ದೇಶದ ಐಕ್ಯತೆಗೆ ಸೌಹಾರ್ದತೆ ಅಗತ್ಯ: ಯು.ಟಿ.ಖಾದರ್‌

| Published : Feb 08 2024, 01:32 AM IST

ಸಾರಾಂಶ

ಅರಕೇರಾ ಗ್ರಾಮದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಜಾಮಿಯಾ ಮಸೀದಿ ಕಮಿಟಿ ವತಿಯಿಂದ ಏರ್ಪಡಿಸಿದ್ದ ಸರ್ವಧರ್ಮ ಸಮ್ಮೇಳನವನ್ನು ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್‌ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ದೇವದುರ್ಗ

ದೇಶದಲ್ಲಿ ಶಾಂತಿ ನಿರ್ಮಾಣ, ಸಕಲರ ಅಭ್ಯುದಯಕ್ಕಾಗಿ ದೇಶದ ಐಕ್ಯತೆಗೆ ನಾವೆಲ್ಲರೂ ಸೌಹಾರ್ದತೆಯ ಕೊಡುಗೆ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಯುವಕರು ಹಾಗೂ ಪಾಲಕರು ಜಾಗೃತಗೊಳ್ಳಬೇಕೆಂದು ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್‌ ತಿಳಿಸಿದರು.

ಸಮೀಪದ ಅರಕೇರಾ ಗ್ರಾಮದಲ್ಲಿ ಜಾಮೀಯಾ ಮಸೀದಿ ಉದ್ಘಾಟನೆ ಬಳಿಕ, ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಜಾಮಿಯಾ ಮಸೀದಿ ಕಮಿಟಿ ವತಿಯಿಂದ ಬುಧವಾರ ಏರ್ಪಡಿಸಿದ್ದ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ ರಾಷ್ಟ್ರವಾಗಿದೆ. ಉಸಿರು ನಿಂತರೆ ಯಾರು ಬದುಕಲು ಸಾಧ್ಯವಿಲ್ಲ. ಆದರೆ ಸೌಹಾರ್ದತೆ ಒಡೆದು ಹೋದರೆ ಯಾರು ಉಳಿಯುವುದಿಲ್ಲ. ಹುಟ್ಟು ಸಹಜ, ಸಾವು ಅನಿವಾರ್ಯ ಎಂಬುದನ್ನು ಅರಿತು ಬಾಳಬೇಕಾಗಿದೆ ಎಂದರು.

ಸಾಮಾಜಿಕ ಜಾಲತಾಣದಲ್ಲಿ ಗೀಚುವವರ ಬಗ್ಗೆ ತಲೆಕೆಡೆಸಿಕೊಳ್ಳಬಾರದು. ಇತಿಹಾಸ ನಿರ್ಮಾಣ ಆಗುವ ಕೆಲಸ ಮಾಡಬೇಕು. ರಾಯಚೂರು ಧಾರ್ಮಿಕ ಹಾಗೂ ಸೌಹಾರ್ದಯುತ ಕೇಂದ್ರವಾಗಿದೆ. ಹಿರಿಯರ ತ್ಯಾಗ, ತಾಳ್ಮೆ, ಸಹನೆಯಿಂದ ಈ ಪ್ರದೇಶದಲ್ಲಿ ಇತಿಹಾಸ ಸೃಷ್ಟಿಸಿದೆ ಎಂದು ಹೇಳಿದರು.

ನಿಮ್ಮೆಲ್ಲರ ಸಹೋದರತ್ವ, ಸಹಬಾಳ್ವೆ ರಾಜ್ಯ ಮತ್ತು ದೇಶಕ್ಕೆ ಮಾದರಿಯಾಗಿದೆ. ಶಿಕ್ಷಣ ಪಡೆಯುವದರ ಮೂಲಕ ನಾಗರಿಕ ಸಮುದಾಯದ ಮುಖ್ಯವಾಹಿನಿಗೆ ಜಾತಿ-ಮತ, ಪಂತ, ವರ್ಗ ಬೇಧವಿಲ್ಲದೆ ಯುವಕರು ಹೊಸ ನಾಂದಿ ಹಾಡಬೇಕೆಂದು ವಿಧಾನ ಸಭೆ ಸಭಾಪತಿ ಯು.ಟಿ.ಖಾದರ್ ತಿಳಿಸಿದರು.

ಜೇವರ್ಗಿ ಸೊನ್ನ ಶ್ರೀಮಠದ ಸಿದ್ದಲಿಂಗೇಶ್ವ ಸ್ವಾಮೀಜಿ, ಫಾದರ್ ಸುರೇಶ ಬಾಬು, ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ವಿಭಾಗದ ಉಪ ಕಾರ್ಯದರ್ಶಿ ಮಹಬೂಬ್‌ಸಾಬ್, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ ನಾಯಕ, ಎಸ್‌ಎಸ್‌ಎಫ್ ರಾಜ್ಯಾಧ್ಯಕ್ಷ ಹಾಫಿಜ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ ಮಾತನಾಡಿದರು.

ಈ ಸಂದರ್ಭದಲ್ಲಿ ಜಾಮೀಯಾ ಮಸೀದಿಗೆ ಭೂ ದಾನ ಮಾಡಿರುವ ರಾಜಾ ಸತ್ಯನಾರಾಯಣ ನಾಯಕರನ್ನು ಸನ್ಮಾನಿಸಲಾಯಿತು. ಶಹಾಪೂರ ಶ್ರೀ ಗುರುಲಿಂಗಸ್ವಾಮೀಜಿ, ಸಹಾಯಕ ಆಯುಕ್ತೆ ಮಹಬೂಬಿ, ಗ್ರಾಪಂ ಅಧ್ಯಕ್ಷೆ ರಂಗಮ್ಮ ನಾಯಕ, ಮುಖಂಡರಾದ ಶ್ರೀದೇವಿ ಆರ್. ನಾಯಕ, ಶಂಶಾಲಂ ರಾಯಚೂರು, ಬಷೀರುದ್ದೀನ್, ಅಮ್ಜದ್ ಸೇಠ್ ಹಟ್ಟಿ, ಸಯ್ಯದ್‌ ಅಕ್ಬರ್ ಪಾಷಾ ಮಾನ್ವಿ, ಬಸವರಾಜ ಪೂಜಾರಿ, ಸದಾಶಿವಯ್ಯ ಸ್ವಾಮಿ, ಸಿದ್ದಯ್ಯ ಗುರುವಿನ, ಚೆನ್ನವೀರಯ್ಯ ಸ್ವಾಮಿ, ಸೈಯದ್ ಮುಖ್ತಿಯಾರ್ ಅಹ್ಮದ್, ಅಮಜದ್ ಸೇಠ್, ಜಾಮಿಯಾ ಮಸೀದಿ ಕಮಿಟಿ ಅಧ್ಯಕ್ಷ ಜಲೀಲ್ ಇತರರಿದ್ದರು.