ಸಾರಾಂಶ
- ಮಲೇಬೆನ್ನೂರು ನೀರಾವರಿ ಕಚೇರಿಗೆ ಫ್ಲೆಕ್ಸ್ ಕಟ್ಟಿ ಕರ್ತವ್ಯಕ್ಕೆ ಅಡ್ಡಿ । ಕೆಲವರ ವಶ, ಪೊಲೀಸ್ ವಾಹನಕ್ಕೆ ಘೇರಾವ್
- - -ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಭದ್ರಾ ನಾಲೆಯ ಕೊನೆ ಭಾಗದ ನಾಲೆಯಲ್ಲಿ ಹೂಳು ತೆರವು, ಗೇಟ್‌ಗಳ ದುರಸ್ತಿ ಮತ್ತು ಜಂಗಲ್ ತೆಗೆಸುವ ಕಾಮಗಾರಿ ನಡೆಸಲು ಒತ್ತಾಯಿಸಿ ಮಲೇಬೆನ್ನೂರು ನೀರಾವರಿ ನಿಗಮದ ಎದುರು ದಾವಣಗೆರೆ ಮತ್ತು ಹರಿಹರ ತಾಲೂಕಿನ ರೈತರು ಮಂಗಳವಾರ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಭಾವಚಿತ್ರ ಹಿಡಿದು ಶಿವಮೊಗ್ಗ- ಹೊನ್ನಾಳಿ ಮಾಗದಲ್ಲಿ ವಾಹನಗಳ ಸಂಚಾರ ತಡೆದು ರಸ್ತೆ ತಡೆ ಚಳವಳಿ ನಡೆಸಿದರು.ಬೆಳಗ್ಗೆ ನೀರಾವರಿ ನಿಗಮ ನೌಕರರು ಕರ್ತವ್ಯ ನಿರ್ವಹಿಸಲೂ ಬಿಡದೇ ಬಾಗಿಲಿಗೆ ರೈತ ಸಂಘದ ಫ್ಲೆಕ್ಸ್ ಕಟ್ಟಿದ ಆಕ್ರೋಶ ವ್ಯಕ್ತಪಡಿಸಿದರು. ರೈತರ ಪ್ರತಿಭಟನೆಯಿಂದಾಗಿ ನೌಕರರು ಸ್ವಲ್ಪ ಹೊತ್ತು ಮರದ ಕೆಳಗೆ ಕುಳಿತರು. 1 ಗಂಟೆ ನಂತರ ಪೊಲೀಸರ ಭದ್ರತೆಯಲ್ಲಿ ಮತ್ತೆ ನೌಕರರು ಕಚೇರಿಯೊಳಗೆ ತೆರಳಿದಾಗ ರೈತರು ತಡೆದರು.
ಪಿಎಸ್‌ಐ ಪ್ರಭು ಕೆಳಗಿನಮನಿ ರೈತರ ಅಹವಾಲು ಆಲಿಸಿದರು. ಇಲಾಖೆ ಅಧಿಕಾರಿಗಳು ಜಿಲ್ಲಾ ಸಚಿವರಿಗೆ ರೈತರ ಸಂಕಷ್ಟಗಳನ್ನು ತಿಳಿಸಲಿದ್ದಾರೆ. ಶಾಂತಿಯುತ ಹೋರಾಟ ಮಾಡಿ. ರಸ್ತೆ ತಡೆ ನಡೆಸಿ ನಾಗರೀಕರಿಗೆ ತೊಂದರೆ ಕೊಡಬೇಡಿ ಎಂದು ಮನವೊಲಿಸುವ ಪ್ರಯತ್ನ ಮಾಡಿದರು. ಪಿಎಸ್‌ಐ ಮಾತಿಗೆ ಜಗ್ಗದೇ ರೈತರು ಅರ್ಧ ಗಂಟೆಗೆ 2 ಬಾರಿ ಶಿವಮೊಗ್ಗ-ಹೊನ್ನಾಳಿ ಮುಖ್ಯ ರಸ್ತೆಯನ್ನು ಬಂದ್ ಮಾಡಿ ನೀರಾವರಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.ಪ್ರತಿಭಟನಾನಿರತ ಕೆಲ ರೈತರನ್ನು ವಶಕ್ಕೆ ಪಡೆದು ಪೋಲಿಸ್ ವಾಹನದಲ್ಲಿ ಕೂರಿಸಲಾಯಿತು. ಆಗ ಕೆಲವರು ಪೊಲೀಸ್ ವಾಹನದ ಚಕ್ರದ ಮುಂಭಾಗದಲ್ಲಿ ಕುಳಿತು, ಚಲಿಸದಂತೆ ಅಡ್ಡಿಪಡಿಸಿದರು. ಸಂಜೆ 4 ಗಂಟೆಯಾದರೂ ಯಾವುದೇ ರಾಜಕಾರಣಿಗಳು, ಅಧಿಕಾರಿಗಳು ಸ್ಥಳ್ಕಕೆ ಬರಲಿಲ್ಲ. ಗೇಟ್ ಬಳಿಯೇ ರೈತ ಮುಖಂಡರು ಧರಣಿ ಮುಂದುವರಿಸಿದರು.
ಮುಖಂಡ ಮಂಡಲೂರು ವಿಶ್ವನಾಥ್ ಪ್ರತಿಭಟನೆ ವೇಳೆ ಮಾತನಾಡಿ, ದೇವರಬೆಳಕೆರೆ ಪಿಕಪ್ ವ್ಯಾಪ್ತಿಯ ಕಡ್ಳೆಗೊಂದಿ, ಸಲಗನಹಳ್ಳಿ, ಬನ್ನಿಕೋಡು, ಗಂಗನರಸಿ, ಕೋಡಿಹಳ್ಳಿ, ಗುತ್ತೂರು ಭಾಗದ ನಾಲೆಗಳಲ್ಲಿ ೧೦ ವರ್ಷಗಳಿಂದ ಹೂಳು ತೆಗಸದೇ, ಗೇಟ್ ದುರಸ್ತಿಪಡಿಸದೇ ನಾಲೆಗಳಲ್ಲಿ ಸರಾಗವಾಗಿ ನೀರು ಹರಿಯದೇ ಬೆಳೆಗಳಿಗೆ ಹಾನಿಯಾಗುತ್ತಿದೆ. ಅಧಿಕಾರಿಗಳು ಮತ್ತು ರಾಜಕಾರಣಿಗಳು ನೀರು ಹರಿಸುವ ಭರವಸೆ ನೀಡಿದ್ದರು. ಆದರೆ, ರೈತರ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಈ ಹಿನ್ನೆಲೆ ರಸ್ತೆ ತಡೆ ನಡೆಸಿದ್ದೇವೆ ಎಂದು ತಿಳಿಸಿದರು.ಗುತ್ತೂರು, ಗಂಗನರಸಿ, ಅಮರಾವತಿ ಮತ್ತು ಕೋಡಿಹಳ್ಳಿ ಗ್ರಾಮಗಳ ರೈತರಾದ ಕರಿಬಸಪ್ಪ, ಗೌಡರ ಮಂಜಣ್ಣ, ಶಿವಪ್ಪ, ವಿರೂಪಾಕ್ಷಪ್ಪ, ಪಾಲಾಕ್ಷಪ್ಪ, ನಾಗರಾಜ್, ರೋಹನ್, ಪರಮೆಶ್ವರಪ್ಪ, ಮಹದೇವಪ್ಪ, ರಾಜಣ್ಣ, ಮಲ್ಲೇಶ್,ಲೋಕಣ್ಣ, ಸೋಮಣ್ಣ, ವೀರಮ್ಮ, ಯಲ್ಲಮ್ಮ, ರಾಮಮ್ಮ, ಮಂಜಮ್ಮ, ಗುಡ್ಡಪ್ಪ ಹಾಗೂ ಮತ್ತಿತರರು ಧರಣಿಯಲ್ಲಿ ಭಾಗವಹಿಸಿದ್ದರು.
- - --೨೨-ಎಂಬಿಆರ್೧: ನಾಲೆ ಕೊನೆ ಭಾಗದ ರೈತರಿಗೆ ನೀರು ಹರಿಸಲು ಒತ್ತಾಯಿಸಿ ಮಲೇಬೆನ್ನೂರು ನೀರಾವರಿ ಇಲಾಖೆ ಕಚೇರಿ ಎದುರು ಹರಿಹರ, ದಾವಣಗೆರೆ ತಾಲೂಕಿನ ರೈತರು ರಸ್ತೆ ತಡೆ ನಡೆಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))