲ್ಲಿ ನಡೆದ 2025-26ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ಕಠಿಣ ಪರಿಶ್ರಮ ಹಾಗೂ ಸಾಧನೆ ಒಟ್ಟಿಗೆ ಸಾಗುವ ಒಂದು ನಾಣ್ಯದ ಎರಡು ಮುಖಗಳಾಗಿವೆ. ಆದ್ದರಿಂದ ವಿದ್ಯಾರ್ಥಿಗಳು ಶ್ರದ್ಧೆಯಿಂದ ನಿರಂತರವಾಗಿ ಅಧ್ಯಯನ ಮಾಡಿದರೆ, ಸಾಧನೆ ಮೆಟ್ಟಿಲೇರಿದರೆ ಪಾಠ ಪ್ರವಚನ ಮಾಡಿದ ಉಪನ್ಯಾಸಕರಿಗೆ ಮತ್ತು ತಂದೆ-ತಾಯಿಗಳಿಗೆ ಹೆಮ್ಮೆಯಾಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎಚ್.ಡಿ. ಗಂಟೀರ ಮಾತನಾಡಿ, ಸರ್ಕಾರ ಒದಗಿಸಿದ ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಸತತ ಅಧ್ಯಯನ ಮಾಡಿ ಉತ್ತಮ ಫಲಿತಾಂಶ ಪಡೆದುಕೊಂಡು, ವಿದ್ಯೆ ಕಲಿಸಿದ ಕಾಲೇಜಿಗೆ ಹಾಗೂ ಹೆತ್ತವರಿಗೆ ಕೀರ್ತಿ ತರುವ ಗುರಿ ನಿಮ್ಮದಾಗಲಿ ಎಂದು ಹಾರೈಸಿದರು.

ಆಂಗ್ಲ ಉಪನ್ಯಾಸಕ ಅಶೋಕ ಕಹಾರ ಅವರು ವಾರ್ಷಿಕ ವರದಿ ವಾಚಿಸಿ ಮಾತನಾಡಿ, ಇಡೀ ವರ್ಷದಲ್ಲಿ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ, ಕ್ರೀಡೆ. ಮತ್ತು ಇತರ ವಲಯಗಳಲ್ಲಿ ಸಾಧಿಸಿದ ಸಾಧನೆ ಮತ್ತು ಒಂದು ವರ್ಷದಲ್ಲಿ ಕಾಲೇಜಿನಲ್ಲಿ ಆದ ಉತ್ತಮ ಬೆಳವಣಿಗೆ ಸುಸಜ್ಜಿತ ಗ್ರಂಥಾಲಯ ನಿರ್ಮಾಣ ಹಾಗೂ ವಿದ್ಯಾರ್ಥಿಗಳಿಗೆ ಒದಗಿಸಿದ ಅನುಕೂಲಗಳನ್ನು ವಿವರಿಸಿದರು. ಬೆಳ್ಳಕ್ಕಿ ಕುಟುಂಬದವರು ಕಾಲೇಜಿಗೆ ಸುಮಾರು ಎರಡೂವರೆ ಲಕ್ಷದಲ್ಲಿ ಉತ್ತಮವಾದ ಸರಸ್ವತಿ ಮಂಟಪ ನಿರ್ಮಿಸುವುದಾಗಿ ಭರವಸೆ ನೀಡಿದರು. 2024-25ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಾಣಿಜ್ಯ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಸಂಗೀತಾ ಕೆರುಸೂರ ಅವರನ್ನು ಸನ್ಮಾನಿಸಲಾಯಿತು.

ಪ್ರಾಂಶುಪಾಲ ಡಾ. ರಾಮ್ ಮನೋಹರರಾವ್, ಉಪನ್ಯಾಸಕರಾದ ಆನಂದ ಹಂಡೆ, ಗ್ರಾಪಂ ಅಧ್ಯಕ್ಷ ಕರಬಸಪ್ಪ ಹೊಸಳ್ಳಿ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ನವೀನ್ ಬೆಳ್ಳಕ್ಕಿ, ಸದಸ್ಯರಾದ ರವೀಂದ್ರ ಚಿನ್ನಿಕಟ್ಟಿ, ಚನ್ನಪ್ಪ ಸೊಟಾರಿ, ಹಜರತ್‌ಅಲಿ ಶಿರ್ಸಿ, ಮಂಜಪ್ಪ ಹಾನಗಲ್, ಗುಡ್ಡಪ್ಪ ಕನವಳ್ಳಿ. ಬಸಪ್ಪ ದ್ಯಾವಣ್ಣನವರ ಇತರರಿದ್ದರು. ಉಪನ್ಯಾಸಕರಾದ ಜಿ.ಎಚ್. ವಾಲ್ಮೀಕಿ ಮಾತನಾಡಿದರು. ನೇತ್ರಾ ಅಂದಾನಿ ಹಾಗೂ ಸಂಗಡಿಗರು ಪ್ರಾರ್ಥನೆಗೈದರು. ರೂಪಾ ಕಾಳಪ್ಪನವರ ಸ್ವಾಗತಿಸಿದರು. ಅಕ್ಕಮ್ಮ ಕಮ್ಮಾರ ಕಾರ್ಯಕ್ರಮ ನಿರೂಪಿಸಿದರು. ಸಿಂಚನಾ ದೇವಸೂರ ವಂದಿಸಿದರು.