ಸಾರಾಂಶ
- ರಾಜೀವ್ ಗಾಂಧಿ ಪಂಚಾಯತ್ ರಾಜ್ ಜಿಲ್ಲಾಧ್ಯಕ್ಷ ರಾಘವೇಂದ್ರ ಆಕ್ರೋಶ
- - -ದಾವಣಗೆರೆ: ಶಾಮನೂರು ಕುಟುಂಬದ ಬಗ್ಗೆ ಮಾತನಾಡುವ ಯೋಗ್ಯತೆ, ನೈತಿಕತೆಯಾಗಲೀ ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಅವರಿಗೆ ಯಾವುದೇ ಅಧಿಕಾರವೂ ಇಲ್ಲ ಎಂದು ಕಾಂಗ್ರೆಸ್ ಪಕ್ಷದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಜಿಲ್ಲಾಧ್ಯಕ್ಷ ರಾಘವೇಂದ್ರ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರದ ಆಸೆಗಾಗಿ ನೀವು ಪಕ್ಷದಿಂದ ಪಕ್ಷ ಬದಲಾಯಿಸಿ, ಬೆಳೆಸಿದವರನ್ನೆಲ್ಲಾ ದೂಷಿಸಿದವರು. ಇಂತಹವರು ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಶಾಮನೂರು ಶಿವಂಕರಪ್ಪ ಮನೆತನದ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದ್ದಾರೆ.ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನೇ ಭ್ರಷ್ಟಾಚಾರಿ, ಅಧಿಕಾರದ ದರ್ಪ, ಹೊಂದಾಣಿಕೆ ರಾಜಕೀಯ ಎಂದೆಲ್ಲಾ ಆರೋಪ ಮಾಡಿದ್ದವರು ಬಿ.ಪಿ.ಹರೀಶ. ಶಾಮನೂರು ಕುಟುಂಬದ ಬಗ್ಗೆ ಮಾತನಾಡಿದರೆ, ದೊಡ್ಡ ವ್ಯಕ್ತಿಯಾಗುತ್ತೇನೆಂಬ ಭ್ರಮೆಯಲ್ಲಿದ್ದಾರೆ. ಹರಿಹರ ಜನತೆಗೆ ಕೇಳಿದರೆ ಶಾಸಕರ ಯೋಗ್ಯತೆ ಏನೆಂಬುದು ಗೊತ್ತಾಗುತ್ತದೆ ಎಂದಿದ್ದಾರೆ.
ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಎಷ್ಟೇ ಕಾರ್ಯದೊತ್ತಡವಿದ್ದರೂ ಕಾರ್ಯಕ್ರಮಗಳಿಗೆ ಸರಿಯಾದ ಸಮಯಕ್ಕೆ ಆಗಮಿಸುತ್ತಾರೆ. ಸಂಸದರು ಹೊರಟಾದ ಕಷ್ಟ ಹೇಳಿಕೊಳ್ಳಲು ಮನೆ ಬಳಿ ನೂರಾರು ಜನ ಬಂದಿರುತ್ತಾರೆ. ಜನರ ಕಷ್ಟ ಕೇಳದೇ, ಹಾಗೆಯೇ ಹೋಗಲಾಗುತ್ತದೆಯಾ? ಇಷ್ಟು ಸಾಮಾನ್ಯ ಜ್ಞಾನವೂ ಇಲ್ಲದಂತೆ, ತಾವೊಬ್ಬ ಜನಪ್ರತಿನಿಧಿ ಎಂಬುದನ್ನೇ ಬಿ.ಪಿ.ಹರೀಶರವರು ಮರೆತಿರುವುದೇ ದುರಂತ ಎಂದು ಹೇಳಿದ್ದಾರೆ.ಸಾವಿರಾರು ಕೋಟಿ ರು. ಅನುದಾನ ದಾವಣಗೆರೆ ಜಿಲ್ಲೆಗೆ ಹರಿದು ಬಂದಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಲಂಚಗುಳಿತನ ಎಷ್ಟಿತ್ತು ಎಂಬುದನ್ನು ಇಡೀ ದೇಶವೇ ನೋಡಿದೆ. ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತೆ ಶಾಸಕ ಹರೀಶ ಅವರು ಮಾತನಾಡುತ್ತಿರುವುದು ಸರಿಯಲ್ಲ ಎಂದು ರಾಘವೇಂದ್ರ ಗೌಡ ಆಕ್ಷೇಪಿಸಿದ್ದಾರೆ.
- - --2ಕೆಡಿವಿಜಿ7: ರಾಘವೇಂದ್ರ ಗೌಡ.