ಚುನಾವಣೆಗೆ ಹರಿಹರ ತಾಲೂಕು ಸಜ್ಜು: ಭಾವನ

| Published : Mar 25 2024, 12:50 AM IST

ಸಾರಾಂಶ

ಮೇ ೭ರಂದು ನಡೆಯಲಿರುವ ಲೋಕಸಭಾ ಚುನಾವಣೆ ನಿಮಿತ್ತ ಜಾರಿಗೊಂಡಿರುವ ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ನೀತಿ ಸಂಹಿತೆ ಸಂಬಂಧ ಎಲ್ಲ ನಿಯಮ ಪಾಲಿಸಬೇಕು. ತಪ್ಪಿದರೆ ದಂಡ ಹಾಕುವುದಲ್ಲದೇ, ದೂರು ದಾಖಲಿಸಿಕೊಂಡು ಕ್ರಮ ಜರುಗಿಸಲಾಗುತ್ತದೆ ಎಂದು ಹರಿಹರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಭಾವನ ಬಸವರಾಜ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹರಿಹರ

ಮೇ ೭ರಂದು ನಡೆಯಲಿರುವ ಲೋಕಸಭಾ ಚುನಾವಣೆ ನಿಮಿತ್ತ ಜಾರಿಗೊಂಡಿರುವ ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹರಿಹರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಭಾವನ ಬಸವರಾಜ್ ಹೇಳಿದರು.

ತಾಲೂಕು ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಟಿ ನಡೆಸಿದ ಅವರು, ಯಾವುದೇ ಸಭೆ, ಸಮಾರಂಭ, ಆಯೋಜಿಸಲು ಪೂರ್ವಾನುಮತಿ ಪಡೆಯುವುದು, ಪ್ರಚಾರ ಕಾರ್ಯಕ್ಕೆ ವಾಹನ ಬಳಕೆ, ಬಾವುಟ, ಬಂಟಿಂಗ್ಸ್, ಇತ್ಯಾದಿಗೆ ಪರವಾನಿಗೆ ಪಡೆಯುವುದು ಸೇರಿದಂತೆ ಎಲ್ಲ ನಿಯಮ ಪಾಲಿಸಬೇಕು. ತಪ್ಪಿದರೆ ದಂಡ ಹಾಕುವುದಲ್ಲದೇ, ದೂರು ದಾಖಲಿಸಿಕೊಂಡು ಕ್ರಮ ಜರುಗಿಸಲಾಗುತ್ತದೆ ಎಂದರು.

ಮತದಾರರು:

ಪ್ರಸಕ್ತ ಚುನಾವಣೆಗೆ ತಾಲೂಕಿನಲ್ಲಿ ೧,೦೫,೩೪೩ ಮಹಿಳೆಯರು, ೧,೦೪,೩೪೮ ಪುರುಷರು ಹಾಗೂ ೧೭ ಮಂಗಳಮುಖಿಯರು ಹಾಗೂ ಗಡಿ ಭದ್ರತಾ ಸೇವೆಯಲ್ಲಿರುವ ೭೩ ಮತದಾರರು ಸೇರಿ ಒಟ್ಟು ೨,೦೯,೭೮೦ ಮತಗಳಿವೆ. ಈ ಚುನಾವಣೆಯಲ್ಲಿ ೨೫೭೯ ಯುವಕರು ಹಾಗೂ ೨೩೮೯ ಯುವತಿಯರು ಒಟ್ಟು ೪೯೬೮ ಯುವ ಮತದಾರರು ಈ ಬಾರಿ ಮತ ಚಲಾಯಿಸಲಿದ್ದಾರೆ.

೨೨೮ ಮತಗಟ್ಟೆ:

ತಾಲೂಕಿನಲ್ಲಿ ಒಟ್ಟು ೨೨೮ ಮತಗಟ್ಟೆಗಳಿದ್ದು, ಇದರಲ್ಲಿ ೫೩ ಸೂಕ್ಷ್ಮ ಹಾಗೂ ೮ ಅತಿ ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ಇವುಗಳಲ್ಲಿ ಕ್ಲಿಷ್ಟಕರ ಮತಗಟ್ಟೆಗಳಿಗೆ ಸೂಕ್ಷ್ಮ ವೀಕ್ಷಕ ಅಥವಾ ವೀಡಿಯೋಗ್ರಾಫರ್ ಅಥವಾ ಸಿಸಿಟಿವಿ ಕ್ಯಾಮರಾ ವ್ಯವಸ್ಥೆ ಮಾಡಲಾಗುತ್ತದೆ. ಎಲ್ಲ ಮತಗಟ್ಟೆಗಳಲ್ಲೂ ಕುಡಿಯುವ ನೀರು, ಶೌಚಾಲಯ, ಗಾಳಿ, ಬೆಳಕು, ಫ್ಯಾನ್ ವ್ಯವಸ್ಥೆ ಇರುತ್ತದೆ.

ಹರಿಹರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮತಗಟ್ಟೆಗಳಿಗೆ ಒಟ್ಟು ೨೨ ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಹರಿಹರ ಸೆಂಟ್ ಮೇರಿಸ್ ಕಾನ್ವೆಂಟ್ ಶಾಲೆಯಲ್ಲಿ ಸ್ಥಾಪಿಸಲಾಗಿರುವ ತಾತ್ಕಾಲಿಕ ಭದ್ರತಾ ಕೊಠಡಿಯಲ್ಲಿ ೨೮೫ ಬ್ಯಾಲೆಟ್ ಯೂನಿಟ್ಸ್ ಹಾಗೂ ೨೮೫ ಕಂಟ್ರೋಲ್ ಯೂನಿಟ್ಸ್ ಮತ್ತು ೩೦೩ ಇವಿಎಂ ಮತಯಂತ್ರಗಳನ್ನು ಸುರಕ್ಷಿತವಾಗಿ ಇರಿಸಲಾಗಿದೆ ಎಂದು ಮಾಹಿತಿ ನೀಡಿದರು.

ನಗರದ ರಾಘವೇಂದ್ರ ಮಠದ ಸಮೀಪ, ಹಲಸುಬಾಳು ಗ್ರಾಮದ ಎನ್.ಎಚ್-4 ಹೆದ್ದಾರಿಯಲ್ಲಿ ಹಾಗೂ ಕುರುಬರಹಳ್ಳಿ, ನಂದಿಗುಡಿ ಬಳಿ ಒಟ್ಟು ೫ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ಅಕ್ರಮ ಮದ್ಯ, ಹಣ, ಗೃಹೋಪಯೋಗಿ ವಸ್ತುಗಳ ಸಾಗಣೆ ಮೇಲೆ ನಿಗಾ ಇಡಲಾಗಿದೆ ಎಂದರು.

೨೪/೭ ದೂರು ಕೇಂದ್ರ:

ಚುನಾವಣೆ ಸಂಬಂಧಿಸಿದಂತೆ ದಿನದ ೨೪ ಗಂಟೆಯೂ ಸ್ವೀಕರಿಸುವ ವ್ಯವಸ್ಥೆ ಮಾಡಲಾಗಿದೆ. ೦೮೧೯೨- ೨೧೩೩೦೩ ಸಂಖ್ಯೆಗೆ ಬರುವ ದೂರು ಕರೆಗಳು ರೆಕಾರ್ಡ್ ಆಗಲಿವೆ. ಅಂಚೆ ಮತ ಪತ್ರಗಳು ಹಾಗೂ ಇಡಿಸಿಯಲ್ಲಿ ೮೫ ವರ್ಷ ಮೇಲ್ಪಟ್ಟ ೧೩೨೦ ಹಾಗೂ ಅಂಗವಿಕಲರು ೩೨೫೮ ಒಟ್ಟು ೪೫೭೮ ಮತದಾರರು ಇರುತ್ತಾರೆ.

ವಿಶೇಷ ಮತಗಟ್ಟೆಗಳು: ೫ ಸಖಿ ಮತಗಟ್ಟಿಗಳು, ವಿಶೇಷಚೇತನರ ನಿರ್ವಹಣೆಯ ಮತಗಟ್ಟೆ ೧, ಯುವಜನ ನಿರ್ವಹಣೆ ಮತಗಟ್ಟೆ ೧, ಧ್ಯೇಯ ಆಧಾರಿತ ಮತಗಟ್ಟೆ ೧, ಸಾಂಪ್ರದಾಯಿಕ ಮತಗಟ್ಟೆ ೧ ಸೇರಿ ಒಟ್ಟು 9 ವಿಶೇಷ ಮತಗಟ್ಟೆಗಳನ್ನು ತೆರೆಯಲಾಗುವುದು. ಸಾರ್ವಜನಿಕರು ಮಾದರಿ ನೀತಿ ಸಂಹಿತೆ ವೇಳೆ ₹೫೦,೦೦೦ ಮಿತಿಯೊಳಗೆ ನಗದು ಹಣವನ್ನು ಹೊಂದುಬಹುದು. ಈ ಮಿತಿ ಮೀರಿದಲ್ಲಿ ಪರಿಶೀಲನೆ ವೇಳೆ ಅಗತ್ಯ ದಾಖಲೆಗಳ ಹಾಜರುಪಡಿಸಬೇಕು ಎಂದು ವಿವರಿಸಿದರು.

ಚುನಾವಣಾ ಅಧಿಕಾರಿಗಳಾಗಿ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ. ಹಾಗೂ ಹರಿಹರ ಕ್ಷೇತ್ರದ ಸಹಾಯಕ ಚುನಾವಣೆ ಅಧಿಕಾರಿಯಾಗಿ ಭಾವನ ಬಸವರಾಜ್ ಮತ್ತು ತಹಶೀಲ್ದಾರ್ ಕೆ.ಎಂ ಗುರು ಬಸವರಾಜ್ ಚುನಾವಣಾ ಪ್ರಕ್ರಿಯೆಗಳ ಮೇಲೆ ನಿಗಾ ವಹಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ತಹಸೀಲ್ದಾರ್ ಕೆ.ಎಂ. ಗುರು ಬಸವರಾಜ್, ಚುನಾವಣಾ ಶಾಖೆ ಅಧಿಕಾರಿಗಳು ಇದ್ದರು.

- - - -೨೪ಎಚ್‌ಆರ್‌ಆರ್೨:

ಹರಿಹರ ತಾಲೂಕು ಕಚೇರಿಯಲ್ಲಿ ಭಾನುವಾರ ಸಹಾಯಕ ಚುನಾವಣಾಧಿಕಾರಿ ಭಾವನ ಬಸವರಾಜ್ ಸುದ್ದಿಗೋಷ್ಠಿ ನಡೆಸಿ, ಮಾಹಿತಿ ನೀಡಿದರು.