ವಿನೋದ ಅಸೂಟಿ ಕಾಂಗ್ರೆಸ್ಸಿನ ಹರಕೆ ಕುರಿ

| Published : May 04 2024, 12:31 AM IST

ಸಾರಾಂಶ

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗಿಂತ ದೇಶದ ಸುರಕ್ಷತೆ, ಅಭಿವೃದ್ಧಿ ಮುಖ್ಯ ಎಂದು ಮಹಿಳೆಯರು ಬಿಜೆಪಿ ಬೆಂಬಲಿಸುತ್ತಾರೆಂಬ ವಿಶ್ವಾಸ ನನಗಿದೆ. ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯು ಗೆಲ್ಲುವ ಸಾಮರ್ಥ್ಯವಿರುವ, ಸಮೀಕ್ಷೆಯಲ್ಲಿ ಜನರ ಅಭಿಪ್ರಾಯ, ಇತ್ಯಾದಿ ಅಂಶಗಳನ್ನು ಗಮನಿಸಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ.

ಹುಬ್ಬಳ್ಳಿ:

ಧಾರವಾಡ ಲೋಕಸಭಾ ಕ್ಷೇತ್ರದಿಂದ 4 ಬಾರಿ ಆಯ್ಕೆಯಾಗಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿರುದ್ಧ ಕಾಂಗ್ರೆಸ್‌ ಕುರುಬ ಸಮಾಜದ ಯುವ ಮುಖಂಡ ವಿನೋದ ಅಸೂಟಿ ಅವರನ್ನು ಕಣಕ್ಕಿಳಿಸಿ ಹರಕೆಯ ಕುರಿಯನ್ನಾಗಿಸಿರುವುದು ನೋವಿನ ಸಂಗತಿ ಎಂದು ಮಾಜಿ ಸಚಿವ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬೈರತಿ ಬಸವರಾಜ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿನೋದ ಅಸೂಟಿ ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಚಿರಪರಿಚಿತರು. ಉಳಿದ 7 ವಿಧಾನಸಭಾ ಕ್ಷೇತ್ರಗಳಲ್ಲಿ ಅಸೂಟಿ ಯಾರೆಂದು ಜನರಿಗೆ ಗೊತ್ತಿಲ್ಲ. ಕ್ಷೇತ್ರವು ಬಿಜೆಪಿ ಭದ್ರಕೋಟೆಯಾಗಿದ್ದು, ಈ ಬಾರಿಯೂ ಜೋಶಿ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿಬಿಐಗೆ ವಹಿಸಲಿ:

ಸಂಸದ ಪ್ರಜ್ವಲ್ ರೇವಣ್ಣ ಕುರಿತಾದ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿದೆ. ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಸತ್ಯಾಸತ್ಯತೆ ಹೊರಗೆ ಬರಬೇಕಾದರೆ ಸಿಬಿಐಗೆ ವಹಿಸುವುದು ಸೂಕ್ತ ಎಂದರು.

ಸಮೀಕ್ಷೆ ನಡೆಸಿ ಟಿಕೆಟ್:

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗಿಂತ ದೇಶದ ಸುರಕ್ಷತೆ, ಅಭಿವೃದ್ಧಿ ಮುಖ್ಯ ಎಂದು ಮಹಿಳೆಯರು ಬಿಜೆಪಿ ಬೆಂಬಲಿಸುತ್ತಾರೆಂಬ ವಿಶ್ವಾಸ ನನಗಿದೆ. ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯು ಗೆಲ್ಲುವ ಸಾಮರ್ಥ್ಯವಿರುವ, ಸಮೀಕ್ಷೆಯಲ್ಲಿ ಜನರ ಅಭಿಪ್ರಾಯ, ಇತ್ಯಾದಿ ಅಂಶಗಳನ್ನು ಗಮನಿಸಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ ಎಂದರು.

ಜೋಶಿಗೆ ಹಾಲುಮತ ಬೆಂಬಲ:

ರಾಣಿಬೆನ್ನೂರಿನಲ್ಲಿ ಕಾಂತೇಶ್ ಅವರಿಗೆ ಕುರುಬ ಸಮಾಜದಿಂದ ಉತ್ತಮ ಬೆಂಬಲವಿತ್ತು. ಆದರೆ, ಬೇರೆ ಸಮಾಜದ ಪ್ರಭಾವ ಹೆಚ್ಚಿದ್ದರಿಂದ ಕಾಂತೇಶ ಅವರಿಗೆ ಟಿಕೆಟ್ ಕೈ ತಪ್ಪಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಐಐಟಿ, ಐಐಐಟಿ ಸ್ಥಾಪನೆ, ರೈಲ್ವೆ ನಿಲ್ದಾಣ-ವಿಮಾನ ನಿಲ್ದಾಣ ಸುಧಾರಣೆ, ಇನ್ನು ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ಪ್ರಹ್ಲಾದ ಜೋಶಿ ಅವರಿಗೆ ಕುರುಬ ಸಮಾಜ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ. ಹಾವೇರಿ ಸೇರಿ ಉತ್ತರ ಕರ್ನಾಟಕ ಭಾಗದ ಹಲವು ಲೋಕಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ಹಾಲುಮತ ಸಮಾಜದವರನ್ನು ಭೇಟಿ ಮಾಡಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮನವಿ ಮಾಡಿದ್ದೇನೆ ಎಂದರು.

ಈ ವೇಳೆ ಮಾ. ನಾಗರಾಜ, ರವಿ ದಂಡಿನ, ದತ್ತಮೂರ್ತಿ ಕುಲಕರ್ಣಿ, ಪರಶುರಾಮ ದಿವಾನ, ಬೀರಪ್ಪ ಖಂಡೇಕರ, ಗುರು ಪಾಟೀಲ, ಭಾರತಿ ಸೇರಿದಂತೆ ಹಲವರಿದ್ದರು.