ಆರ್ಥಿಕ ಮುಗ್ಗಟ್ಟಿನಿಂದಾಗಿ ನಾಳೆ ಹರಜಾತ್ರೆ ಸರಳ ಆಚರಣೆ

| Published : Jan 13 2025, 12:46 AM IST

ಆರ್ಥಿಕ ಮುಗ್ಗಟ್ಟಿನಿಂದಾಗಿ ನಾಳೆ ಹರಜಾತ್ರೆ ಸರಳ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಆವರಣದಲ್ಲಿ ಮಕರ ಸಂಕ್ರಾಂತಿ ಹಬ್ಬದ ದಿನ ಶ್ರೀ ವಚನಾನಂದ ಸ್ವಾಮೀಜಿ ದಿವ್ಯಸಾನ್ನಿಧ್ಯದಲ್ಲಿ ಜ.14ರಂದು ಸರಳವಾಗಿ ಹರಜಾತ್ರೆ ಆಚರಿಸಲು ನಿರ್ಧರಿಸಲಾಗಿದೆ ಎಂದು ಪೀಠದ ಆಡಳಿತಾಧಿಕಾರಿ ಡಾ. ಎಚ್.ಪಿ. ರಾಜ್‍ಕುಮಾರ್ ಹರಿಹರದಲ್ಲಿ ಹೇಳಿದ್ದಾರೆ.

- ಹರಿಹರದಲ್ಲಿ ಪಂಚಮಸಾಲಿ ಪೀಠದ ಆಡಳಿತಾಧಿಕಾರಿ ಡಾ. ಎಚ್.ಪಿ. ರಾಜ್‍ಕುಮಾರ್ ಹೇಳಿಕೆ - - - ಕನ್ನಡಪ್ರಭ ವಾರ್ತೆ ಹರಿಹರ

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಆವರಣದಲ್ಲಿ ಮಕರ ಸಂಕ್ರಾಂತಿ ಹಬ್ಬದ ದಿನ ಶ್ರೀ ವಚನಾನಂದ ಸ್ವಾಮೀಜಿ ದಿವ್ಯಸಾನ್ನಿಧ್ಯದಲ್ಲಿ ಜ.14ರಂದು ಸರಳವಾಗಿ ಹರಜಾತ್ರೆ ಆಚರಿಸಲು ನಿರ್ಧರಿಸಲಾಗಿದೆ ಎಂದು ಪೀಠದ ಆಡಳಿತಾಧಿಕಾರಿ ಡಾ. ಎಚ್.ಪಿ. ರಾಜ್‍ಕುಮಾರ್ ಹೇಳಿದರು.

ಹರಿಹರದ ಪಂಚಮಸಾಲಿ ಪೀಠದಲ್ಲಿ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ರಾಜ್ಯ ಪದಾಧಿಕಾರಿಗಳು ಧರ್ಮದರ್ಶಿಗಳು ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಹರ ಪೀಠದಲ್ಲಿ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಆರ್ಥಿಕ ಮುಗ್ಗಟ್ಟಿನ ಕಾರಣದಿಂದ ಈ ಬಾರಿ ಹರಜಾತ್ರೆ ಸರಳವಾಗಿ ಆಚರಿಸಬೇಕೆಂದು ಸಮಾಜ ಮುಖಂಡರು, ಭಕ್ತರು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಅದರಂತೆ ಈ ಬಾರಿ ಸಾಂಪ್ರದಾಯಕವಾಗಿ ಹರಜಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.

ವೀರರಾಣಿ ಕಿತ್ತೂರು ರಾಣಿ ಚನ್ನಮ್ಮ ವಿಜಯೋತ್ಸವದ ದ್ವಿಶತಮಾನೋತ್ಸವ ಆಚರಣೆ, ಶ್ರೀ ವಚನಾನಂದ ಸ್ವಾಮೀಜಿ ಅವರ ಸಪ್ತಮ (ಏಳನೇ) ವಾರ್ಷಿಕ ಪೀಠಾರೋಹಣ ಹಾಗೂ ಈಗಾಗಲೇ ಸಮಾಜದ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಅವರ ಪದಗ್ರಹಣ ಕಾರ್ಯಕ್ರಮವೂ ನಡೆಯಲಿದೆ ಎಂದರು.

ವಚನಾನಂದ ಶ್ರೀ ಮಾತನಾಡಿ, 2020ರಿಂದ ಪ್ರತಿವರ್ಷ ಹರಜಾತ್ರೆ ನಡೆಸಿಕೊಂಡು ಬರಲಾಗುತ್ತಿದೆ. ಸೂರ್ಯ ತನ್ನ ಪಥ ಬದಲಾಯಿಸುವ ಸಮಯದಲ್ಲಿ ಸಮಾಜದ ಪ್ರತಿಯೊಬ್ಬರೂ ಒಂದೆಡೆ ಸೇರಿಸುವ ಕಾರ್ಯ ನಡೆಯುತ್ತ ಬಂದಿದೆ. ದೆಹಲಿಯ ಸಂಸತ್ ಭವನದ ಆವರಣದಲ್ಲಿ ಚನ್ನಮ್ಮ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಅವರ ಬಗ್ಗೆ ಐತಿಹಾಸಿಕ ಗ್ರಂಥ ರೂಪಿಸಲು ಪ್ರಯತ್ನ ನಡೆದಿದೆ. ಈ ಬಾರಿ ಚನ್ನಮ್ಮಾಜಿ ಅವರ ವಿಜಯೋತ್ಸವ ಆಚರಣೆ ನಡೆಸಲಾಗುವುದಷ್ಟೇ ಅಲ್ಲದೇ, ಮುಂದಿನ ಸಂಕ್ರಾಂತಿಯವರೆಗೆ ಅವರ ಜೀವನದ ಬಗ್ಗೆ ರಾಜ್ಯಾದ್ಯಂತ ಜಿಲ್ಲಾ ಹಾಗೂ ತಾಲೂಕಿನಲ್ಲಿ ಕಾರ್ಯಕ್ರಮಗಳನ್ನು ನಡೆಸಿ, ಅವರ ಜೀವನಗಾಥೆ ಪಸರಿಸುವ ಕಾರ್ಯ ನಡೆಸಲಾಗುವುದು ಎಂದರು.

ಸಭೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್, ಧರ್ಮದರ್ಶಿ ಬಿ.ಸಿ. ಉಮಾಪತಿ, ಚಂದ್ರಶೇಖರ್ ಪೂಜಾರ್, ದಾಸೋಹ ಸಮಿತಿ ರಾಜ್ಯಾಧ್ಯಕ್ಷ ಪ್ರಕಾಶ್ ಪಾಟೀಲ್, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ವಸಂತಾ ಹುಲ್ಲತ್ತಿ, ರಶ್ಮಿ ಕುಂಕದ್, ಯುವ ಘಟಕದ ರಾಜ್ಯಾಧ್ಯಕ್ಷ ಶೇಖರಗೌಡ ಮುತ್ತ್ಯಣ್ಣನವರ, ಜ್ಯೋತಿ ಪ್ರಕಾಶ್ ಶಣ್ಮುಖಪ್ಪ ಪೀಠದ ಧರ್ಮದರ್ಶಿಗಳು, ಸಮಾಜದ ಮುಖಂಡರು, ಭಕ್ತರು ಇದ್ದರು.

- - -

ಬಾಕ್ಸ್ * ಆಹ್ವಾನ ಪತ್ರಿಕೆ ಮುದ್ರಿಸಿಲ್ಲ, ಸಿಎಂಗೂ ಆಹ್ವಾನ ನೀಡಿಲ್ಲ ಈ ಬಾರಿ ಹರಜಾತ್ರೆ ಸರಳವಾಗಿ ನಡೆಸಲು ಚಿಂತನೆ ನಡೆಸಿದ್ದು, ಆಹ್ವಾನ ಪತ್ರಿಕೆಯನ್ನೇ ಮುದ್ರಿಸಿಲ್ಲ. ಮುಖ್ಯಮಂತ್ರಿ ಅವರನ್ನು ಕರೆಯಬೇಕಿದ್ದಲ್ಲಿ ಫೋಟೋ ಕಾಲ್ ಪ್ರಕಾರ ಆಹ್ವಾನ ಪತ್ರಿಕೆ ಮುದ್ರಣ ಮಾಡಬೇಕು. ಸಮಾಜದ ಹಾಲಿ ಮಾಜಿ ಸಚಿವರು ಹಾಗೂ ಸ್ಥಳೀಯ ದಾವಣಗೆರೆ ಹಾಗೂ ಹಾವೇರಿಯ ಜನಪ್ರತಿನಿಧಿಗಳನ್ನು ಪೀಠದ ಸದ್ಭಕ್ತರಿಗೆ ದೂರವಾಣಿಯಲ್ಲಿ ಕರೆ ಮಾಡಿ ಕರೆಯಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರವಾಣಿ ಮೂಲಕವೂ ಕರೆದಿಲ್ಲ ಎಂದು ವಚನಾನಂದ ಶ್ರೀ ಸ್ಪಷ್ಟಪಡಿಸಿದರು.

ಪಂಚಮಸಾಲಿ ಮೀಸಲಾತಿಗಾಗಿ ಕಾನೂನಾತ್ಮಕವಾಗಿ ಹೋರಾಟ ಮಾಡಲಾಗುತ್ತದೆ. ಈಗಾಗಲೇ ಕೇಂದ್ರ ಸರ್ಕಾರಕ್ಕೆ ಲಿಂಗಾಯಿತರನ್ನು ಒಬಿಸಿಗೆ ಸೇರಿಸುವಂತೆ ಮನವಿ ಮಾಡಲಾಗಿದೆ. ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ನದಿಯಲ್ಲಿ ಈಗ ನೀರಿನ ಪ್ರಮಾಣ ಕಡಿಮೆ ಇರುವ ಪ್ರಯುಕ್ತ ತುಂಗಾರತಿಯನ್ನು ಮುಂದೂಡಲಾಗಿದೆ. ಮುಂಬರುವ ದಿನಗಳಲ್ಲಿ ಉತ್ತಮ ಮಳೆ ಆಗುವ ನಿರೀಕ್ಷೆ ಇದ್ದು, ಆಗ ತುಂಗಾರತಿ ಆಯೋಜಿಸುವ ಯೋಚನೆ ಇದೆ ಎಂದರು.

- - - -12ಎಚ್‍ಆರ್‍ಆರ್03:

ಹರಿಹರದ ಪಂಚಮಸಾಲಿ ಪೀಠದಲ್ಲಿ ಪೀಠಾಧ್ಯಕ್ಷ ಶ್ರೀ ವಚನಾನಂದ ಸ್ವಾಮೀಜಿ ಸಾನಿಧ್ಯದಲ್ಲಿ ಭಾನುವಾರ ಹರಜಾತ್ರೆ ಪ್ರಯುಕ್ತ ಪತ್ರಿಕಾಗೋಷ್ಠಿ ನಡೆಯಿತು.-12 ಎಚ್‌ಆರ್‌ಆರ್‌03ಎ: