ಸಾರಾಂಶ
ಸಿಂಧನೂರಿನಲ್ಲಿ ನಡೆದ ಯುಗಾದಿ ಉತ್ಸವ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತಗಾರ ಹುಸೇನಸಾಬ ದಾಸ ಹಾಗೂ ಸಮಾಜ ಸೇವಕಿ ವಿರುಪಮ್ಮ ಚಿದಾನಂದಪ್ಪಗೆ ಕಲ್ಯಾಣ ಕರ್ನಾಟಕ ಕಣ್ಮಣಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಸಿಂಧನೂರು: ಹರಿದಾಸರು ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಸಮಾಜದ ಅಂಕು-ಡೊಂಕು ತಿದ್ದುವಲ್ಲಿ ಮಹತ್ವದ ಪಾತ್ರ ವಹಿಸಿದರು. ವಿಶೇಷವಾಗಿ ಅವರ ಕೀರ್ತನೆಗಳಲ್ಲಿ ಭಕ್ತಿ ಸಾಹಿತ್ಯ ಅಡಕವಾಗಿದೆ ಎಂದು ಖ್ಯಾತ ಸಂಗೀತಗಾರ ಹುಸೇನಸಾಬ ದಾಸ ಹೇಳಿದರು.
ನಗರದಲ್ಲಿ ಯುಗಾದಿ ಉತ್ಸವ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಯುಗಾದಿ ಉತ್ಸವ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಕಣ್ಮಣಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಕನಕದಾಸರ ಕೀರ್ತನೆಯೊಂದನ್ನು ಹಾಡುವ ಮೂಲಕ ಕನಕದಾಸರು ದಾಸ ಪರಂಪರೆಯಲ್ಲಿ ಅನೇಕ ಕೀರ್ತನೆ, ಉಗಾಭೋಗಾ, ನಿಂದಾಸ್ತುತಿ ರಚಿಸಿದರು. ಅವರ ಮುಂಡಿಗೆಗಳಲ್ಲಿ ದೇವರ ಇರುವಿಕೆ ಕುರಿತಾಗಿ ಅವರ ಲೀಲಾ ವಿನೋದಗಳನ್ನು ಬಗೆಬಗೆಯಾಗಿ ವಿವರಿಸಿದ್ದಾರೆ. ದಾಸ ಸಾಹಿತ್ಯ ಮತ್ತು ವಚನ ಸಾಹಿತ್ಯಗಳು ಸಮಾಜದ ಎರಡು ಕಣ್ಣುಗಳು ಎಂದು ವಿವರಿಸಿದರು.ಸಮಾಜ ಸೇವಕಿ ವಿರುಪಮ್ಮ ಚಿದಾನಂದಪ್ಪ ಮಾತನಾಡಿದರು. ಇರಕಲ್ ಶಿವಶಕ್ತಿ ಪೀಠದ ಬಸವ ಪ್ರಸಾದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಿತಿ ಸಂಚಲಕ ವೈ.ನರೇಂದ್ರನಾಥ, ಡಾ.ಚೆನ್ನನಗೌಡ ಪೊಲೀಸ್ ಪಾಟೀಲ್, ಮುರಳಿಕೃಷ್ಣ, ನಿವೃತ್ತ ಪ್ರಾಚಾರ್ಯ ಪ್ರೊ.ಶಾಶ್ವತಯ್ಯಸ್ವಾಮಿ ಮುಕ್ಕುಂದಿಮಠ, ಡಾ.ಕೆ.ಶಿವರಾಜ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ ಸೇರಿ ಅನೇಕರು ಇದ್ದರು.