ಸಾರಾಂಶ
ಭಾರತದ ಧಾರ್ಮಿಕ, ಸಾಮಾಜಿಕ ನ್ಯಾಯ, ರೀತಿ, ನೀತಿ ವಿಶ್ವಕ್ಕೆ ಮಾದರಿ ಎಂದು ಕೇಂದ್ರ ಸಚಿವರು ಹೇಳಿದರು. ಬಸವಕಲ್ಯಾಣ ತಾಲೂಕಿನ ಹಾರಕೂಡದಲ್ಲಿ ಜಾತ್ರಾ ನಿಮಿತ್ತ ನಡೆದ ಶಿವಾನುಭವ ಚಿಂತನಗೋಷ್ಠಿ ನಡೆಯಿತು.
ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಭಾರತದ ಧಾರ್ಮಿಕ, ಸಾಮಾಜಿಕ ನ್ಯಾಯ, ರೀತಿ, ನೀತಿ ವಿಶ್ವಕ್ಕೆ ಮಾದರಿ. ಇದನ್ನು ಪರಿಚಯಿಸುವ ಕೆಲಸ ಹಾರಕೂಡ ಮಠ ಕಳೆದ 72 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದರು.ತಾಲೂಕಿನ ಹಾರಕೂಡ ಜಾತ್ರಾ ನಿಮಿತ್ತ ನಡೆದ ಶಿವಾನುಭವ ಚಿಂತನಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶದ ಧಾರ್ಮಿಕ ಪರಂಪರೆಯಲ್ಲಿ ಹಾರಕೂಡ ಮಠವು ಸರ್ವ ಧರ್ಮದ ಸಮನ್ವಯ ಕೇಂದ್ರವಾಗಿ ಬೆಳೆಯುತ್ತಿರುವುದು ನಮ್ಮೆಲ್ಲರ ಹೆಮ್ಮೆಯಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾರಕೂಡ ಜಾತ್ರೆ ಉತ್ಸವದ ಶಿವಾನುಭವ ಚಿಂತನ ಸಭೆಯಲ್ಲಿ ದಿನದಶಿ೯ಕೆ ಬಿಡುಗಡೆ ಮಾಡಿ ಮಾತನಾಡಿ, ಕಾಲಮಿತಿಯಲ್ಲಿ ಅನುಭವ ಮಂಟಪ ಮುಗಿಸುತ್ತೇವೆ. ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ತೆಗೆದು ಹಾಕುವಂತೆ ಕೆಲಸ ಮಾಡುತ್ತೇವೆ. ಅಭಿವೃದ್ಧಿ ಕೆಲಸ ಮಾಡುವ ಮುಖಾಂತರ ಬೀದರ್ ಜಿಲ್ಲೆ ಅಭಿವೃದ್ಧಿ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.ನಮ್ಮ ದೇಶ ಶಾಂತಿಪ್ರಿಯ ದೇಶ ಇಲ್ಲಿ ಎಲ್ಲಾ ಧರ್ಮಿಯರು ಸಹೋದರರಂತೆ ಬಾಳಬೇಕು. ಆದರೆ ಕೆಲವರು ಧರ್ಮ ನಡುವೆ ಜಗಳ ಹಚ್ಚುವ ಕೆಲಸ ಮಾಡುತ್ತಾರೆ. ಅದು ನಿಲ್ಲಬೇಕು. ಶಾಂತಿಯಿಂದ ಮಾತ್ರ ದೇಶದ ಅಭಿವೃದ್ಧಿಯಾಗಲು ಸಾಧ್ಯ ಎಂದರು
ವೇದಿಕೆಯಲ್ಲಿ ವಿಜಯಪುರ – ಗದಗ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ನಿರ್ಭಯಾನಂದ ಸರಸ್ವತಿ ಮಹಾರಾಜ, ಹಾರಕೂಡಿನ ಡಾ. ಚೆನ್ನವೀರ ಶಿವಾಚಾರ್ಯರು, ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್, ಶಾಸಕರಾದ ಶರಣು ಸಲಗರ, ಡಾ.ಸಿದ್ಧಲಿಂಗಪ್ಪಾ ಪಾಟೀಲ ಮಾಜಿ ಶಾಸಕ ಎಂ.ಜಿ ಮೂಳೆ, ಬಿಜೆಪಿ ಮುಖಂಡರಾದ ಪ್ರದೀಪ ವಾತಾಡೆ, ಕಾಂಗ್ರೆಸ್ ಮುಖಂಡರಾದ ಉದ್ಯಮಿ ಧನರಾಜ ತಾಳಂಪಳ್ಳಿ, ಬಾಬು ಹೊನ್ನಾನಾಯಕ ಉಪಸ್ಥಿತರಿದ್ದರು.ನವಲಿಂಗ ಪಾಟೀಲ ಸ್ವಾಗತಿಸಿ ನಿರೂಪಿಸಿದರು. ವಚನ ಸಂಗೀತ ಸಿದ್ರಾಮಯ್ಯ ಸ್ವಾಮಿ ಹಾಗೂ ಜನಾರ್ಧನ ವಾಘಮಾರೆ ಸಂಗಡಿಗರು ನಡೆಸಿಕೊಟ್ಟರು.