ಸಾರಾಂಶ
ದಾಬಸ್‌ಪೇಟೆ: ಮಕ್ಕಳು ಯಾವುದೇ ವಿಚಾರವನ್ನು ತಿಳಿದುಕೊಳ್ಳುವ ಮುನ್ನ ಪ್ರಶ್ನಿಸಿ ಪರಾಮರ್ಶಿಸಿ ನಂತರ ವಿಚಾರ ಅರ್ಥೈಸಿಕೊಳ್ಳಬೇಕು ಎಂದು ದಾಬಸ್‌ಪೇಟೆ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕ ರಾಜು ತಿಳಿಸಿದರು.
ಪಟ್ಟಣದ ಎಸ್.ಆರ್.ಎಸ್ ವಿದ್ಯಾನಿಕೇತನ ಶಾಲೆಯಲ್ಲಿ ಜ್ಞಾನ ಸಂಗಮ ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಮಾದಕ ವಸ್ತುಗಳ ಬಳಕೆ ಮತ್ತು ಪೂರೈಕೆ ವಿರುದ್ಧ ವಿಶೇಷ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಸರ್ಕಾರ ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಪೋಸ್ಕೋ ಕಾಯ್ದೆ ಜಾರಿಗೆ ತಂದಿದ್ದು ದೌರ್ಜನ್ಯವೆಸಗುವ ವ್ಯಕ್ತಿಗೆ ಕಠಿಣ ಶಿಕ್ಷೆ ನೀಡಿ ಮಕ್ಕಳ ಹಕ್ಕುಗಳನ್ನು ಕಾಪಾಡಲಾಗುತ್ತದೆ. ಜೊತೆಗೆ ಮಗುವಿನ ಹೆಸರಿನ ಗೌಪ್ಯತೆ ಕಾಪಾಡಲಾಗುತ್ತದೆ. ಹಾಗಾಗಿ ಯಾವುದೇ ಮಗು ತನ್ನ ಮೇಲೆ ದೌರ್ಜನ್ಯವಾದಾಗ ಪೋಷಕರಿಗೆ ಇಲ್ಲವೇ ಶಿಕ್ಷಕರಿಗೆ ತಿಳಿಸಿ ದೂರು ದಾಖಲಿಸಿ ಎಂದರು.
ಸಬ್ ಇನ್ಸ್ ಪೆಕ್ಟರ್ ವಿಜಯಕುಮಾರಿ ಮಾತನಾಡಿ, ಹೆಣ್ಣು ಮಕ್ಕಳಿಗೆ ಪರಿಚಿತರು, ನೆಂಟರಿಷ್ಟರು, ಸುತ್ತಮುತ್ತಲಲ್ಲೇ ಲೈಂಗಿಕ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಹಾಗಾಗಿ ಅವರಿಗೆ ಒಳ್ಳೆಯ ಹಾಗೂ ಕೆಟ್ಟ ಭಾವನೆಯ ಸ್ಪರ್ಶದ ಬಗ್ಗೆ ಶಿಕ್ಷಕಿಯರು ತಿಳಿಸಿಕೊಡಬೇಕು. ಇದರಿಂದ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯವಾದಾಗ ಪ್ರಶ್ನಿಸಿ ದೂರು ನೀಡಲು ಮುಂದಾಗುತ್ತಾರೆ ಎಂದರು.ಇದೇ ಸಂದರ್ಭದಲ್ಲಿ ಶಾಲೆಯ ಆಡಳಿತಾಧಿಕಾರಿ ರಿಶ್ವಂತ್ ರಾಮ್, ಜ್ಞಾನ ಸಂಗಮ ಕಾಲೇಜಿನ ಮುಖ್ಯಸ್ಥ ಕುಮಾರಸ್ವಾಮಿ, ಮುಖ್ಯ ಶಿಕ್ಷಕಿ ಮೀನಾಕುಮಾರಿ ಇತರರು ಉಪಸ್ಥಿತರಿದ್ದರು.
ಪೋಟೋ 1 :ದಾಬಸ್‌ಪೇಟೆಯಲ್ಲಿ ಜ್ಞಾನ ಸಂಗಮ ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಮಾದಕ ವಸ್ತುಗಳ ಬಳಕೆ ಮತ್ತು ಪೂರೈಕೆ ವಿರುದ್ದ ವಿಶೇಷ ಅಭಿಯಾನದಲ್ಲಿ ಪೊಲೀಸರು ಭಾಗವಹಿಸಿರುವುದು