ಸಾರಾಂಶ
- ಮೂಲಸೌಲಭ್ಯ ಒದಗಿಸುವ ಗುರಿ: ಅಧ್ಯಕ್ಷೆ । ಪೌರಾಯುಕ್ತರಿಗೆ ಧಿಕ್ಕಾರ ಕೂಗಿ ಸಭಾತ್ಯಾಗ - - - ಕನ್ನಡಪ್ರಭ ವಾರ್ತೆ ಹರಿಹರ
ನಗರಸಭಾ ಸಭಾಂಗಣದಲ್ಲಿ ನಡೆದ 2025- 26ನೇ ಸಾಲಿನ ಬಜೆಟ್ ಅನ್ನು ನಗರಸಭಾಧ್ಯಕ್ಷೆ ಕವಿತಾ ಮಾರುತಿ ಬೇಡರ್ ಅವರು ₹5.40 ಲಕ್ಷ ಉಳಿತಾಯ ಬಜೆಟ್ ಮಂಡಿಸಿದರು.ನಗರಸಭೆ ಸಭಾಂಗಣದಲ್ಲಿ ಗುರುವಾರ 2025-26ನೇ ಸಾಲಿನ ಬಜೆಟ್ ಮಂಡಿಸಿ ಮಾತನಾಡಿದ ಅವರು, ಮೂಲ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವ ಗುರಿಯನ್ನು ಪ್ರಸಕ್ತ ಸಾಲಿನ ಬಜೆಟ್ ಒಳಗೊಂಡಿದೆ ಎಂದರು.
ಪ್ರಮುಖ ವೆಚ್ಚಗಳು:ಪರಿಸರಸ್ನೇಹಿ ಅಂಗನವಾಡಿಗಳ ನಿರ್ಮಾಣಕ್ಕೆ ₹25 ಲಕ್ಷ, ಫುಡ್ ಸ್ಟ್ರೀಟ್ ನಿರ್ಮಾಣಕ್ಕೆ ₹25 ಲಕ್ಷ, ಉದ್ಯಾನಗಳ ಅಭಿವೃದ್ಧಿ ₹100 ಲಕ್ಷ, ಗಿಡಗಳ ನೆಟ್ಟು ಸಂರಕ್ಷಣೆಗೆ ₹6 ಲಕ್ಷ, ಸ್ಮಶಾನಗಳ ಅಭಿವೃದ್ಧಿಗೆ ₹25 ಲಕ್ಷ, ನೀರಿನ ಘಟಕ ನಿರ್ಮಾಣಕ್ಕೆ ರಾಜನಹಳ್ಳಿ ಅಥವಾ ಮಾಕನೂರು ಬಳಿ ಜಮೀನು ಖರೀದಿಗೆ ₹250 ಲಕ್ಷ, ಹರಿಹರೇಶ್ವರ ದೇವಸ್ಥಾನ ಬಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ₹30 ಲಕ್ಷ, ಕೊಳವೆಬಾವಿ, ಇಂಗುಗುಂಡಿಗಳ ನಿರ್ಮಾಣಕ್ಕೆ ₹25 ಲಕ್ಷ, ಬೀದಿಗಳಿಗೆ ನಾಮಫಲಕ ಅಳವಡಿಕೆಗೆ ₹31 ಲಕ್ಷ, ನಗರದ 4 ದಿಕ್ಕುಗಳ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಸ್ವಾಗತ ಕಮಾನ್ ನಿರ್ಮಾಣಕ್ಕೆ ₹50 ಲಕ್ಷ, ರಸ್ತೆ, ಚರಂಡಿ, ಸೇತುವೆ ನಿರ್ಮಾಣಕ್ಕೆ ₹900 ಲಕ್ಷ ಮೀಸಲಿಡಲಾಗಿದೆ ಎಂದರು.
ಘನತ್ಯಾಜ್ಯ ನಿರ್ವಹಣೆಯ ಜಮೀನು ಅಭಿವೃದ್ಧಿ ₹250 ಲಕ್ಷ, ಬೀದಿದೀಪಕ್ಕೆ ₹50 ಲಕ್ಷ, ಇದಲ್ಲದೇ ಈ ಬಾರಿ ನವಂಬರ್ 2025 ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ₹10 ಲಕ್ಷ, ಕನ್ನಡ ಭವನ ನಿರ್ಮಾಣಕ್ಕೆ ₹10 ಲಕ್ಷ ಸೇರಿದಂತೆ ಕುಡಿಯುವ ನೀರು ರಾಸಾಯನಿಕಗಳ ಖರೀದಿಗೆ ₹100 ಲಕ್ಷ ಮೀಸಲಿಡಲಾಗಿದೆ. ಹಲವು ಯೋಜನೆಗಳನ್ನೂ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.ಆದಾಯಗಳು:
2025- 26ನೇ ಸಾಲಿನಲ್ಲಿ ₹5925.25 ಲಕ್ಷ ಜಮಾ ಆದರೆ ₹5919.84 ಲಕ್ಷ ಖರ್ಚು ಮಾಡುವ ಮೂಲಕ ₹5.40 ಲಕ್ಷ ಉಳಿತಾಯ ಮಾಡಲಾಗಿದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು.ಬಜೆಟ್ ವಿಶ್ಲೇಷಿಸಿ ಮಾತನಾಡಿದ ಹಿರಿಯ ಸದಸ್ಯ ಶಂಕರ್ ಖಟಾಕರ್, ಹಿಂದಿನ ಬಜೆಟ್ ಅಂಕಿ ಅಂಶಗಳನ್ನೇ ಹೆಚ್ಚು ಕಡಿಮೆ ಮಾಡಿ ಮಂಡಿಸಿರುವ ಬಜೆಟ್ ಇದಾಗಿದೆ. ಈ ಬಜೆಟ್ ಕೂಡ ಪುಸ್ತಕದ ಬದನೇಕಾಯಿ ಆಗದೇ ಕಾರ್ಯರೂಪಕ್ಕೆ ಬರಬೇಕೆಂದು ತಿಳಿಸಿದರು.
ಧಿಕ್ಕಾರ ಕೂಗಿ ಸಭಾತ್ಯಾಗ:ಸದಸ್ಯ ದಾದಾ ಖಲಂದರ್ ಮಾತನಾಡಿ, ಕಳೆದ ಐದು ವರ್ಷಗಳಿಂದ ಬಜೆಟ್ ಅಂಶಗಳು ಜಾರಿಗೊಂಡಿಲ್ಲ. ಈ ಬಜೆಟ್ ನಮ್ಮ ಅವಧಿಯ ಕೊನೆಯ ಬಜೆಟ್ ಆಗಿದೆ. ಇದು ಅಧ್ಯಕ್ಷರು ರೂಪಿಸಿರುವ ಬಜೆಟ್ ಅಲ್ಲ, ಪೌರಾಯುಕ್ತರು ರೂಪಿಸಿರುವ ಬಜೆಟ್ ಆಗಿದೆ. ಈ ಬಜೆಟ್ಟಿನಲ್ಲಿ ಹುರಳಿಲ್ಲ ಎಂದು ಬೇಸರ ವ್ಯಕ್ತಪಡಿಸಿ, ಪೌರಾಯುಕ್ತರಿಗೆ ಧಿಕ್ಕಾರ ಕೂಗುತ್ತಾ ಸಭಾತ್ಯಾಗ ಮಾಡಿದರು.
ಹಿರಿಯ ಸದಸ್ಯ ಎ.ವಾಮನಮೂರ್ತಿ ಮಾತನಾಡಿ, ಕಸ ವಿಲೇವಾರಿ ಆಟೋ ಟಿಪ್ಪರ್, ಟ್ಯಾಕ್ಟರ್, ಖರೀದಿ ಹಾಗೂ ಕ್ರೀಡಾಪಟುಗಳಿಗೆ ಸಹಾಯಧನ ಹಲವು ಅಂಶಗಳು ಇಲ್ಲದೇ ಇರುವುದು ಸರಿಯಲ್ಲ. ಇದನ್ನು ಅಡಕ ಮಾಡಬೇಕೆಂದು ಸಲಹೆ ನೀಡಿದರು.ಸದಸ್ಯ ಎಸ್.ಎಂ. ವಸಂತ್ ಮಾತನಾಡಿ, ನಲ್ಮ್ ಯೋಜನೆಯಡಿ 25ಕ್ಕೂ ಹೆಚ್ಚು ಮಳಿಗೆಗಳನ್ನು ನಿರ್ಮಿಸಿದ್ಧೀರಿ. ಅವುಗಳನ್ನು ಹರಾಜು ಮಾಡಿ ಫಲಾನುಭವಿಗಳಿಗೆ ಹಂಚಿಕೆ ಮಾಡಿಲ್ಲ. ಇದು ನಗರಸಭೆ ಆದಾಯಕ್ಕೆ ಹೊಡೆತ ಬಿಡುತ್ತಿದೆ ಎಂದರು.
ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಮಾತನಾಡಿ, ವಾರಕ್ಕೆ ಒಂದು ದಿನ ಆಯುಕ್ತರ ಸಮ್ಮುಖದಲ್ಲಿ ಕಾಮಗಾರಿಗಳ ಹಾಗೂ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಿದರು. ಅನಂತರ ಜಿಲ್ಲಾಧಿಕಾರಿ ಅವರಿಂದ ಆಗಬೇಕಾದ ಯೋಜನೆಗಳ ಅಪ್ರೂವ್ ಮಾಡಿಸಲು ಎಲ್ಲರೂ ನಿಯೋಗ ಹೋಗೋಣ ಎಂದರು. ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕೆಂದು ಕೋರಿದರು. ಎಲ್ಲ ಸದಸ್ಯರು ಮೇಜು ತಟ್ಟಿ ಬೆಂಬಲ ವ್ಯಕ್ತಪಡಿಸಿದರು.ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ, ಉಪಾಧ್ಯಕ್ಷ ಎಂ. ಜಂಬಣ್ಣ, ಸದಸ್ಯರಾದ ಆಟೋ ಹನುಮಂತಪ್ಪ, ಸೈಯದ್ ಅಬ್ದುಲ್ ಅಲೀಂ, ಇಬ್ರಾಹಿಂ, ಕೆ.ಜಿ.ಸಿದ್ದೇಶ್, ಸುಮಿತ್ರಮ್ಮ ಮರಿದೇವ, ರೇಷ್ಮಾಬಾನು, ಫಕ್ಕೀರಮ್ಮ, ಲಕ್ಷ್ಮೀ ಮೋಹನ್, ರತ್ನಮ್ಮ ಡಿ.ಯು., ಶಾಜಾದ್ ಸನಾಉಲ್ಲಾ, ಆರ್.ಸಿ. ಜಾವೀದ್, ಶಾಹೀನಾ ಬಾನು, ನಿಂಬಕ್ಕ ಚಂದಾಪುರ, ಎಂ.ಎಸ್.ಬಾಬುಲಾಲ್, ಅಶ್ವಿನಿ ಕೃಷ್ಣ, ಕವಿತಾ ಕೆ.ಬಿ.ರಾಜಶೇಖರ್,ಸಂತೋಷ ದೊಡ್ಮನಿ ಸೇರಿದಂತೆ ಇತರರಿದ್ದರು.
- - - -27ಎಚ್‌ಆರ್‌ಆರ್02:ಹರಿಹರದಲ್ಲಿ ನಗರಸಭಾ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ 2025-26ನೇ ಸಾಲಿನ ಆಯವ್ಯಯ ಮಂಡನೆ ಮಾಡಿದರು.