ಪುರಭವನ ಆವರಣದಲ್ಲಿ ಮಹಿಷಾ ಮಂಡಲೋತ್ಸವ

| Published : Sep 30 2024, 01:27 AM IST

ಸಾರಾಂಶ

ಅ.12 ರಂದು ಅಶೋಕ ಚಕ್ರವರ್ತಿಯ ಜನ್ಮ ದಿನವಿದ್ದು, ದಸರಾ ಜಂಬೂಸವಾರಿಯ ದಿನದಂದು ಅಶೋಕಪುರಂನಿಂದ ಪುರಭವನದವರೆಗೆ ಅಶೋಕ ಭಾವಚಿತ್ರ ಮೆರವಣಿಗೆ ಮೂಲಕ ತರುತ್ತೇವೆ.

- ನಿಷೇಧಾಜ್ಞೆ ಜಾರಿ- ಚಾಮುಂಡಿಬೆಟ್ಟದಲ್ಲಿ ಪುಷ್ಪಾರ್ಚನೆಗೆ ಸಿಗದ ಅವಕಾಶ

- ದಸರಾ ಉದ್ಘಾಟನೆಗೆ ಅಡ್ಡಿ- ಪುರುಷೋತ್ತಮ್ ಎಚ್ಚರಿಕೆಫೋಟೋ- 29ಎಂವೈಎಸ್3

ಮೈಸೂರಿನ ಪುರಭವನ ಆವರಣದಲ್ಲಿ ಮಹಿಷಾ ದಸರಾ ಆಚರಣಾ ಸಮಿತಿಯು ಭಾನುವಾರ ಆಯೋಜಿಸಿದ್ದ ಮಹಿಷಾ ಮಂಡಲೋತ್ಸವವನ್ನು ಬುದ್ಧ, ಅಂಬೇಡ್ಕರ್, ಮಹಿಷ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಾಯಿತು. ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಬೋಧಿದತ್ತ ಬಂತೇಜಿ, ಪುರುಷೋತ್ತಮ್, ಪ್ರೊ.ಕೆ.ಎಸ್. ಭಗವಾನ್, ಪ್ರೊ. ನಂಜರಾಜೇ ಅರಸ್, ಡಾ. ಕೃಷ್ಣಮೂರ್ತಿ ಚಮರಂ, ಸಿದ್ಧಸ್ವಾಮಿ ಇದ್ದರು.

----ಕನ್ನಡಪ್ರಭ ವಾರ್ತೆ ಮೈಸೂರು

ಚಾಮುಂಡಿಬೆಟ್ಟದಲ್ಲಿರುವ ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಬೇಕು ಎಂಬ ಮಹಿಷ ಮಂಡಲೋತ್ಸವ ಆಚರಣಾ ಸಮಿತಿಯ ಉದ್ದೇಶ ಈಡೇರಲಿಲ್ಲ. ಪುರಭವನ ಆವರಣ ಹೊರತುಪಡಿಸಿ ಚಾಮುಂಡಿಬೆಟ್ಟವೂ ಸೇರಿದಂತೆ ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದು ಇದಕ್ಕೆ ಕಾರಣ. ಹೀಗಾಗಿ ಮಹಿಷಾ ಮಂಡಲೋತ್ಸವವು ಕಳೆದ ಬಾರಿಯಂತೆ ಈ ಬಾರಿಯೂ ಪುರಭವನ ಆವರಣಕ್ಕೆ ಸೀಮಿತವಾಗಿ ನಡೆಯಿತು.

ಮಹಿಷಾ ದಸರಾ ಆಚರಣೆಗೆ ಅವಕಾಶ ಕೊಡದ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ ನಡೆಸುವ ದಸರಾ ಮಹೋತ್ಸವದ ಜಂಬೂಸವಾರಿ ಉದ್ಘಾಟನೆಗೆ ಅಡ್ಡಿ ಪಡಿಸಲಾಗುವುದು ಎಂದು ಮಹಿಷಾ ದಸರಾ ಆಚರಣೆ ಸಮಿತಿ ಅಧ್ಯಕ್ಷರಾದ ಮಾಜಿ ಮೇಯರ್ ಪುರುಷೋತ್ತಮ್ ತಿಳಿಸಿದರು.

ನಗರದ ಪುರಭವನದ ಆವರಣದಲ್ಲಿ ಮಹಿಷಾ ದಸರಾ ಆಚರಣಾ ಸಮಿತಿಯು ಭಾನುವಾರ ಆಯೋಜಿಸಿದ್ದ ಮಹಿಷಾ ಮಂಡಲೋತ್ಸವ (ಮಹಿಷಾ ದಸರಾ) ದಲ್ಲಿ ಮಾತನಾಡಿದ ಅವರು, ಅ.12 ರಂದು ಅಶೋಕ ಚಕ್ರವರ್ತಿಯ ಜನ್ಮ ದಿನವಿದ್ದು, ದಸರಾ ಜಂಬೂಸವಾರಿಯ ದಿನದಂದು ಅಶೋಕಪುರಂನಿಂದ ಪುರಭವನದವರೆಗೆ ಅಶೋಕ ಭಾವಚಿತ್ರ ಮೆರವಣಿಗೆ ಮೂಲಕ ತರುತ್ತೇವೆ. ಜಿಲ್ಲಾಡಳಿತ ಅವಕಾಶ ಕೊಡಬೇಕು. ಇಲ್ಲದಿದ್ದರೆ ದಸರಾ ಜಂಬೂಸವಾರಿ ಉದ್ಘಾಟನೆಗೆ ಅಡ್ಡಿಪಡಿಸಲಾಗುವುದು. ಇದಕ್ಕೆ ದಲಿತ ಸಂಘಟನೆಗಳು ಬೆಂಬಲ ಕೊಡಬೇಕು ಎಂದರು.

ಅಶೋಕನ ಮೆರವಣಿಗೆಗೆ ಜಿಲ್ಲಾಡಳಿತ ಅವಕಾಶ ಕೊಡದಿದ್ದರೆ ದಸರಾ ಜಂಬೂಸವಾರಿ ದಿನ ರಾಜ್ಯದ ಉದ್ದಗಲಕ್ಕೂ ಬಸ್, ರೈಲುಗಳನ್ನು ತಡೆಯಿರಿ. ಮಿತಿ ಮೀರಿದರೆ ಪ್ರಾಣ ತಾಗ್ಯ ಬಲಿದಾನ ಮಾಡಬೇಕು. ದಸರಾವನ್ನು ನೀವು ಯಾವ ರೀತಿ ಉದ್ಘಾಟನೆ ಮಾಡ್ತೀರಾ ನಾನು ನೋಡುತ್ತೇನೆ ಎಂದು ಅವರು ಸವಾಲು ಹಾಕಿದರು.

ಚರಿತ್ರೆ ಮರೆತಿದ್ದಕ್ಕೆ ನಾವು ಬೇಡುವ ಸ್ಥಿತಿಯಲ್ಲಿ ಇದ್ದೇವೆ

ಶ್ರೀ ಉರಿಲಿಂಗಿಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ನಮ್ಮ ಚರಿತ್ರೆ ಹಾಗೂ ಇತಿಹಾಸ ಮರೆತರೆ ನಮಗೆ ಎಂತಹ ಶಿಕ್ಷೆ ಆಗುತ್ತದೆ ಎಂಬುದಕ್ಕೆ ಮಹಿಷಾ ದಸರಾ ಸಾಕ್ಷಿಯಾಗಿದೆ. ನಾವು ಇತಿಹಾಸ ಹಾಗೂ ಚರಿತ್ರೆ ಮರೆತ ಹಿನ್ನೆಲೆಯಲ್ಲಿ ನಾವು ಬೇಡುವ ಸ್ಥಿತಿಯಲ್ಲಿ ಇದ್ದೇವೆ ಎಂದು ಕಿಡಿಕಾರಿದರು.

ಜಿಲ್ಲಾಡಳಿತ ಮಹಿಷಾ ದಸರಾಗೆ ಅಡ್ಡಿಪಡಿಸಿದೆ. ಇದು ಮಹಿಷನ ಸಮಸ್ಯೆಯಲ್ಲ, ಬದಲಾಗಿ ಇದು ರಾಜಕೀಯ ಪಕ್ಷಗಳ ಮತದ ಸಮಸ್ಯೆಯಾಗಿದೆ. ಹಿಂದುತ್ವ ಹಾಗೂ ಜಾತ್ಯತೀತ ಎಂಬುದು ಓಟ್ ಬ್ಯಾಂಕ್ ಆಗಿದೆ. ಈ ಕಾರಣಕ್ಕೆ ಮಹಿಷಾ ದಸರಾಗೆ ಅಡ್ಡಿ ಪಡಿಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮಹಿಷಾ ಇತಿಹಾಸ ಹೊರ ತರಬೇಕು

ಲೇಖಕ ಯೋಗೇಶ್ ಮಾಸ್ಟರ್ ಮಾತನಾಡಿ, ಮಹಾರಾಷ್ಟ್ರದಲ್ಲಿ ಮಹಿಷನ ದೇವಸ್ಥಾನ ಇದೆ. ಮಹಿಷನ ಬಗ್ಗೆ ಮರೆ ಮಾಚಿರುವ ಇತಿಹಾಸ ಹೊರ ತರುವ ಕಾರ್ಯ ಆಗಬೇಕು. ಜನರನ್ನು ರಕ್ಷಣೆ ಮಾಡುತ್ತಿದ್ದವರನ್ನೇ ರಾಕ್ಷಕರು ಎಂದು ಬಿಂಬಿಸಲಾಗಿದೆ. ಒಂದು ವರ್ಗ ರಾಕ್ಷಕರ ಕುರಿತು ಕೆಟ್ಟದಾಗಿ ಬಿಂಬಿಸಿರುವುದನ್ನು ನಾವು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ ಎಂದರು.

ಚಂಡ ಮುಂಡರನ್ನು ಕೊಂದವಳು ಚಾಮುಂಡಿ. ಆದರೆ, ಆಕೆ ಮಹಿಷ ಮರ್ಧಿನಿ ಹೇಗೆ ಆದಳು ಎಂಬುದಕ್ಕೆ ಉತ್ತರ ಕಂಡುಕೊಳ್ಳಬೇಕು. ಚಾಮುಂಡಿಬೆಟ್ಟದಲ್ಲಿರುವುದು ಚಾಮುಂಡೇಶ್ವರಿಯೋ ಅಥವಾ ಯಕ್ಷಿಣಿಯೋ ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಅವರು ತಿಳಿಸಿದರು.

ಮೂಲಭೂತ ಹಕ್ಕಿನ ಮೊಟಕು

ಲೇಖಕ ಶಿವಸುಂದರ್ ಮಾತನಾಡಿ, ನಮ್ಮ ಆಚರಣೆಗಳಿಗೆ ಯಾವುದೇ ಸರ್ಕಾರ ಅಡ್ಡಿ ಪಡಿಸಬಾರದು. ಇದು ಮೂಲಭೂತ ಹಕ್ಕಿನ ಮೊಟಕಾಗಿದೆ. ನನ್ನ ದೇವರನ್ನು ಪೂಜಿಸಿದರೆ ನಿಮಗೆ ನೋವಾಗುತ್ತದೆ ಎಂದರೆ ನಾವು ಏನು ಮಾಡಲು ಸಾಧ್ಯ?ನಾವು ಮಹಿಷನನ್ನು ಪೂಜೆ ಮಾಡಿದರೆ ಬೇರೆಯವರ ಭಾವನೆಗೆ ಹೇಗೆ ಧಕ್ಕೆ ಉಂಟಾಗಲು ಸಾಧ್ಯ? ನಮ್ಮ ದೇವರನ್ನು ರಾಕ್ಷಕರು ಎಂದು ಬಿಂಬಿಸಿ ನಮ್ಮನ್ನು ಮತ್ತೆ ದಾಸ್ಯಕ್ಕೆ ದೂಡುವ ಪ್ರಯತ್ನ ನಡೆಯುತ್ತಿದೆ ಎಂದು ಕಿಡಿಕಾರಿದರು.

ಬುದ್ಧ ವಿಹಾರದ ಬೋಧಿದತ್ತ ಬಂತೇಜಿ, ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್. ಭಗವಾನ್, ಪ್ರೊ. ನಂಜರಾಜೇ ಅರಸ್, ಡಾ. ಕೃಷ್ಣಮೂರ್ತಿ ಚಮರಂ, ಡಾ. ಸಿದ್ಧಸ್ವಾಮಿ, ಚಿನ್ನಸ್ವಾಮಿ ಮೊದಲಾದವರು ಇದ್ದರು.

-----

ಕೋಟ್...

ಮನುಸ್ಮೃತಿಯಲ್ಲಿ ಎಲ್ಲಾ ಶೂದ್ರರು ಬ್ರಾಹ್ಮಣರ ಗುಲಾಮರು ಎಂಬ ಅರ್ಥವಿದೆ. ಇಂತಹ ಧರ್ಮವನ್ನು ನೀವು ಒಪ್ಪಿಕೊಳ್ಳುತ್ತೀರಾ? ದೇವಸ್ಥಾನ ಕಟ್ಟಿದವರು ಶೂದ್ರರು. ಆದರೆ, ದೇವಸ್ಥಾನ ಕಟ್ಟಿದ ನಂತರ ಅವರನ್ನು ಹೊರಗೆ ನಿಲ್ಲಿಸುತ್ತಾರೆ. ಇಂತಹ ಹಿಂದೂ ಧರ್ಮದ ಆಚರಣೆಗಳನ್ನು ನೀವು ಮಾಡಬೇಕಾ? ನಿಮಗೆ ಮಾನ ಮರ್ಯಾದೆ ಇದ್ದರೆ ದೇವಸ್ಥಾನಗಳಿಗೆ ಹೋಗಬೇಡಿ. ಹಿಂದೂ ಧರ್ಮದ ಆಚರಣೆಗೆ ಎಡಗಾಲ ಎಕ್ಕಡದಿಂದ ಹೊಡೆದು ತಿರಸ್ಕರಿಸಿ.

- ಪ್ರೊ.ಕೆ.ಎಸ್. ಭಗವಾನ್, ಚಿಂತಕ

-----

ಬಾಕ್ಸ್...

ದಿಢೀರ್ ಪ್ರತಿಭಟನೆ- ಪೊಲೀಸರೊಂದಿಗೆ ವಾಗ್ವಾದ

ಚಾಮುಂಡಿಬೆಟ್ಟಕ್ಕೆ ಹೋಗಿ ಮಹಿಷಾ ಮೂರ್ತಿಗೆ ಪುಷ್ಪಾರ್ಚನೆ ಮಾಡಲು ಅವಕಾಶ ಕೊಡಬೇಕು ಎಂದು ಮಹಿಷಾ ದಸರಾ ಆಚರಣಾ ಸಮಿತಿಯವರು ಪುರಭವನ ಆವರಣದಲ್ಲಿ ದಿಢೀರ್ ಪ್ರತಿಭಟನೆ ನಡೆಸಿ, ಪೊಲೀಸರ ಜೊತೆ ವಾಗ್ವಾದಕ್ಕಿಳಿದ ಘಟನೆ ನಡೆಯಿತು.

ಚಾಮುಂಡಿಬೆಟ್ಟಕ್ಕೆ ಹೋಗಲು ಅವಕಾಶ ನೀಡುವಂತೆ ಒತ್ತಾಯಿಸಿದ ಅವರು, ಜಿಲ್ಲಾಡಳಿತ ಮತ್ತು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಚಾಮುಂಡಿಬೆಟ್ಟದಲ್ಲಿ ಮಹಿಷಾಸುರನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲು 5 ಜನರಿಗೆ ಅವಕಾಶ ನೀಡುವಂತೆ ಒತ್ತಾಯಿಸಿದರು. ನಿಷೇಧಾಜ್ಞೆ ಜಾರಿಯಲ್ಲಿ ಇರುವುದರಿಂದ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದರು. ಹೀಗಾಗಿ, ಸಮಿತಿಯವರು ಆಕ್ರೋಶಗೊಂಡು ಪೊಲೀಸರೊಂದಿಗೆ ಮಾತಿನ ಚಕಮಕಿಗೆ ಇಳಿದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪುರಭವನ ಆವರಣದಲ್ಲಿರುಪ ಡಾ. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಮಹಿಷಾ ದಸರಾ ಆಚರಣ ಸಮಿತಿಯವರು, ವೇದಿಕೆಯಲ್ಲಿ ಬುದ್ಧ, ಅಂಬೇಡ್ಕರ್, ಮಹಿಷ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು.