ಸಾರಾಂಶ
ಕನ್ನಡಪ್ರಭ ವಾರ್ತೆ, ಬೆಂಗಳೂರು
‘ಕರ್ನಾಟಕ ರಾಜ್ಯದಲ್ಲಿ ಅಶಾಂತಿ ಉಂಟಾಗಬಾರದು ಎಂದು ನೀಡಿದ್ದ ಹೇಳಿಕೆ ನೆಪವಾಗಿಟ್ಟುಕೊಂಡು ಸರ್ಕಾರ ಪೊಲೀಸರ ಮೂಲಕ ನನ್ನನ್ನು ಟಾರ್ಗೆಟ್ ಮಾಡಿದೆ. ಇದನ್ನು ಗಮನಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆಯೇ ಅಥವಾ ಆರ್‌ಎಸ್‌ಎಸ್ ಸರ್ಕಾರ ಅಧಿಕಾರದಲ್ಲಿ ಇದೆಯೇ? ಎಂಬ ಅನುಮಾನ ಮೂಡುತ್ತಿದೆ’ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಸರ್ಕಾರದ ವಿರುದ್ಧವೇ ಕಿಡಿ ಕಾರಿದ್ದಾರೆ.ಗೋದ್ರಾ ಹತ್ಯಾಕಾಂಡ ಕುರಿತ ಹೇಳಿಕೆ ಹಿನ್ನೆಲೆಯಲ್ಲಿ ಸಿಸಿಬಿ ಸಹಾಯಕ ಪೊಲೀಸ್ ಆಯುಕ್ತ ಧರ್ಮೇಂದ್ರ ಅವರು ಕುಮಾರಕೃಪ ಅತಿಥಿಗೃಹದಲ್ಲಿ ಬಿ.ಕೆ. ಹರಿಪ್ರಸಾದ್ ಅವರನ್ನು ವಿಚಾರಣೆ ನಡೆಸಿದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಕೆ. ಹರಿಪ್ರಸಾದ್, ರಾಜ್ಯದಲ್ಲಿ ಕಲ್ಲಡ್ಕ ಪ್ರಭಾಕರ್ ಪ್ರಚೋದನಕಾರಿ ಹೇಳಿಕೆ ಕೊಟ್ಟಾಗ ರಾಜ್ಯ ಸರ್ಕಾರ ವಿಚಾರಣೆ ಮಾಡಿಲ್ಲ. ಅನಂತಕುಮಾರ್ ಹೆಗಡೆ ಅವರನ್ನು ವಿಚಾರಣೆ ಮಾಡಲಿಲ್ಲ. ಕರ್ನಾಟಕ ರಾಜ್ಯದಲ್ಲಿ ಅಶಾಂತಿ ಊಂಟಾಗಬಾರದೆಂದು ಅಯೋಧ್ಯೆಗೆ ಹೋಗುವವರಿಗೆ ರಕ್ಷಣೆ ಕೊಡಿ ಎಂದು ಹೇಳಿದ್ದಕ್ಕೆ ನನ್ನನ್ನು ಪೊಲೀಸರ ಮೂಲಕ ಟಾರ್ಗೆಟ್ ಮಾಡಿದೆ. ಸರ್ಕಾರದ ಈ ಕ್ರಮಕ್ಕೆ ನಾನು ಎದುರುವವನಲ್ಲ. ನನ್ನ ಪರಿಸ್ಥಿತಿಯೇ ಹೀಗಾದರೆ ಕಾರ್ಯಕರ್ತರ ಗತಿಯೇನು? ಎಂದು ಪ್ರಶ್ನಿಸಿದ್ದಾರೆ.ಪೊಲೀಸ್ ಅಧಿಕಾರಿ ಕೇಳಿದ ಯಾವ ಪ್ರಶ್ನೆಗಳಿಗೂ ನಾನು ಉತ್ತರಿಸಿಲ್ಲ. ವಿಚಾರಣೆ ಮಾಡುವ ಹಾಗಿದ್ದರೆ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ಮಾಡಿ. ಜತೆಗೆ ನನ್ನನ್ನು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಸಾರ್ವಜನಿಕ ವೇದಿಕೆಯಲ್ಲಿ ಮಂಪರು ಪರೀಕ್ಷೆಗೆ ಒಳಪಡಿಸಿ ಎಂದು ಹೇಳಿದ್ದೇನೆ ಎಂದರು.