ಹರಪನಹಳ್ಳಿ: ಹರಿಹರ ಪಂಚಮಸಾಲಿ ಪೀಠದ ಆಡಳಿತದಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿರುವ ಅವ್ಯವಹಾರಗಳು ಹಾಗೂ ಅವ್ಯವಸ್ಥೆಗಳಿಂದ ಸಮಾಜ ಮುಜುಗರಕ್ಕೆ ಈಡಾಗಿರುವುದು ವಿಷಾದನೀಯ ಎಂದು ಪಂಚಮಸಾಲಿ ಸಮಾಜದ ಮುಖಂಡ ಶಶಿಧರ ಪೂಜಾರ ಹೇಳಿದರು.

ನಗರದ ಪ್ರವಾಸಿಮಂದಿರದಲ್ಲಿ ಶನಿವಾರ ತಾಲೂಕು ಪಂಚಮಸಾಲಿ ಸಮಾಜದ ಮುಖಂಡರು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಪೀಠವು ನಾಡಿನ ಪಂಚಮಸಾಲಿ ಜನಾಂಗದ ಶ್ರಮ, ತ್ಯಾಗ ಮತ್ತು ಭಕ್ತಿಯ ಪ್ರತೀಕವಾಗಿದೆ. ಇದು ಕೇವಲ ಧಾರ್ಮಿಕ ಕೇಂದ್ರವಲ್ಲ. ಸಮಾಜದ ಗೌರವ ಮತ್ತು ಏಕತೆಯ ಸಂಕೇತವಾಗಿದೆ. ಆದರೆ ಟ್ರಸ್ಟಿಗಳು ಮಠದ ಶ್ರೀಗಳನ್ನು ಉಚ್ಚಾಟಿಸಿ ಲೆಕ್ಕಪತ್ರ ಕೊಡುವುದು ಸೂಕ್ತವಲ್ಲ. ಶ್ರೀಗಳ ನೇತೃತ್ವದಲ್ಲಿ ತಕ್ಷಣದಿಂದಲೇ ಎಲ್ಲ ಹಣಕಾಸು ವ್ಯವಹಾರಗಳ ವಿವರಗಳನ್ನು ಸಮಗ್ರವಾಗಿ ಬಹಿರಂಗಪಡಿಸಿ, ದಾಖಲೆಗಳನ್ನು ಸಲ್ಲಿಸಬೇಕೆಂದು ಒತ್ತಾಯಿಸಿದರು.

ಸಮಾಜದ ಪೀಠಕ್ಕೆ ಹಣ, ಭೂಮಿ ಇತ್ಯಾದಿ ದೇಣಿಗೆ ನೀಡಿದವರ ಸಂಪೂರ್ಣ ವಿವರಗಳು ಸ್ಪಷ್ಟವಾಗಿ ದಾಖಲಿಸಿ ಸಮಾಜದ ಭಕ್ತರಿಗೆ ಲಭ್ಯವಾಗುವಂತೆ ಪ್ರಕಟಿಸಬೇಕು. ಮಠಕ್ಕೆ ಸಂಬಂಧಿಸಿದ ಆಸ್ತಿಗಳು ಕೆಲವು ವ್ಯಕ್ತಿಗಳ ವೈಯಕ್ತಿಕ ಹೆಸರಿನಲ್ಲಿ ದಾಖಲಾಗಿರುವುದು ಗಂಭೀರ ವಿಚಾರವಾಗಿದೆ. ಅವುಗಳನ್ನು ಮಠದ ಹೆಸರಿನಲ್ಲಿ ಕಾನೂನುಬದ್ಧವಾಗಿ ವರ್ಗಾವಣೆ ಮಾಡಬೇಕು. ಈ ಪ್ರಕ್ರಿಯೆಯ ವೆಚ್ಚವನ್ನು ಸಂಬಂಧಿತ ವ್ಯಕ್ತಿಗಳೇ ಭರಿಸಬೇಕು ಎಂದು ಆಗ್ರಹಿಸಿದರು.

ಪುರಸಭೆ ಮಾಜಿ ಅಧ್ಯಕ್ಷೆ ಪ್ರಭಾ ಅಜ್ಜಣ್ಣ ಮಾತನಾಡಿ, ಪ್ರಸ್ತುತ ಮಠದ ಟ್ರಸ್ಟ್ ಆಡಳಿತ ಮಂಡಳಿಯು ತಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಲು ವಿಫಲವಾಗಿದೆ. ಟ್ರಸ್ಟಿಗಳು ಸಂಪೂರ್ಣ ಲೆಕ್ಕಪತ್ರ ಸಲ್ಲಿಸಿ ತಮ್ಮ ಹುದ್ದೆಗಳಿಗೆ ತಕ್ಷಣವೇ ರಾಜೀನಾಮೆ ನೀಡಬೇಕು. ಶ್ರೀಗಳು ಅಪಾರ ಭಕ್ತರ ಹೃದಯದಲ್ಲಿರುವುದರಿಂದ ಅವರನ್ನು ಮುಂದುವರಿಸಬೇಕು ಎಂದು ತಿಳಿಸಿದರು.

ವಕೀಲ ಕೆ.ಬಸವರಾಜ ಮಾತನಾಡಿ, ಬೈಲಾ ಪ್ರಕಾರ ಟ್ರಸ್ಟ್ ಸದಸ್ಯರು ಪ್ರತಿ ಐದು ವರ್ಷಕ್ಕೊಮ್ಮೆ ಬದಲಾಗಬೇಕು. ಆದರೆ ಈ ನಿಯಮ ಪಾಲಿಸಲಾಗಿಲ್ಲ. ಬೈಲಾ ಅನುಸಾರ ತಕ್ಷಣ ಹೊಸ ಟ್ರಸ್ಟ್ ರಚಿಸಬೇಕು. ಸಮಾಜದ ಪೀಠವನ್ನು ಕೊಪ್ಪಳದ ಹನುಮನಾಳ್‌ ಹುಟ್ಟು ಹಾಕಿದ್ದಾರೆ. ಯಾವುದೇ ಟ್ರಸ್ಟ್ ಸದಸ್ಯರಲ್ಲ. ಇಲ್ಲಿ ಟ್ರಸ್ಟ್ ಆಗಲಿ, ಸ್ವಾಮೀಜಿಯಾಗಲಿ ದೊಡ್ಡವರಲ್ಲ. ಸಮಾಜ ದೊಡ್ಡದು ಸಮಾಜದ ಪೀಠದ ಸ್ಥಾಪನೆಗೆ ಹರಪನಹಳ್ಳಿ ತಾಲೂಕು ಕೊಡುಗೆ ಅಪಾರವಾಗಿದೆ. ಈಗಿರುವ ಶ್ರೀಗಳಿಗೆ ಸಮಾಜದಿಂದ ನೈತಿಕ ಬೆಂಬಲ ನೀಡಲಾಗುವುದು ಎಂದರು.


ಒಂದು ವೇಳೆ ಟ್ರಸ್ಟ್, ಸ್ವಾಮೀಜಿ, ಸಮಾಜದವರ ನಡುವೆ ಈ ಸಮಸ್ಯೆ ಶೀಘ್ರ ಇತ್ಯರ್ಥವಾಗದಿದ್ದಲ್ಲಿ ಕಾನೂನಾತ್ಮಕ ಹೋರಾಟ ಮಾಡಲು ಮುಂದಾಗಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ವಕೀಲ ಮತ್ತಿಹಳ್ಳಿ ಅಜ್ಜಣ್ಣ, ತೆಲಿಗಿ ಈಶ್ವರಪ್ಪ, ಎ.ಕರಿಬಸವರಾಜ, ಅರಸೀಕೆರಿ ಪಂಪಣ್ಣ, ಎಚ್.ಮಲ್ಲಿಕಾರ್ಜುನ, ವಕೀಲರಾದ ಮಲ್ಲಪ್ಪ, ಕರಿಬಸಪ್ಪ, ಓಂಕಾರಗೌಡ, ಶ್ಯಾನಬೋಗರ ಸುರೇಶ, ಶ್ರೀಶೈಲಾ, ಅಡಿವಿಹಳ್ಳಿ ಬಸವರಾಜ ಪೂಜಾರ, ಪ್ರಭಾಕರ, ಮಲ್ಲಣ್ಣ, ರೇವಣ್ಣ, ಶರತ್ ಇದ್ದರು.