ತುಳು ಭಾಷೆಯಿಂದ ಸಾಮರಸ್ಯ ಸಾಧ್ಯ: ರಮಾನಾಥ ರೈ

| Published : Jul 22 2024, 01:23 AM IST

ಸಾರಾಂಶ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತುಳು ಭಾಷೆಯಲ್ಲಿ ನೂರಕ್ಕೆ ನೂರು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ತುಳು ಭಾಷೆಯನ್ನು ಮಾತನಾಡುವ ಮಂದಿ ಬಹಳ ಮೃದು ಸ್ವಭಾವದವರು. ಪಂಚದ್ರಾವಿಡ ಭಾಷೆಯಲ್ಲಿ ತುಳು ಭಾಷೆಯೂ ಒಂದು ಎನ್ನುವ ಹೆಮ್ಮೆ ಇರಬೇಕೇ ಹೊರತು ಕೀಳರಿಮೆ ಸಲ್ಲದು. ತುಳು ಭಾಷೆಯಿಂದ ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಸಾಧ್ಯವಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.

ಅವರು ಶನಿವಾರ ತುಳು ಭವನದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 30ನೇ ವರ್ಷದ ಸಂಭ್ರಮ ಹಾಗೂ ಅಮೃತ ಸೋಮೇಶ್ವರ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದರು.

ತುಳು ಭಾಷೆಗೆ ಅಪಾರ ಸೇವೆ ಸಲ್ಲಿಸಿದ ಅಮೃತ ಸೋಮೇಶ್ವರ ಹೆಸರಿನಲ್ಲಿ ಸಭಾಂಗಣ ನಿರ್ಮಾಣ ಮಾಡಿದ್ದು, ಅವರಿಗೆ ಸೂಕ್ತ ಗೌರವವನ್ನು ಸಲ್ಲಿಸಿದಂತಾಗಿದೆ. ತುಳು ಕಾರ್ಯಕ್ರಮಗಳಲ್ಲಿ ತುಳು ಧ್ವಜವನ್ನು ಹಾರಿಸಿಕೊಂಡು ಒಗ್ಗಟ್ಟನ್ನು ಪ್ರದರ್ಶನ ಮಾಡಬೇಕು ಎಂದರು.ಅಧ್ಯಕ್ಷತೆ ವಹಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ್‌ ಗಟ್ಟಿ ಕಾಪಿಕಾಡ್‌ ಮಾತನಾಡಿ, ಅಕಾಡೆಮಿ ಮೂಲಕ ಭಾಷೆ, ಸಂಸ್ಕೃತಿ, ನೆಲೆಗಟ್ಟಿನ ಕುರಿತಾದ ಅಧ್ಯಯನ, ದಾಖಲೀಕರಣ ಮಾಡುವ ದೊಡ್ಡ ಯೋಜನೆ ಇಟ್ಟುಕೊಳ್ಳಲಾಗಿದೆ. ತುಳು ಸಮಾಜದಲ್ಲಿರುವ ಸಂಸ್ಕೃತಿ, ಆಚಾರ ವಿಚಾರ, ಡೋಲು, ದುಡಿಯಂತಹ ಪ್ರಕಾರಗಳಲ್ಲಿ ಆಯಾಮಗಳನ್ನು ಹುಡುಕಿಕೊಂಡು ದಾಖಲು ಮಾಡಿದರೆ ಅದು ತುಳು ಭಾಷೆಗೆ ಬಹಳ ದೊಡ್ಡ ಕೊಡುಗೆ ಆಗಲಿದೆ ಎಂದರು.ಈ ಸಂದರ್ಭ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತುಳು ಭಾಷೆಯಲ್ಲಿ ನೂರಕ್ಕೆ ನೂರು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.

ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ, ತುಳು ಸಾಹಿತ್ಯ ಅಕಡೆಮಿ ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ, ತುಳು ಸಾಹಿತಿ ಇಂದಿರಾ ಹೆಗ್ಗಡೆ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಉಳ್ಳಾಲ್‌, ಕರ್ನಾಟಕ ಥಿಯೋಲಾಜಿಕಲ್‌ ಕಾಲೇಜು ಪ್ರಾಂಶುಪಾಲ ಡಾ.ಎಚ್‌.ಎಂ. ವಾಟ್ಸನ್‌, ದಲಿತ ಸಂಘಟನೆಗಳ ಸಮನ್ವಯ ಸಮಿತಿ ಪ್ರಧಾನ ಸಂಚಾಲಕ ಎಂ.ದೇವದಾಸ್‌, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ವ್ಯಾನಿ ಅಲ್ವಾರಿಸ್‌, ಅಕಾಡೆಮಿ ರಿಜಿಸ್ಟ್ರಾರ್‌ ಪೂರ್ಣಿಮಾ ಇದ್ದರು.

ಉದ್ಯಾವರ ನಾಗೇಶ ಕುಮಾರ್‌ ಸ್ವಾಗತಿಸಿದರು. ಕುಂಬ್ರ ದುರ್ಗಾ ಪ್ರಸಾದ್‌ ನಿರೂಪಿಸಿದರು.