ಹರಿವು ನಿಲ್ಲಿಸಿದ ಯಗಚಿ ನದಿ: ಆಲೂರಲ್ಲಿ ಕುಡಿಯುವ ನೀರಿಗೆ ಹಾಹಾಕಾರ

| Published : Apr 19 2024, 01:11 AM IST / Updated: Apr 19 2024, 11:56 AM IST

ಸಾರಾಂಶ

ಬೇಸಿಗೆಯ ಸುಡು ಬಿಸಿಲ ತಾಪಕ್ಕೆ ಆಲೂರು ತಾಲೂಕಿನ ಕೆರೆಕಟ್ಟೆಗಳೆಲ್ಲ ಒಣಗಿ ನಿಂತಿದ್ದು ಅಂತರ್ಜಲ ಮಟ್ಟ ಪಾತಾಳಕ್ಕಿಳಿದ ಪರಿಣಾಮ ಆಲೂರು ಜನ ಜಾನುವಾರು ಕುಡಿವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಎಚ್.ವಿ. ರಾಘವೇಂದ್ರ

 ಆಲೂರು :  ಬೇಸಿಗೆಯ ಸುಡು ಬಿಸಿಲ ತಾಪಕ್ಕೆ ತಾಲೂಕಿನ ಕೆರೆಕಟ್ಟೆಗಳೆಲ್ಲ ಒಣಗಿ ನಿಂತಿದ್ದು ಅಂತರ್ಜಲ ಮಟ್ಟ ಪಾತಾಳಕ್ಕಿಳಿದ ಪರಿಣಾಮ ಜನ ಜಾನುವಾರು ಕುಡಿವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದ ಜನತೆಗೆ ಕುಡಿವ ನೀರಿನ ಮೂಲವಾದ ಜೀವನದಿ ಯಗಚಿ ತನ್ನ ಹರಿವನ್ನು ನಿಲ್ಲಿಸಿದೆ. ನದಿ ಸಂಪೂರ್ಣ ಬತ್ತಿಹೋದ ಪರಿಣಾಮ ಆಲೂರು ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಸ್ಥಗಿತಗೊಂಡಿದೆ. ಪಟ್ಟಣದ 11 ವಾರ್ಡ್‌ಗಳಿಗೆ ಟ್ಯಾಂಕರ್ ಮೂಲಕ ಅಗತ್ಯ ನೀರು ಪೂರೈಸಲಾಗದೆ ಪಟ್ಟಣ ಪಂಚಾಯಿತಿಯವರು ಪರದಾಡುವಂತಾಗಿದೆ.

ಪಟ್ಟಣ ಪಂಚಾಯಿತಿಯಲ್ಲಿ ಕೇವಲ ಎರಡು ಟ್ಯಾಂಕರ್‌ಗಳಿದ್ದು 11 ವಾರ್ಡ್‌ಗಳಿಗೂ ಪ್ರತಿದಿನ ನೀರು ಪೂರೈಸಲು ಇದರಿಂದ ಅಸಾಧ್ಯವಾಗಿದೆ. ಇದರಿಂದ ನಾಗರಿಕರಿಗೆ ನಿತ್ಯದ ಬಳಕೆಗೆ ಅಗತ್ಯವಾದಷ್ಟು ನೀರು ದೊರಕದೆ ಪ್ರತಿದಿನ ತಮ್ಮ ನಿತ್ಯದ ಕೆಲಸಗಳನ್ನು ಬದಿಗೊತ್ತಿ ಪಟ್ಟಣ ಪಂಚಾಯಿತಿಯ ನೀರಿನ ಟ್ಯಾಂಕರ್ ಬರುವಿಕೆಗೆ ಕಾಯ್ದು ಕೂರುವಂತಾಗಿದೆ.

ಟ್ಯಾಂಕರ್‌ಗಳು ಬಂದರೂ ಅವಶ್ಯಕತೆಗೆ ಬೇಕಾದಷ್ಟು ನೀರನ್ನು ತಮ್ಮ ಮನೆಗಳಿಗೆ ತುಂಬಿಸಿಕೊಳ್ಳಲು ನಾ ಮುಂದು ತಾ ಮುಂದು ಎಂಬಂತೆ, ನೂಕಾಟ ತಳ್ಳಾಟಗಳೊಂದಿಗೆ ಸಿಕ್ಕಷ್ಟು ನೀರು ಪಡೆದುಕೊಳ್ಳುವಂತಾಗಿದೆ. ಇದರಿಂದ ಬೇಸತ್ತ ಕೆಲವರು ಖಾಸಗಿ ಟ್ಯಾಂಕರ್‌ಗಳ ಮೂಲಕ ನೀರು ತರಿಸಿಕೊಳ್ಳಲು, ಟ್ಯಾಂಕರ್ ಮಾಲೀಕರನ್ನು ಸಂಪರ್ಕಿಸಿದರೆ ಅವರು ಸಹ ಸೂಕ್ತ ಸಮಯಕ್ಕೆ ದೊರೆಯುತ್ತಿಲ್ಲ, ಒಂದು ವೇಳೆ ಸಂಪರ್ಕಕ್ಕೆ ಸಿಕ್ಕಿದರೂ ಟ್ಯಾಂಕರ್ ನೀರಿಗೆ ಸಾವಿರಾರು ರುಪಾಯಿ ಬೇಡಿಕೆ ಇಡುತ್ತಾರೆ. ಕೈ ಪಂಪ್‌ಗಳ ಮೂಲಕ ನೀರು ತರಲು ಪಟ್ಟಣದಲ್ಲಿರುವ ಭಾಗಶಃ ಎಲ್ಲಾ ಬೋರ್ವೆಲ್‌ಗಳಲ್ಲಿ ಅಂತರ್ಜಲ ಬತ್ತಿದ್ದು ನಿಷ್ಕ್ರಿಯವಾಗಿವೆ.

ಗಾಯದ ಮೇಲೆ ಬರೆ ಎಳೆದಂತೆ ಹಿಂದೆಂದೂ ಕಂಡರಿಯದ ತಾಪಮಾನ ಹೆಚ್ಚಳ ಹಾಗೂ ಬೇಸಿಗೆಯ ಸುಡು ಬಿಸಿಲಿನ ದಾಳಿಗೆ ಸಿಲುಕಿ ಜನತೆ ಪರಿತಪಿಸುವಂತಾಗಿದೆ.

ಪಟ್ಟಣ ಪ್ರದೇಶದವರಿಗಿಂತ ಗ್ರಾಮೀಣ ಭಾಗದವರ ಪರಿಸ್ಥಿತಿ ಭಿನ್ನವಾಗಿಲ್ಲ. ತಾಲೂಕಿನ ಒಟ್ಟು 15 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲೂ ಕೆರೆಕಟ್ಟೆಗಳು ಒಣಗಿ ಹೋಗಿದ್ದು, ಗ್ರಾಮ ಪಂಚಾಯಿತಿಯವರು ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ಖಾಸಗಿ ಬೋರ್ವೆಲ್‌ಗಳಿಂದ ತಕ್ಕಮಟ್ಟಿಗೆ ನೀರು ಪೂರೈಸುತ್ತಿದ್ದು, ಜಾನುವಾರು, ಕಾಡುಪ್ರಾಣಿಗಳು, ಪಕ್ಷಿ ಸಂಕುಲ, ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನ ಕೆಂಚಮ್ಮನ ಹೊಸಕೋಟೆ, ಕುಂದೂರು, ಪಾಳ್ಯ ಹೋಬಳಿಗಳಲ್ಲಿ ಕಾಡಾನೆ ಹಾವಳಿ ಇದ್ದು ಕಾಡಾನೆಗಳು ನೀರಿಗಾಗಿ ಕಾಫಿ ತೋಟಗಳಲ್ಲಿರುವ ಕೃಷಿ ಹೊಂಡಗಳತ್ತ ಮುಖ ಮಾಡಿವೆ. ಕೃಷಿ ಹೊಂಡದಿಂದ ಕಾಫಿ ಬೆಳೆಗೆ ನೀರು ಪೂರೈಸಲು ಹಾಕಲಾಗಿರುವ ಪೈಪ್ ಹಾಗೂ ಮೋಟರ್ ಸೆಟ್‌ಗಳನ್ನು ಕಾಡಾನೆಗಳು ಹಾಳು ಮಾಡುತ್ತಿದ್ದು, ಬಿಸಿಲ ತಾಪದಿಂದ ಕಾಫಿ ಬೆಳೆಯನ್ನು ಉಳಿಸಿಕೊಳ್ಳಲು ಕೃಷಿ ಹೊಂಡಗಳ ಬಳಿ ರೈತರು ಹೋಗಲಾರದ ಸ್ಥಿತಿ ನಿರ್ಮಾಣವಾಗಿದೆ.

ಈ ಸಂಬಂಧ ಪತ್ರಿಕೆಯೊಂದಿಗೆ ಮಾತನಾಡಿದ ಶಾಸಕ ಸಿಮೆಂಟ್ ಮಂಜು, ಯಗಚಿ ಜಲಾಶಯದಿಂದ ನದಿಗೆ ನೀರು ಬಿಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು, ಇನ್ನೆರಡು ದಿನಗಳೊಳಗೆ ನದಿಗೆ ನೀರು ಬಿಡಲಾಗುವುದು, ನದಿಗೆ ಮೋಟಾರ್ ಅಳವಡಿಸಿ ತಮ್ಮ ತೋಟ, ಹೊಲಗದ್ದೆಗಳಿಗೆ ನೀರು ಹರಿಸುತ್ತಿರುವುದನ್ನು ಮೊದಲು ನಿಲ್ಲಿಸಬೇಕಾಗಿದೆ, ತಕ್ಷಣವೇ ಈ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಸ್ಟೀಫನ್ ಪ್ರಕಾಶ್ ಮಾತನಾಡಿ, ಶಾಸಕರು ಈಗಾಗಲೇ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು ಶೀಘ್ರ ನದಿಗೆ ನೀರು ಹರಿಸಲಾಗುವುದು, ನದಿಗೆ ರೈತರು ಅಳವಡಿಸಿರುವ ಮೋಟಾರ್‌ಗಳನ್ನು ತೆರವುಗೊಳಿಸಲು ಅವರ ಮನವೊಲಿಸಲಾಗುವುದು. ಅಲ್ಲಿಯವರೆಗೂ ಹೆಚ್ಚುವರಿ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರಿನ ಸರಬರಾಜು ಮಾಡಲಾಗುವುದು ಎಂದು ತಿಳಿಸಿದರು.ಟ್ಯಾಂಕರ್‌ ಗಳಲ್ಲಿ ನೀರು ಸರಬರಾಜು ಮಾಡುತ್ತಿರುವುದು.

ಆಲೂರು ಪಟ್ಟಣದ ಪಕ್ಕದಲ್ಲೇ ಇರುವ ಯಗಚಿ ನದಿಯಲ್ಲಿ ನೀರಿನ ಹರಿವು ನಿಂತಿದ್ದು, ಗುಂಡಿಗಳಲ್ಲಿ ಮಾತ್ರವೇ ನೀರು ನಿಂತಿದೆ.