ಹಾರೋಹಳ್ಳಿ ತಹಸೀಲ್ದಾರ್ ಶಿವಕುಮಾರ್ ಅಮಾನತು

| Published : Mar 23 2025, 01:30 AM IST

ಹಾರೋಹಳ್ಳಿ ತಹಸೀಲ್ದಾರ್ ಶಿವಕುಮಾರ್ ಅಮಾನತು
Share this Article
  • FB
  • TW
  • Linkdin
  • Email

ಸಾರಾಂಶ

ಕರ್ತವ್ಯ ಲೋಪ ಆರೋಪದ ಮೇಲೆ ಹಾರೋಹಳ್ಳಿ ತಹಸೀಲ್ದಾರ್ ಆರ್.ಸಿ.ಶಿವಕುಮಾರ್ ಅವರನ್ನು ಅಮಾನತ್ತುಗೊಳಿಸಿ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಮುಖ್ತಾರ್ ಪಾಷ ಆದೇಶ ಹೊರಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಾರೋಹಳ್ಳಿ

ಕರ್ತವ್ಯ ಲೋಪ ಆರೋಪದ ಮೇಲೆ ಹಾರೋಹಳ್ಳಿ ತಹಸೀಲ್ದಾರ್ ಆರ್.ಸಿ.ಶಿವಕುಮಾರ್ ಅವರನ್ನು ಅಮಾನತ್ತುಗೊಳಿಸಿ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಮುಖ್ತಾರ್ ಪಾಷ ಆದೇಶ ಹೊರಡಿಸಿದ್ದಾರೆ.

ಬಗರ್ ಹುಕುಂ ಸಾಗುವಳಿ ಅರ್ಜಿ ವಿಚಾರಣೆಯಲ್ಲಿ ತಹಸೀಲ್ದಾರ್ ಶಿವಕುಮಾರ್ ಸರ್ಕಾರದ ಆದೇಶ, ಸುತ್ತೋಲೆಗಳ ವಿರುದ್ಧ ಕರ್ತವ್ಯ ನಿರ್ವಹಿಸುವಂತೆ ಒತ್ತಡ ಹೇರುತ್ತಿದ್ದಾರೆಂದು ಕಗ್ಗಳ್ಳಿ ಗ್ರಾಮ ಆಡಳಿತಾಧಿಕಾರಿ ಈಶ್ವರ್, ಹಾರೋಹಳ್ಳಿ ಪ್ರಭಾರ ಕಂದಾಯ ನಿರೀಕ್ಷಕರಾದ ಅಶೋಕ್, ಭರತ್ ಕುಮಾರ್ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.

ಕಾನೂನು ಬಾಹಿರ ಹಾಗೂ ಸ್ವಾರ್ಥಕ್ಕಾಗಿ ಅಧಿಕಾರ ದುರ್ಬಳಸಿಕೊಂಡು ಬಗರ್ ಹುಕುಂ ಸಮಿತಿಗಳಲ್ಲಿ ಅನರ್ಹಗೊಂಡಿರುವ ಫಲಾನುಭವಿಗಳಿಗೆ ಹಾಗೂ ಅನಧಿಕೃತ ಸಾಗುವಳಿ ಸಕ್ರಮಗೊಳಿಸುವುದನ್ನು ನಿರ್ಬಂಧಿಸಿರುವ ಜಮೀನುಗಳಿಗೆ ಮತ್ತೊಮ್ಮೆ ಸ್ಥಳ ತನಿಖೆ ನಡೆಸಿ ಚೆಕ್ ಲಿಸ್ಟ್ ಸಲ್ಲಿಸಲು ತಮ್ಮ ಅಧೀನ ಸಿಬ್ಬಂದಿಗೆ ನಿರ್ದೇಶಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸದರಿ ಅಧಿಕಾರಿ ಕರ್ತವ್ಯ ಲೋಪ ಎಸಗಿರುವುದು ಕರ್ನಾಟಕ ನಾಗರಿಕ ಸೇವಾ ನಿಯಮ ಉಲ್ಲಂಘಿಸಿದ್ದಾರೆನ್ನಲಾಗಿದೆ.

ಕರ್ತವ್ಯ ಲೋಪ ಆರೋಪದ ಮೇಲೆ ತಹಸೀಲ್ದಾರ್ ಅವರನ್ನು ಅಮಾನತು ಮಾಡಿ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಮುಕ್ತಾರ್ ಪಾಷ ಆದೇಶ ಹೊರಡಿಸಿದ್ದಾರೆ.

ಬಾಕ್ಸ್‌............

ತಹಸೀಲ್ದಾರ್ ಅಮಾನತಿಗೆ ಪ್ರಗತಿಪರ ಸಂಘಟನೆಗಳ ಆಕ್ರೋಶ

ಹಾರೋಹಳ್ಳಿ: ತಾಲೂಕಿನಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ತಹಸೀಲ್ದಾರ್‌ ಶಿವಕುಮಾರ್ ಅಮಾನತು ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಪ್ರಗತಿಪರ ಸಂಘಟನೆಗಳ ಮುಖಂಡರು ಆಗ್ರಹಿಸಿ ಪ್ರತಿಭಟಿಸಿದರು.

ತಾಲೂಕು ಕಚೇರಿ ಮುಂದೆ ಜಮಾಯಿಸಿದ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ರಾಜಸ್ವ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಚಂದ್ರು ಮಾತನಾಡಿ, ನಿಷ್ಠಾವಂತ ಅಧಿಕಾರಿ ತಹಸೀಲ್ದಾರ್ ಶಿವಕುಮಾರ್ ರೈತಪರ ಕಾಳಜಿ ಉಳ್ಳವರು. ಆದರೆ, ಲೂಟಿ ಹೊಡೆಯಲು ಕಡಿವಾಣ ಹಾಕಿದ ಕಾರಣಕ್ಕೆ ಅಧೀನ ಸಿಬ್ಬಂದಿ ತಹಸೀಲ್ದಾರ್ ಮೇಲೆ ಸುಳ್ಳು ಆರೋಪ ಹೊರೆಸಿದ್ದಾರೆ ಎಂದು ದೂರಿದರು.

ಶಿವಕುಮಾರ್ ಅವರಂತಹ ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಸಿಗಬೇಕು. ಇಂತಹ ಅಧಿಕಾರಿಗಳನ್ನು ಕಳೆದುಕೊಂಡರೆ ಭ್ರಷ್ಟಾಚಾರ ಹೆಚ್ಚಾಗುತ್ತದೆ. ರೈತರ ಸಮಸ್ಯೆಗಳನ್ನು ಬಗೆಹರಿಸಲು ಶಿವಕುಮಾರ್ ಮೊದಲ ಆದ್ಯತೆ ನೀಡುತ್ತಿದ್ದರು ಎಂದು ಹೇಳಿದರು.

ಮುಖಂಡ ಹರೀಶ್ ಮಾತನಾಡಿ, ಜಿಲ್ಲಾಧಿಕಾರಿಗಳಿಗೆ ನೈತಿಕತೆ ಇದ್ದರೆ ಮೊದಲು ಈಶ್ವರ್, ಅಶೋಕ್ ರಾಥೋಡ್ ಅವರನ್ನು ಅಮಾನತುಗೊಳಿಸಬೇಕು. ಐದಾರು ವರ್ಷಗಳಿಂದ ಒಂದೇ ಸ್ಥಳದಲ್ಲಿ ಠಿಕಾಣಿ ಹೂಡಿರುವ ಅವರು ಕೋಟಿ ಕೋಟಿ ಲೂಟಿ ಮಾಡುತ್ತಿದ್ದಾರೆ. ಅಶೋಕ್, ಈಶ್ವರ್ ಸರ್ಕಾರಿ ಆಸ್ತಿಗಳನ್ನು ಪ್ರಭಾವಿಗಳಿಗೆ ಮಾಡಿದ್ದಾರೆ. ಪ್ರಾಮಾಣಿಕ ತಹಸೀಲ್ದಾರ್ ಇದ್ದರೆ ಅವು ಸಾಧ್ಯವಾಗದು ಎಂದು ಅವರ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ ಎಂದು ದೂರಿದರು.

ಪ್ರಾಮಾಣಿಕ ಅಧಿಕಾರಿ ಬರುವವರೆಗೂ ತಾಲೂಕು ಕಚೇರಿ ಒಳಗಡೆ ಯಾರನ್ನೂ ಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಉದ್ದಟತನ ಮುಂದುವರಿದರೆ ಅವರನ್ನು ಕಂಬಕ್ಕೆ ಕಟ್ಟುತ್ತೇವೆ. ಈಗಾಗಲೇ ಪ್ರಭಾರ ಅಧಿಕಾರ ವಹಿಸಿಕೊಳ್ಳಲು ಬಂದಿರುವ ತಹಸೀಲ್ದಾರ್ ಮಂಜುನಾಥ್‌ಗೆ ಘೇರಾವ್ ಹಾಕುತ್ತೇವೆಂದು ಎಚ್ಚರಿಸಿದರು.

ಸಂಘದ ಜಿಲ್ಲಾಧ್ಯಕ್ಷ ದೇವರಾಜು, ಸಮತಾ ಸೈನಿಕ ದಳದ ಯುವ ಘಟಕದ ಅಧ್ಯಕ್ಷ ಜಿ.ಗೋವಿಂದಯ್ಯ, ದಲಿತ ಸೇನೆಯ ಜಿಲ್ಲಾಧ್ಯಕ್ಷ ಅಶೋಕ್, ತಾಲೂಕು ಕೆಡಿಪಿ ಸದಸ್ಯ ಕೋಟೆ ಕುಮಾರ್, ಕಾಂಗ್ರೆಸ್ ಮುಖಂಡ ನ್ಯಾಮತುಲ್ಲಾ, ಹೊಸದುರ್ಗ ಪ್ರಶಾಂತ್, ಕೋಟೆ ಪ್ರಕಾಶ್, ರಿಪಬ್ಲಿಕನ್ ಸೇನೆ ಜಿಲ್ಲಾಧ್ಯಕ್ಷ ಬೆಣಚುಕಲ್ ದೊಡ್ಡಿ ರುದ್ರೇಶ್, ರಾಮಸಾಗರ ಕೃಷ್ಣ, ಒಕ್ಕಲಿಗ ಸಂಘದ ಅಭಿಷೇಕ್, ಜಯ ಕರ್ನಾಟಕ ಕೋಟೆ ರಾಜು, ರೈತ ಸಂಘದ ಬಿ.ಎಂ.ಪ್ರಕಾಶ್, ಶಂಕರ್, ಗಜೇಂದ್ರ ಸಿಂಗ್, ಚೀಲೂರು ಕುಮಾರ್ ಮತ್ತಿತರರು ಭಾಗವಹಿಸಿದ್ದರು.22ಕೆಆರ್ ಎಂಎನ್ 11.ಜೆಪಿಜಿ

ಹಾರೋಹಳ್ಳಿ ತಾಲೂಕು ಕಚೇರಿ ಎದುರು ಪ್ರಗತಿಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.