ಸಾರಾಂಶ
ರಾಮನಗರ: ತಾಲೂಕಿನ ಪಾಲಾಭೋವಿದೊಡ್ಡಿಯ ಗದ್ದೆಯಲ್ಲಿ ಗುರುವಾರ ಪತ್ತೆಯಾದ ಭಾರಿ ಗಾತ್ರದ ಹೆಬ್ಬಾವನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ರಾಮನಗರ: ತಾಲೂಕಿನ ಪಾಲಾಭೋವಿದೊಡ್ಡಿಯ ಗದ್ದೆಯಲ್ಲಿ ಗುರುವಾರ ಪತ್ತೆಯಾದ ಭಾರಿ ಗಾತ್ರದ ಹೆಬ್ಬಾವನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ಅರ್ಕಾವತಿ ನದಿದಂಡೆ ಬಳಿ ಚಂದ್ರೇಗೌಡರ ಗದ್ದೆಯಲ್ಲಿ ಬೆಳಿಗ್ಗೆ ಕಾರ್ಮಿಕರು ಭತ್ತ ಕೊಯ್ಲು ಮಾಡುವಾಗ ಭತ್ತದ ಬೆಳೆ ಮಧ್ಯೆ ಮಲಗಿದ್ದ ಹೆಬ್ಬಾವನ್ನು ಗಮನಿಸಿ ಮಾಲೀಕರ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಬಂದ ಚಂದ್ರೇಗೌಡರು, ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಎ) ಮೊಹಮ್ಮದ್ ಮನ್ಸೂರ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಮನ್ಸೂರ್ ಅವರು ಅರಣ್ಯ ಇಲಾಖೆ ಸಿಬ್ಬಂದಿ ವರದರಾಜು ಜೊತೆಗೆ ಸ್ಥಳೀಯ ಉರಗ ರಕ್ಷಕ ಸ್ನೇಕ್ ಹರೀಶ್ ಅವರನ್ನು ಸ್ಥಳಕ್ಕೆ ಕಳುಹಿಸಿ ಹೆಬ್ಬಾವನ್ನು ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.ಗದ್ದೆಯಲ್ಲಿ ಹೆಬ್ಬಾವು ಇರುವ ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳೀಯರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಬಂದು ಹೆಬ್ಬಾವನ್ನು ನೋಡಿದರು. ಹರೀಶ್ ಅವರು ನಾಜೂಕಾಗಿ ಅದನ್ನು ಹಿಡಿದು ಚೀಲಕ್ಕೆ ತುಂಬಿಸಿ ಬೈಕ್‌ನಲ್ಲಿ ಕಾಡಿಗೆ ತೆಗೆದುಕೊಂಡು ಹೋದರು.
ಹೆಬ್ಬಾವು ಪತ್ತೆಯಾದ ಗದ್ದೆ ನದಿ ಪಕ್ಕದಲ್ಲೇ ಇದೆ. ಅನತಿ ದೂರದಲ್ಲೇ ರಾಮದೇವರ ಬೆಟ್ಟದ ಅರಣ್ಯವಿದೆ. ಹೆಬ್ಬಾವು ರಾತ್ರಿ ಆಹಾರ ಅರಸಿ ಕಾಡಿನಿಂದ ನದಿ ಹಾಗೂ ರಸ್ತೆ ದಾಟಿಕೊಂಡು ಬಂದು ಗದ್ದೆಯಲ್ಲಿ ಬೀಡು ಬಿಟ್ಟಿದೆ. ಭತ್ತದ ಬೆಳೆ ಮಧ್ಯೆ ಇದ್ದ ಹೆಬ್ಬಾವನ್ನು ಕಾರ್ಮಿಕರು ಕೆಣಕದೆ ನಮಗೆ ಮಾಹಿತಿ ನೀಡಿದ್ದರಿಂದ ಸ್ನೇಕ್ ಹರೀಶ್ ಅವರಿಂದ ಸುರಕ್ಷಿತವಾಗಿ ಹಿಡಿಸಿ ಮರಳಿ ರಾಮದೇವರ ಬೆಟ್ಟದ ಕಾಡಿಗೆ ಬಿಡಲಾಯಿತು ಎಂದು ಆರ್‌ಎಫ್‌ಒ ಮಹಮ್ಮದ್ ಮನ್ಸೂರ್ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದರು.5ಕೆಆರ್ ಎಂಎನ್ 1.ಜೆಪಿಜಿ
ಉರಗ ರಕ್ಷಕ ಸ್ನೇಕ್ ಹರೀಶ್ ಹೆಬ್ಬಾವು ಹಿಡಿದಿರುವುದು.