ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಿರೀಕ್ಷಿತ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಕೆಪಿಎಸ್‌ಸಿ ಹಗರಣ ಸೇರಿದಂತೆ ಹಲವು ವಿಚಾರಗಳಲ್ಲಿ ಸರ್ಕಾರದ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ಕಾಣುತ್ತಿಲ್ಲ.

ಕೊಪ್ಪಳ: ಸ್ಟಿಂಗ್ ಆಪರೇಷನ್ ಸಂಸ್ಕೃತಿ ನಮ್ಮದಲ್ಲ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ಟಿಂಗ್ ಆಪರೇಷನ್ ಪಿತಾಮಹ ಎಂದು ಬಿ.ಕೆ. ಹರಿಪ್ರಸಾದ್ ಹೇಳುತ್ತಾರೆ. ಅವರಂಥವರ ಮಾತುಗಳಿಗೆ ಬೆಲೆ ನೀಡುವ ಅಗತ್ಯವಿಲ್ಲ. ಕಾಂಗ್ರೆಸ್ ಮುಳುಗಿಸಲು ಹರಿಪ್ರಸಾದ್ ಅವರೊಬ್ಬರೇ ಸಾಕು ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಟೀಕಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಿರೀಕ್ಷಿತ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಕೆಪಿಎಸ್‌ಸಿ ಹಗರಣ ಸೇರಿದಂತೆ ಹಲವು ವಿಚಾರಗಳಲ್ಲಿ ಸರ್ಕಾರದ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ಕಾಣುತ್ತಿಲ್ಲ. ಕಬ್ಬಿನ ದರ ಹೆಚ್ಚಳಕ್ಕಾಗಿ ರೈತರು ಹೋರಾಟ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ. ಸರ್ಕಾರಕ್ಕೆ ದಪ್ಪ ಚರ್ಮವಿದ್ದು, ಅಧಿಕಾರ ಸಿಕ್ಕಿದೆ, ಅನುಭವಿಸಬೇಕು ಎಂಬ ಧೋರಣೆಯಲ್ಲಿ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದರು.

ವಿಧಾನಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶಿಲ್ ನಮೋಶಿ ಪರ ಉತ್ತಮ ಅಲೆಯಿದೆ. ಅವರು ಈಗಾಗಲೇ ನಾಲ್ಕು ಬಾರಿ ಗೆಲುವು ಸಾಧಿಸಿದ್ದು, ತಮ್ಮ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಬಿಜೆಪಿ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಆದರೆ, ಕಾಂಗ್ರೆಸ್ ಸರ್ಕಾರದಿಂದ ನಿರೀಕ್ಷಿತ ಕೆಲಸಗಳಾಗಿಲ್ಲ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾಗತಿಕ ಮಟ್ಟದಲ್ಲಿ ಉತ್ತಮವಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಸಂಕುಚಿತ ಮನೋಭಾವದಿಂದ ಅದನ್ನು ವಿರೋಧಿಸಿದೆ. ಬಿಜೆಪಿ ಸರ್ಕಾರ ಜಾರಿಗೆ ತಂದ ಕಾರ್ಯಕ್ರಮ ವಿರೋಧಿಸುವುದೇ ಕಾಂಗ್ರೆಸ್‌ನ ಕೆಲಸವಾಗಿದೆ. ಎಲ್‌ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ಬೋಧಿಸುವ ಶಿಕ್ಷಕರಿಗೆ ವೇತನ ನೀಡಲೂ ಸರ್ಕಾರದ ಬಳಿ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದರು.

ಕೃಷ್ಣಾ ನದಿಯಿಂದ ಕೊಪ್ಪಳ ಜಿಲ್ಲೆಯ ಕೆರೆಗಳನ್ನು ತುಂಬಿಸುವ ಕಾರ್ಯವೂ ಆಗಿಲ್ಲ. ರೈತರ ಹಾಗೂ ಶಿಕ್ಷಣ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ಸರ್ಕಾರ ಅಧಿಕಾರ ಅನುಭವಿಸುವುದರಲ್ಲೇ ತೊಡಗಿದೆ. ವಿಂಡ್ ಪವರ್ ನೀಡುವ ವ್ಯವಹಾರದಲ್ಲಿ ಸರ್ಕಾರ ತೊಡಗಿಸಿಕೊಂಡಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಡಾ. ಬಸವರಾಜ ಕ್ಯಾವಟರ್, ಅಮರೇಶ ಮುರಳಿ, ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ್, ನವೀನ ಗುಳಗಣ್ಣವರ್ ಹಾಗೂ ಮಂಜುನಾಥ ಸೊರಟೂರ ಉಪಸ್ಥಿತರಿದ್ದರು.