ಸಾರಾಂಶ
ಪಟಾಕಿ ಮಾರಾಟಕ್ಕೆ ಬಾಲಕಾರ್ಮಿಕರ ನೇಮಿಸಿಕೊಂಡರೆ ಕಠಿಣ ಕ್ರಮ
ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯ ಪಟಾಕಿ ಅಂಗಡಿಗಳಲ್ಲಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಳ್ಳದಂತೆ ಅಧಿಕಾರಿಗಳಿಂದ ಜಾಗೃತಿ ಮೂಡಿಸಿ ಕರಪತ್ರ ಹಂಚಲಾಯಿತು.ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಯಾದಗಿರಿ ವತಿಯಿಂದ ನಡೆದ ಕಾರ್ಯಾಚರಣೆಯಲ್ಲಿ ಮಾತನಾಡಿದ ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ರಿಯಾಜ್ ಪಟೇಲ್ ವರ್ಕನಳ್ಳಿ, ಪಟಾಕಿ ಮಾರುವ ಪ್ರಕ್ರಿಯೆಯಲ್ಲಿ 18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ಹಾಗೂ ಸದರಿ ವಯಸ್ಸಿನ ಮಕ್ಕಳನ್ನು ಮಳಿಗೆ ಒಳಗೆ ಬಿಟ್ಟುಕೊಳ್ಳದಂತೆ ತಾಕೀತು ಮಾಡಿದರು.
ಬಾಲಕಾರ್ಮಿಕ ಹಾಗೂ ಕಿಶೋರಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಹಾಗೂ ತಿದ್ದುಪಡಿ 2016ರ ಅನ್ವಯ ಬಾಲಕಾರ್ಮಿಕ ಪದ್ಧತಿ ಅಪರಾಧ. ಮಕ್ಕಳನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳುವುದು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದನ್ನು ಮೀರಿ ಕೆಲಸಕ್ಕೆ ನೇಮಿಸಿಕೊಂಡರೆ ಅಂಗಡಿ ಮಾಲೀಕರಿಗೆ ₹20ರಿಂದ ₹50 ಸಾವಿರ ದಂಡ ಮತ್ತು 6 ತಿಂಗಳಿಂದ 2 ವರ್ಷದವರೆಗೆ ಜೈಲು ಶಿಕ್ಷೆ ಅಥವಾ ಎರಡನ್ನು ಸಹ ವಿಧಿಸಲಾಗುವುದು ಎಂದು ಎಚ್ಚರಿಸಿದರು.